ಬೆಳಗಾವಿ,27: ಮೇ 7ರಂದು ನಡೆಯಲಿರುವ ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ನನ್ನನ್ನು ಆಶೀರ್ವದಿಸಬೇಕು ಎಂದು ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಮತದಾರರಲ್ಲಿ ಮನವಿ ಮಾಡಿದರು.
ನಿಪ್ಪಾಣಿಯ ಕರದಗಾ, ಹಾಗೂ ಭೋಜ ಜಿಪಂ ವ್ಯಾಪ್ತಿಯಲ್ಲಿ ಹಮ್ಮಿಕೊಂಡ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷ 2013ರಲ್ಲಿ ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಪ್ರಣಾಳಿಕೆಯಲ್ಲಿ 165 ಭರವಸೆಗಳನ್ನು ನೀಡಿತು 158 ಭರವಸೆಗಳನ್ನು ಈಡೇರಿಸಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ಶೂ ಭಾಗ್ಯ, ರೈತರ ಸಾಲ ಮನ್ನಾ, ಇಂದಿರಾ ಕ್ಯಾಂಟೀನ್ ಹಾಗೂ ವಿದ್ಯಾಸಿರಿ ಯೋಜನೆಗಳನ್ನು ಈಡೇರಿಸಿದೆ. ಅಲ್ಲದೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಒಂಬತ್ತು ತಿಂಗಳ ಒಳಗೆ ಐದು ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿದೆ ಎಂದರು.
ಬಡವರ ಪರವಾದ ಕಾರ‍್ಯಕ್ರಮ ನೀಡುವುದು ಕಾಂಗ್ರೆಸ್ ಪಕ್ಷ ಮಾತ್ರ. ಇದನ್ನು ಮತದಾರರು ಬೆಂಬಲಿಸುವ ಮೂಲಕ ಪಕ್ಷ ಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕು. ಇಂದಿರಾ ಗಾಂಧಿ ಅವರಿಂದ ಹಿಡಿದು ಸಿದ್ದರಾಮಯ್ಯವರೆಗೆ ಕಾಂಗ್ರೆಸ್ ಪಕ್ಷದ ಎಲ್ಲರೂ ಬಡವರ ಪರ ಕೆಲಸ ಮಾಡಿದ್ದಾರೆ. “ನಮ್ಮ ಸರ್ಕಾರ ಬಡವರ ಪರವಾಗಿದ್ದು, ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದೆ.
ಕೈ ಯೋಜನೆಯಿಂದ ಪ್ರತಿಯೊಂದು ಕುಟುಂಬಗಳಿಗೆ ನಾಲ್ಕರಿಂದ ಐದು ಸಾವಿರ ಹಣ ಉಳಿತಾಯವಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಿಂದ ಪ್ರತಿಯೊಂದು ಮನೆಯ ಗೃಹಿಣಿಯರು 2000 ಪಡೆದುಕೊಳ್ಳುತ್ತಿದ್ದಾರೆ. ವಿಧ್ಯುತ್ ಅನ್ನು ಉಚಿತವಾಗಿ ಪಡೆದುಕೊಳ್ಳುತ್ತಿದ್ದಾರೆ. ಶಕ್ತಿ ಯೋಜನೆಯಡಿ ಉಚಿತವಾಗಿ ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ. ಅನ್ನಭಾಗ್ಯದಲ್ಲಿ 5 ಕೆಜಿ ಅಕ್ಕಿ 5 ಕೆ.ಜಿ ಗೆ ಹಣವನ್ನು ಪಡೆಯುತ್ತಿದ್ದಾರೆ. ಆದ್ದರಿಂದ ಮತದಾರರು ಕ್ಷೇತ್ರದ ಅಭಿವೃದ್ಧಿಗೆ ನನಗೆ ಮತ ನೀಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ಸಮಸ್ಯೆಗಳ ನಿವಾರಣೆಗೆ ನನಗೆ ಮತ ನೀಡಿ: ಈ ಭಾರಿ ಚಿಕ್ಕೋಡಿ ಸಮಗ್ರ ಅಭಿವೃದ್ಧಿಗೆ ನನಗೆ ಬೆಂಬಲಿ ನೀಡಿ, ನಮ್ಮ ತಂದೆಯವರಾದ ಸತೀಶ್ ಜಾರಕಿಹೊಳಿ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದ ಅವರು, ನಾನು ಕೇವಲ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರ ಪುತ್ರಿ ಅಲ್ಲ ನಮ್ಮ ನಿಪ್ಪಾಣಿ ಮತಕ್ಷೇತ್ರದ ಮನೆ ಮಗಳು. ಹೀಗಾಗಿ ಈ ಭಾರಿ ಸಮಸ್ಯೆಗಳ ನಿವಾರಣೆಗೆ ಹಾಗೂ ಕ್ಷೇತ್ರ ಅಭಿವೃದ್ಧಿ ಮಾಡಲು ನನಗೆ ವೋಟ ನೀಡಬೇಕು ಎಂದು ಮನವಿ ಮಾಡಿದರು.
