ಬೆಂಗಳೂರು: ನವದೆಹಲಿಯಲ್ಲಿ ನಡೆದ ಕೇಂದ್ರ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಅವರು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿ ಸರ್ಕಾರಕ್ಕೆ ತಮ್ಮ ಪಕ್ಷದ ಸಂಪೂರ್ಣ ಬೆಂಬಲ ನೀಡಿದ್ದಾರೆ.
ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿರುವ ದೇವೇಗೌಡ, ಈ ಲೋಕಸಭಾ ಚುನಾವಣೆಯು ಕುತೂಹಲಕಾರಿ ಫಲಿತಾಂಶ ನೀಡಿದ್ದು, ದೇಶದ ಪ್ರಜಾಪ್ರಭುತ್ವದ ಕಂಪನ್ನು ಸಾಬೀತುಪಡಿಸಿದೆ. ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನು ಅಪಖ್ಯಾತಿಗೊಳಿಸಲು ಕಾಂಗ್ರೆಸ್‍ನ ಕೊಳಕು ಪ್ರಚಾರವನ್ನು ಈ ಫಲಿತಾಂಶ ಬಹಿರಂಗಪಡಿಸುತ್ತದೆ. ದೇಶದ ಜನರು ಅವರ ದುರಹಂಕಾರಕ್ಕೆ ಪಾಠ ಕಲಿಸಿದ್ದಾರೆಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಈ ಬಾರಿಯ ಚುನಾವಣೆಯನ್ನು ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಭಾವಿಸುತ್ತಿದೆ. ಆದರೆ ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಂತಹ ಅವರೇ ನಡೆಸುತ್ತಿರುವ ರಾಜ್ಯಗಳಲ್ಲಿ ಅವರು ಸೋತಿದ್ದಾರೆ. ಅವರು ಇತರ ಕೆಲವು ರಾಜ್ಯಗಳಲ್ಲಿ ತುಲನಾತ್ಮಕವಾಗಿ ಉತ್ತಮ ಸಾಧನೆ ಮಾಡಿದ್ದಾರೆ. ಅವರ ಮಿತ್ರರು ಎಷ್ಟು ದಿನ ಸಹಿಸಿಕೊಳ್ಳುತ್ತಾರೆಂದು ನೋಡೋಣ ಎಂದು ‘ಇಂಡಿಯಾ ಕೂಟ’ದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ.