ನವದೆಹಲಿ,16: ಸ್ಲೋವಾಕಿಯಾ ಪ್ರಧಾನಿ ರಾಬರ್ಟ್ ಫಿಕೋ ಮೇಲೆ ಗುಂಡಿನ ದಾಳಿ ನಡೆದಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜಧಾನಿ ಬ್ರಾಟಿಸ್ಲಾವಾದ ಈಶಾನ್ಯಕ್ಕೆ ಸುಮಾರು 150 ಕಿಲೋಮೀಟರ್ ದೂರದಲ್ಲಿರುವ ಹ್ಯಾಂಡ್ಲೋವಾ ನಗರದಲ್ಲಿ ಈ ಘಟನೆ ನಡೆದಿದೆ. ಶಂಕಿತ ಆರೋಪಿಯನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಮಾಧ್ಯಮ ವರದಿಗಳ ಪ್ರಕಾರ, ರಷ್ಯಾದ ಪರ ಪ್ರಧಾನಿ ಅವರು ಕ್ಯಾಬಿನೆಟ್ ಸಭೆ ನಡೆಸುತ್ತಿದ್ದ ಹೌಸ್ ಆಫ್ ಕಲ್ಚರ್ ಹೊರಗೆ ಗುಂಡಿನ ದಾಳಿ ನಡೆದಿದೆ. ಪಿಎಂ ಫಿಕೋ ಹೌಸ್‌ನ ಹೊರಗೆ ಜನರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಗುಂಡಿನ ದಾಳಿ ನಡೆದಿದ್ದು ಇದರ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಗುಂಡು ತಗುಲಿ ಗಾಯಗೊಂಡಿರುವ ಪ್ರಧಾನಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳದಲ್ಲಿದ್ದ ಪತ್ರಕರ್ತರ ಪ್ರಕಾರ, ಹಲವಾರು ಗುಂಡಿನ ಶಬ್ದಗಳು ಕೇಳಿಬಂದವು. ಗುಂಡು ಹಾರಿಸಿದ ಆರೋಪಿಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕ್ರೂರ ದಾಳಿಯಿಂದ ಆಘಾತಕ್ಕೊಳಗಾಗಿದ್ದೇನೆ ಎಂದು ಸ್ಲೋವಾಕಿಯಾದ ಅಧ್ಯಕ್ಷ ಜುಝಾನಾ ಸಪುಟೋವಾ ಹೇಳಿದ್ದಾರೆ

 
		 
		 
		