ತಂದೆ ಸತೀಶ ಜಾರಕಿಹೊಳಿಯವರೇ ನನಗೆ ಆದರ್ಶ: ರಾಜಕಾರಣದ ಮೂಲಕ ಸಮಾಜ ಸೇವೆ ಮಾಡುವುದರ ಜೊತೆಗೆ ಶಿಕ್ಷಣ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆಗೈಯಲು ಬಯಸುವ ಯುವಕರಿಗೆ ತಮ್ಮ ಫೌಂಡೇಷನ್ ಮೂಲಕ ಸಹಾಯ ಸಹಕಾರ ನೀಡುವ ನಮ್ಮ ತಂದೆ ಸತೀಶ ಜಾರಕಿಹೊಳಿ ಅವರು ನನಗೆ ಆದರ್ಶ. ಅವರ ದಾರಿಯಲ್ಲೇ ನಡೆದು ಮತಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ನಿಮ್ಮ ಮನೆಯ ಮಗಳಾದ ನನಗೂ ಸಹ ನಮ್ಮ ತಂದೆಯವರಿಗೆ ನೀಡಿದ ಬೆಂಬಲ, ಅಭಿಮಾನವನ್ನು ನೀಡಿ ಎಂದರು.
ಇದಕ್ಕೂ ಮೊದಲು ಸಂಗೊಳ್ಳಿ ರಾಯಣ್ಣ, ಡಾ. ಬಿ.ಆರ್. ಅಂಬೇಡ್ಕರ್, ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರು ಮಾಲರ್ಪಣೆ ಮಾಡಿದರು. ನಂತರ ಕರದಗಾ ಹಾಗೂ ಭೋಜ ಜಿಪಂ ವ್ಯಾಪ್ತಿಯ ಗ್ರಾಮಗಳಿಗೆ ಆಗಮಿಸಿದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಗ್ರಾಮದ ಮಹಿಳೆಐರು ಆರತಿ ಬೆಳಗಿ ಹೂಮಾಲೆ ಹಾಕುವ ಮೂಲಕ ಅದ್ಧೂರಿ ಸ್ವಾಗತ ಕೋರಿದರು.
ಈ ವೇಳೆ ಮಾಜಿ ಶಾಸಕ ಕಾಕಾಸಾಹೇಬ್ ಪಾಟೀಲ, ಮಾಜಿ ಸಚಿವ ವೀರಕುಮಾರ ಪಾಟೀಲ, ಬೂಡಾ ಅಧ್ಯಕ್ಷ ಲಕ್ಷಣರಾವ್ ಚಿಂಗಳೆ, ಸಚೀನ ಕೇಸ್ತಿ, ಲಕ್ಷಣ ಇಂದಲಕರ, ಡಾ. ಮಾಣೆ, ಶಂಕರ ಪಾಟೀಲ, ಸುಪ್ರೀಯಾ ಪಾಟೀಲ, ಬಸವರಾಜ ಪಾಟೀಲ, ರಾಜು ವಡ್ಡರ, ಪಂಕಜ ಪಾಟೀಲ, ರಾಜೇಶ ಕದಂ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಿವಿಧ ಗ್ರಾಮದ ಮಹಿಳೆಯರು ಇದ್ದರು.