ಮಿರ್ಜಾಪುರ: ”ಇಂಡಿಯಾ(I.N.D.I.A) ಮೈತ್ರಿಕೂಟ ಕೋಮುವಾದಿ ಮತ್ತು ಜಾತಿವಾದಿಯಾಗಿದೆ. ಮುಸ್ಲಿಮರಿಗೆ ಮೀಸಲಾತಿ ನೀಡಲು ಅವರು ಸಂವಿಧಾನ ಬದಲಿಸಲು ನಿರ್ಧರಿಸಿದ್ದಾರೆ” ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಟೀಕಿಸಿದರು.
ಮಿರ್ಜಾಪುರ ಲೋಕಸಭಾ ಕ್ಷೇತ್ರದಿಂದ ಎನ್‌ಡಿಎ ಮೈತ್ರಿಕೂಟದ ಪಾಲುದಾರ ಅಪ್ನಾ ದಳದ ಅಭ್ಯರ್ಥಿ ಅನುಪ್ರಿಯಾ ಪಟೇಲ್ ಮತ್ತು ರಾಬರ್ಟ್ಸ್‌ಗಂಜ್ ಕ್ಷೇತ್ರದ ಅಭ್ಯರ್ಥಿ ರಿಂಕಿ ಕೋಲ್ ಅವರ ಪರವಾಗಿ ಭಾನುವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
“ಇಂಡಿಯಾ ಮೈತ್ರಿಯ ನಾಯಕರು ಕಟ್ಟಾ ಕೋಮುವಾದಿ, ಜಾತಿವಾದಿ ಮತ್ತು ಕುಟುಂಬವಾದಿಗಳಾಗಿದ್ದಾರೆ. ಕೇಂದ್ರದಲ್ಲಿ ಅವರ ಸರ್ಕಾರ ರಚನೆಯಾದರೆ ಇದೇ ತತ್ವಗಳ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಸಮಾಜವಾದಿ ಪಕ್ಷವು ಯಾದವ ಸಮುದಾಯದ ಜನರ ಪ್ರತಿಭೆಯನ್ನು ಗುರುತಿಸುವುದರಲ್ಲಿ ನಿರ್ಲಕ್ಷ್ಯವೆಸಗಿದೆ. ಮುಲಾಯಂ ಸಿಂಗ್ ಯಾದವ್ ಅವರ ಕುಟುಂಬದ ಸದಸ್ಯರಿಗೆ ಮಾತ್ರ ಟಿಕೆಟ್ ನೀಡಿದ್ದಾರೆ” ಎಂದು ದೂರಿದರು.
“ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಕಾಂಗ್ರೆಸ್‌ನ ಇಂಡಿಯಾ ಮೈತ್ರಿಕೂಟದ ಗೆಲುವಿಗಾಗಿ ಪಾಕಿಸ್ತಾನದಲ್ಲಿ ಪ್ರಾರ್ಥನೆ ಮಾಡಲಾಗುತ್ತಿದೆ. ಗಡಿಯಾಚೆಗಿನ ಜಿಹಾದಿಗಳು ಈ ಒಕ್ಕೂಟದವರನ್ನು ಬೆಂಬಲಿಸುತ್ತಿದ್ದಾರೆ. ಎಸ್‌ಪಿ ಮತ್ತು ಕಾಂಗ್ರೆಸ್ ‘ವೋಟ್ ಜಿಹಾದ್’ಗೆ ಮನವಿ ಮಾಡುತ್ತಿವೆ” ಎಂದರು.