ಬೆಂಗಳೂರು, ಮೇ 11: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಬಂಧನ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ.
ದೇವರಾಜೇಗೌಡರನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಪೊಲೀಸರು ಶುಕ್ರವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ, ದೇವರಾಜೇಗೌಡ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಏಪ್ರಿಲ್ 1ರಂದೇ ಎಫ್ಐಆರ್ ದಾಖಲಾಗಿತ್ತು. ಹಾಗಾದರೆ ಇಷ್ಟು ದಿನ ಪೊಲೀಸರು ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಇದೀಗ ಎದುರಾಗಿದೆ.
ಸಂತ್ರಸ್ತೆಯು ಏಪ್ರಿಲ್ 1ರಂದು ರಾತ್ರಿ 9.30ಕ್ಕೆ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ. ಸಂತ್ರಸ್ತೆಯು ಹಾಸನದ ತಣ್ಣೀರುಹಳ್ಳಿ, ನಿಲವಾಗಿಲು ರಸ್ತೆಯಲ್ಲಿರುವ 30*40 ಸೈಟ್ ಮಾರಾಟ ಮಾಡುವ ವಿಚಾರವಾಗಿ ಆರೋಪಿಯಾದ ಹೊಳೆನರಸೀಪುರ ತಾಲೋಕ್ ಕಾಮಸಮುದ್ರ ಗ್ರಾಮದ ದೇವರಾಜೇಗೌಡರವರ ಜತೆ ಈಗೆ, 10 ತಿಂಗಳ ಹಿಂದೆ ಪರಿಚಯವಾಗಿ ಅಗಾಗ ಪೋನ್ ಮಾಡುತ್ತಾ ಬಂದಿದ್ದಾರೆ. ಸಂತ್ರಸ್ತೆಯ ಪತಿ ಹೊಳೇನರಸೀಪುರದಲ್ಲಿ ಸೈಟ್ ಹೊಂದಿದ್ದಾರೆ. ಈ ಸೈಟ್ಗೆ ನಾನೇ ಮನೆ ಕಟ್ಟಿಸಿಕೊಡುತ್ತೇನೆ ಎಂದು ಸಂತ್ರಸ್ತೆಗೆ ಹೇಳಿದ್ದ ದೇವರಾಜೇಗೌಡರು, ಎಸಿ ಸಾಹೇಬರು ನನಗೆ ಪರಿಚಯವಿರುತ್ತಾರೆ. ನಿಮ್ಮ ಕೆಲಸ ಮಾಡಿಸಿಕೊಡುತ್ತೇನೆ. ನೀವು ಒಬ್ಬರೇ ಹಾಸನಕ್ಕೆ ಬನ್ನಿ ಎಂದು ಕರೆಸಿಕೊಂಡು ಇನೋವಾ ಕಾರಿನಲಿ ಹಾಸನದಲ್ಲಿ, ನಾಲೈದು ಕಡೆ ಸುತ್ತಾಡಿಸಿ ನಂತರ ಹಾಸನ, ಹೊಳೆನರಸೀಪುರ ರಸ್ತೆಗೆ ಹೊಂದಿಕೊಂಡಿರುವ ಬಿಯರ್ ತಯಾರಿಕ ಘಟಕದ ಹಿಂದಿರುವ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಪಿರ್ಯಾದಿಯವರ ಮೈಕೈಗೆ ಮುಟ್ಟಿ ದೈಹಿಕವಾಗಿ ಹಿಂಸೆ ನೀಡಿರುತ್ತಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ದೇವರಾಜೇಗೌಡ ಇಷ್ಟೊಂದು ಬಲವಾದ ಆರೋಪಗಳಿದ್ದರೂ, ಏಪ್ರಿಲ್ 1ರಂದೇ ಎಫ್ಐಆರ್ ದಾಖಲಾಗಿದ್ದರೂ ಮೇ 10ರ ತನಕ ಪೊಲೀಸರು ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಈಗ ಮೂಡಿದೆ. ಯಾಕೆಂದರೆ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿದ, ಬ್ಲ್ಯಾಕ್ಮೇಲ್ ಮಾಡಿದ ಹಾಗೂ ಬೆದರಿಕೆ ಹಾಕಿದ ಗಂಭೀರ ಆರೋಪ ಅವರ ಮೇಲಿದೆ.
ಏಪ್ರಿಲ್ 1ರಂದು ದಾಖಲಾಕಿದ್ದ ಎಫ್ಐಆರ್ನಲ್ಲಿ ಈವರೆಗೆ ಸಮಸ್ಯೆಗೆ ಸಿಲುಕದಿದ್ದ ದೇವರಾಜೇಗೌಡರಿಗೆ ಇದೀಗ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದೇ ಮುಳುವಾಯ್ತೇ ಎಂಬ ಅನುಮಾನ ವ್ಯಕ್ತವಾಗಿದೆ. ಹಳೆಯ ಕೇಸ್ನಲ್ಲಿ ಪೊಲೀಸರು ಅವರನ್ನು ಈಗ ಬಂಧಿಸಿರುವುದೇ ಇದಕ್ಕೆ ಕಾರಣ. ಇನ್ನೊಂದೆಡೆ ದೇವರಾಜೇಗೌಡ ಜಾಮೀನು ಅರ್ಜಿ ಸಲ್ಲಿಸಿದ ದಿನಾಂಕವನ್ನೂ ಗಮನಿಸಬೇಕು.