ಬೆಂಗಳೂರು, 07: ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ವಿಶೇಷ ತನಿಖಾ ತಂಡ(ಎಸ್ಐಟಿ)ದ ಅಧಿಕಾರಿಗಳು ಮತ್ತೆ ಬಂಧಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಭಾರಿ ಪ್ರಮಾಣದ ಬಿಟ್ಕಾಯಿನ್ ಕ್ರಿಪ್ಟೋಕರೆನ್ಸಿ ಕಳ್ಳತನ ಮಾಡಿದ ಆರೋಪದ ಮೇಲೆ ತುಮಕೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಇಂದು ಶ್ರೀಕಿಯನ್ನು ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಮೂಲದ ಕ್ರಿಪ್ಟೋಕರೆನ್ಸಿ ವಿನಿಮಯ ವೆಬ್ಸೈಟ್ ಹ್ಯಾಕ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕಿಯನ್ನು ಸೋಮವಾರ ತಡರಾತ್ರಿ ಬಂಧಿಸಲಾಗಿದೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.
2017ರಲ್ಲಿ ಒಂದು ಕೋಟಿ ರೂಪಾಯಿ ಮೌಲ್ಯದ ಬಿಟ್ಕಾಯಿನ್ ಕದ್ದ ಆರೋಪದ ಮೇಲೆ ಶ್ರೀಕಿ ವಿರುದ್ಧ ತುಮಕೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿತ್ತು.
2015ರಲ್ಲಿ ಕೆಂಪೇಗೌಡನಗರ ಠಾಣೆಯಲ್ಲಿ ದಾಖಲಾಗಿದ್ದ ಡ್ರಗ್ಸ್ ಕೇಸ್ನಲ್ಲಿ ಶ್ರೀಕಿಯನ್ನು ಬಂಧಿಸಲಾಗಿತ್ತು. ಈ ಕೇಸ್ ತನಿಖೆ ವೇಳೆ ಬಿಟ್ಕಾಯಿನ್ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ 2020ರ ನವೆಂಬರ್ನಲ್ಲಿ ರಾಜ್ಯ ಸರ್ಕಾರದ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿ ಅಲ್ಲಿಂದ ಹಣ ಕದಿಯುತ್ತಿದ್ದ ಆರೋಪದ ಮೇಲೆ ಶ್ರೀಕಿಯನ್ನು ಮೊದಲು ಬಾರಿ ಬಂಧಿಸಲಾಗಿತ್ತು.
ಶ್ರೀಕಿ ಕಳ್ಳತನ ಮಾಡಿದ ಹಣವನ್ನು ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.