ಬಳ್ಳಾರಿ,ಜ.17- ಟ್ರಾಫಿಕ್ ನಿಯಮಗಳು ಶಿಕ್ಷೆಗೆ ಮಾತ್ರವಲ್ಲ, ನಮ್ಮ ಅಮೂಲ್ಯ ಜೀವ ರಕ್ಷಣೆಗೆ ಅತ್ಯಂತ ಅಗತ್ಯವಾಗಿವೆ ಎಂದು ಬಳ್ಳಾರಿ ಟ್ರಾಫಿಕ್ ಪೊಲೀಸ್ ಇಲಾಖೆಯ ಸಹಾಯಕ ಉಪನಿರೀಕ್ಷಕ ಶಫೀ ಉಲ್ಲಾ ಅವರು ಹೇಳಿದರು.
ಟ್ರಾಫಿಕ್ ಪೊಲೀಸ್ ಇಲಾಖೆ ಹಾಗೂ ಶ್ರೀ ವಾಸವಿ ವಿದ್ಯಾಲಯದ ಸಹಯೋಗದಲ್ಲಿ ವಿದ್ಯಾರ್ಥಿಗಳಲ್ಲಿ ಟ್ರಾಫಿಕ್ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಾಸವಿ ಶಾಲೆಯಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶೇಷ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧರಿಸುವುದು ಕಾನೂನು ಬಾಧ್ಯತೆಯಷ್ಟೇ ಅಲ್ಲ, ಕುಟುಂಬದ ಭವಿಷ್ಯವನ್ನು ರಕ್ಷಿಸುವ ಕರ್ತವ್ಯವೂ ಆಗಿದೆ ಎಂದರು.
ಶಾಲಾ ಮುಖ್ಯ ಗುರುಗಳಾದ ವೀರೇಶ್.ಯು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲೇ ಟ್ರಾಫಿಕ್ ರೂಲ್ಸ್ ನ ಶಿಸ್ತು ಕಲಿತರೆ, ಮುಂದಿನ ದಿನಗಳಲ್ಲಿ ಸುರಕ್ಷಿತ ಮತ್ತು ಜವಾಬ್ದಾರಿಯುತ ನಾಗರಿಕರನ್ನು ನಿರ್ಮಿಸಲು ಸಾಧ್ಯ. ಶಾಲೆಯಲ್ಲಿ ಬೆಳೆದ ಶಿಸ್ತು ಸಮಾಜದ ಸುರಕ್ಷತೆಗೆ ಭದ್ರವಾದ ಅಡಿಪಾಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಭಾಗವಹಿಸಿ, ರಸ್ತೆ ಸುರಕ್ಷತೆ, ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧಾರಣೆ, ಅಪ್ರಾಪ್ತ ವಯಸ್ಸಿನಲ್ಲಿ ವಾಹನ ಚಾಲನೆ ಮಾಡದಿರುವ ಮಹತ್ವ, ಮೊಬೈಲ್ ಬಳಸಿ ವಾಹನ ಚಲಾಯಿಸುವ ಅಪಾಯಗಳು ಹಾಗೂ ಟ್ರಾಫಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ತಿಳಿಸಿದರು.
ಇದೇ ವೇಳೆ ನೈಜ ಉದಾಹರಣೆಗಳ ಮೂಲಕ ರಸ್ತೆ ಅಪಘಾತಗಳ ದುಷ್ಪರಿಣಾಮಗಳನ್ನು ವಿವರಿಸಲಾಗಿದ್ದು, ವಿದ್ಯಾರ್ಥಿಗಳು ಟ್ರಾಫಿಕ್ ನಿಯಮಗಳನ್ನು ಸದಾ ಪಾಲಿಸುವುದಾಗಿ ಪ್ರತಿಜ್ಞೆ ಕೈಗೊಂಡರು.
ಕಾರ್ಯಕ್ರಮದಲ್ಲಿ ಒಂದು ಕ್ಷಣದ ನಿರ್ಲಕ್ಷö್ಯ ಜೀವಿತಕಾಲದ ಪಶ್ಚಾತ್ತಾಪಕ್ಕೆ ಕಾರಣವಾಗಬಹುದು. ಟ್ರಾಫಿಕ್ ನಿಯಮಗಳ ಪಾಲನೆಯೇ ಸುರಕ್ಷಿತ ಭವಿಷ್ಯದ ದಾರಿ ಎಂಬ ಸಂದೇಶವನ್ನು ಹೊಂದಿರುವ ವಿಡೀಯೋ ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಟ್ರಾಫಿಕ್ ನಿಯಮಗಳ ಪಾಲನೆಯೇ ಸುರಕ್ಷಿತ ಭವಿಷ್ಯದ ದಾರಿ: ಶಫೀ ಉಲ್ಲಾ


