ಬೆಂಗಳೂರು,13: ಜೂನ್ 3 ರಂದು ನಡೆಯಲಿರುವ ಪರಿಷತ್ತಿನ ಆರು ಸ್ಥಾನಗಳ (ತಲಾ ಮೂರು ಪದವೀಧರ ಮತ್ತು ಶಿಕ್ಷಕರ ಕ್ಷೇತ್ರ) ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿರುವ ಕಾಂಗ್ರೆಸ್, ಲೋಕಸಭೆ ಚುನಾವಣೆಗೆ ಹೂಡಿದ್ದ ತಂತ್ರಗಳನ್ನೇ ಅನುಸರಿಸಲು ಮುಂದಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಪಕ್ಷದ ನಾಯಕತ್ವವು ತಮ್ಮ ಸಂಪುಟ ಸಹೋದ್ಯೋಗಿಗಳು ಮತ್ತು ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿಕೂಟವನ್ನು ಎದುರಿಸಲು ಕಾರ್ಯತಂತ್ರ ರೂಪಿಸಲು ನಿರ್ಧರಿಸಿದೆ.
ನಾವು ನಮ್ಮ ಅಭ್ಯರ್ಥಿಗಳು, ಪಕ್ಷದ ಮುಖಂಡರು ಮತ್ತು ಪದಾಧಿಕಾರಿಗಳೊಂದಿಗೆ ಚರ್ಚಿಸಿದ್ದೇವೆ. ಈ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋರಾಡಲು ಸ್ಥಳೀಯ ಕಾಂಗ್ರೆಸ್ ಮುಖಂಡರು ಸೇರಿದಂತೆ ಇತರೆ ನಾಯಕರಿಗೆ ಸೂಚನೆ ನೀಡಲಾಗಿದೆ ಎಂದು ಡಿಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ಲೋಕಸಭೆ ಚುನಾವಣೆಗೆ ಹೂಡಿದ್ದ ತಂತ್ರವನ್ನೇ ಈ ಚುನಾವಣೆಯಲ್ಲು ಅನುಸರಿಸುತ್ತೇವೆಂದು ಇದೇ ವೇಳ ತಿಳಿಸಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರೆಯುತ್ತಿರುವ ಕುರಿತು ಮಾತನಾಡಿ, ಶಾಶ್ವತ ಮೈತ್ರಿ ಮಾಡಿಕೊಳ್ಳಲಿ ಅಥವಾ ವಿಲೀನವಾಗಲಿ. ನಮಗೆ ಯಾವುದೇ ಅಭ್ಯಂತರವಿಲ್ಲ. ಇದು ಅವರ ಆಂತರಿಕ ವಿಷಯ ಎಂದರು.
ಈಗಾಗಲೇ ಚುನಾವಣೆ ಕುರಿತು ಸಭೆ ನಡೆಸಿರುವ ನಾಯಕರು, ಪ್ರಚಾರದ ಸಮಯದಲ್ಲಿ ತೆಗೆದುಕೊಳ್ಳಬೇಕಾದ ವಿವಿಧ ವಿಷಯಗಳ ಕುರಿತೂ ಚರ್ಚೆ ನಡೆಸಿದ್ದು, ಹಿರಿಯ ನಾಯಕ ಹಾಗೂ ಎಂಎಲ್ಸಿ ಪುಟ್ಟಣ್ಣ ಅವರು ಚುನಾವಣೆಯಲ್ಲಿ ಗೆಲ್ಲಲು ಕೆಲವು ಸಲಹೆಗಳನ್ನು ನೀಡಿದ್ದಾರೆಂದು ಮೂಲಗಳು ತಿಳಿಸಿವೆ.
ಸಚಿವರಾದ ಕೆ.ಎನ್.ರಾಜಣ್ಣ, ಮಧು ಬಂಗಾರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ತನ್ವೀರ್ ಸೇಠ್, ಜಿ.ಸಿ.ಚಂದ್ರಶೇಖರ್, ಪಕ್ಷದ ಮುಖಂಡ ಬೇಲೂರು ಗೋಪಾಲ ಕೃಷ್ಣ ಕೂಡ ಸಭೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.
ಮರಿತಿಬ್ಬೇಗೌಡ (ದಕ್ಷಿಣ ಶಿಕ್ಷಕರ ಸ್ಥಾನ), ಡಿ.ಟಿ.ಶ್ರೀನಿವಾಸ್ (ಆಗ್ನೇಯ ಶಿಕ್ಷಕರ ಸ್ಥಾನ), ಡಾ.ಚಂದ್ರಶೇಖರ ಪಾಟೀಲ್ (ಈಶಾನ್ಯ ಪದವೀಧರರು), ಆಯನೂರು ಮಂಜುನಾಥ್ (ನೈಋತ್ಯ ಪದವೀಧರರು), ರಾಮೋಜಿಗೌಡ (ಬೆಂಗಳೂರು ಪದವೀಧರರು), ಮತ್ತು ಕೆ.ಕೆ.ಮಂಜುನಾಥ್ (ನೈಋತ್ಯ ಶಿಕ್ಷಕರ ಸ್ಥಾನ) ಅವರನ್ನು ಕಾಂಗ್ರೆಸ್ ನಾಮನಿರ್ದೇಶನ ಮಾಡಿದೆ.