ಬಳ್ಳಾರಿ: 40 ಗಂಟೆಗಳ ಮಧ್ಯಸ್ಥಿಕೆ ತರಬೇತಿ ಶಿಬಿರಕ್ಕೆ ನ್ಯಾ.ಕೆ.ಜಿ ಶಾಂತಿ ಚಾಲನೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಧ್ಯಸ್ಥಿಕೆದಾರರ ಪಾತ್ರ ಮಹತ್ತರ

MK HasiruKranti
ಬಳ್ಳಾರಿ: 40 ಗಂಟೆಗಳ ಮಧ್ಯಸ್ಥಿಕೆ ತರಬೇತಿ ಶಿಬಿರಕ್ಕೆ ನ್ಯಾ.ಕೆ.ಜಿ ಶಾಂತಿ ಚಾಲನೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಧ್ಯಸ್ಥಿಕೆದಾರರ ಪಾತ್ರ ಮಹತ್ತರ
WhatsApp Group Join Now
Telegram Group Join Now
ಬಳ್ಳಾರಿ,ಮಾ.26:
ನ್ಯಾಯಾಲಯಗಳಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಪ್ರಕರಣಗಳ ಹೊರೆ ತಗ್ಗಿಸಲು ಮತ್ತು ಸಾರ್ವಜನಿಕರಿಗೆ ತ್ವರಿತ ನ್ಯಾಯ ಒದಗಿಸಲು ‘ಮಧ್ಯಸ್ಥಿಕೆ’ ಪ್ರಕ್ರಿಯೆಯು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಕೆ.ಜಿ.ಶಾಂತಿ ಅವರು ಹೇಳಿದರು.
ಕರ್ನಾಟಕ ಮಧ್ಯಸ್ಥಿಕೆ ಕೇಂದ್ರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರ ಸಂಯುಕ್ತಾಶ್ರಯದಲ್ಲಿ ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಮಧ್ಯಸ್ಥಿಕೆದಾರರಿಗೆ ಮಾ.25 ರಿಂದ 29 ರ ವರೆಗೆ ನಗರದ ತಾಳೂರು ರಸ್ತೆಯ ಹೊಸ ನ್ಯಾಯಾಲಯ ಸಭಾಂಗಣದಲ್ಲಿ ಏರ್ಪಡಿಸಿದ್ದ 40 ಗಂಟೆಗಳ ಮಧ್ಯಸ್ಥಿಕೆ ತರಬೇತಿ ಶಿಬಿರಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಸಾಂಪ್ರದಾಯಿಕ ನ್ಯಾಯಾಲಯದ ಪ್ರಕ್ರಿಯೆಗಿಂತ ಮಧ್ಯಸ್ಥಿಕೆಯು ಭಿನ್ನವಾಗಿದೆ. ಇಲ್ಲಿ ಮಧ್ಯಸ್ಥಿಕೆದಾರರು ಕೇವಲ ಸಮಸ್ಯೆಯನ್ನು ಆಲಿಸದೆ, ಉಭಯ ಪಕ್ಷಗಳ ನಡುವೆ ಸೌಹಾರ್ದಯುತ ವಾತಾವರಣ ನಿರ್ಮಿಸಿ ಸಮಸ್ಯೆ ಇತ್ಯರ್ಥಕ್ಕೆ ಅನುವು ಮಾಡಿಕೊಡುತ್ತಾರೆ. ಈ 5 ದಿನಗಳ ತರಬೇತಿಯು ಕೇವಲ ಕಾನೂನು ತಿಳುವಳಿಕೆಯನ್ನಷ್ಟೇ ನೀಡದೆ, ಮಧ್ಯಸ್ಥಿಕೆದಾರರ ಶಾಂತಿಯುತ ಚಿಂತನೆಯನ್ನು ವೃದ್ಧಿಸಿ ಅವರ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಧ್ಯಸ್ಥಿಕೆಯಿಂದ ಪ್ರಕರಣಗಳು ಶಾಶ್ವತವಾಗಿ ಇತ್ಯರ್ಥಗೊಳ್ಳುತ್ತವೆ ಮತ್ತು ಮೇಲ್ಮನವಿ ಸಲ್ಲಿಸುವ ಅಗತ್ಯವಿರುವುದಿಲ್ಲ. ‘ನಾನು’ ಎಂಬ ಅಹಂಕಾರದಿAದಲೇ ಸಮಾಜದಲ್ಲಿ ಹೆಚ್ಚಿನ ವಿವಾದಗಳು ಹುಟ್ಟಿಕೊಳ್ಳುತ್ತವೆ. ಈ ಅಹಂಕಾರವನ್ನು ಬಿಟ್ಟು ‘ನಾವು’ ಎಂಬ ಭಾವನೆಯೊಂದಿಗೆ ಕೆಲಸ ಮಾಡಿದರೆ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಒತ್ತಡ ಕಡಿಮೆಯಾಗಿ ಸಮಾಜದಲ್ಲಿ ನೆಮ್ಮದಿ ನೆಲೆಸಲು ಸಾಧ್ಯ ಎಂದು ನ್ಯಾಯಾಧೀಶರು ಕಿವಿಮಾತು ಹೇಳಿದರು.
ಹಿರಿಯ ತರಬೇತುದಾರರಾದ ಬ್ರಿಂದಾ ನಂದಕುಮಾರ್ ಅವರು ಮಾತನಾಡಿ, ಇಂದಿನ ವೇಗದ ಯುಗದಲ್ಲಿ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ಸೌಹಾರ್ದಯುತವಾಗಿ ವಿವಾದಗಳನ್ನು ಬಗೆಹರಿಸಿಕೊಳ್ಳಲು ‘ಮಧ್ಯಸ್ಥಿಕೆ’ ಅತ್ಯಂತ ಅವಶ್ಯಕ. ಮಧ್ಯಸ್ಥಿಕೆ ಎಂಬುದು ಕೇವಲ ವಕೀಲರಿಗೆ ಅಥವಾ ಮಧ್ಯಸ್ಥಿಕೆದಾರರಿಗೆ ಸೀಮಿತವಾದ ತಾಂತ್ರಿಕ ಪ್ರಕ್ರಿಯೆಯಲ್ಲ. ಇದೊಂದು ಜೀವನ ಕೌಶಲ್ಯ. ಇದನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಮತ್ತು ಉತ್ತಮ ಬಾಂಧವ್ಯ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಹಳೆಯ ಕಾಲದಂತೆ ದಶಕಗಳ ಕಾಲ ನ್ಯಾಯಾಲಯದ ಮೊರೆ ಹೋಗಿ ಕಾಯುವ ತಾಳ್ಮೆ ಇಂದಿನ ಪೀಳಿಗೆಗೆ ಇಲ್ಲ. ಹಾಗಾಗಿ, ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕಿದೆ ಮತ್ತು ಮಧ್ಯಸ್ಥಿಕೆಯಂತಹ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕಿದೆ. ಬಳ್ಳಾರಿಗೆ ಇದು ತಮ್ಮ ಮೊದಲ ಭೇಟಿಯಾಗಿದ್ದು, ಇಲ್ಲಿನ ಕಾನೂನು ಆಸಕ್ತರೊಂದಿಗೆ ಸಂವಹನ ನಡೆಸುತ್ತಿರುವುದು ಸಂತಸ ತಂದಿದೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಮ್ ಬ್ರಹ್ಮಂ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ, ‘ಮಧ್ಯಸ್ಥಿಕೆ’ ಪ್ರಕ್ರಿಯೆಯು ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸುವಲ್ಲಿ ಪ್ರಬಲ ಅಸ್ತçವಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದರು.
ಪ್ರಪಂಚದ ದೊಡ್ಡ ದೊಡ್ಡ ಯುದ್ಧಗಳನ್ನೇ ಮಧ್ಯಸ್ಥಿಕೆಯ ಮೂಲಕ ನಿಲ್ಲಿಸಲು ಸಾಧ್ಯವಿರುವಾಗ, ಇಬ್ಬರು ಕಕ್ಷಿದಾರರ ನಡುವಿನ ವಿವಾದಗಳನ್ನು ಬಗೆಹರಿಸುವುದು ಅಸಾಧ್ಯವಲ್ಲ. ಪ್ರಸ್ತುತ ನ್ಯಾಯಾಲಯಗಳಿಂದ ಮಧ್ಯಸ್ಥಿಕೆಗೆ ಬರುವ ಪ್ರಕರಣಗಳಲ್ಲಿ ಸುಮಾರು ಶೇ.95 ಪ್ರಕರಣಗಳು ಸರಿಯಾದ ಸಂಧಾನವಾಗದೆ ವಾಪಸ್ ಹೋಗುತ್ತಿವೆ. ಈ ಸ್ಥಿತಿಯನ್ನು ಬದಲಾಯಿಸಿ, ತರಬೇತಿಯ ನಂತರ ವಕೀಲರು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಿದೆ ಎಂದರು.
ಈ ತರಬೇತಿ ಕಾರ್ಯಾಗಾರವು ವಕೀಲರಿಗೆ ಹೊಸ ದೃಷ್ಟಿಕೋನವನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಕರಣಗಳು ನ್ಯಾಯಾಲಯದ ಹೊರಗಡೆಯೇ ಸುಗಮವಾಗಿ ಇತ್ಯರ್ಥವಾಗಲಿವೆ ಎಂಬ ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಸೇರಿದಂತೆ ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ನೂತನವಾಗಿ ಆಯ್ಕೆಯಾದ ಮಧ್ಯಸ್ಥಿಕೆದಾರರು, ವಕೀಲರು ಮತ್ತು ನ್ಯಾಯಾಂಗ ಅಧಿಕಾರಿಗಳು ಉಪಸ್ಥಿತರಿದ್ದರು.
ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ತ್ರೀವೇಣಿ ಪತ್ತಾರ್ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
WhatsApp Group Join Now
Telegram Group Join Now
Share This Article