ಬೆಳಗಾವಿ02: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರಿಗೆ ಕಾಗವಾಡ ಸಹಾಯಕ ಚುನಾವಣಾಧಿಕಾರಿ ನೋಟಿಸ್ ಜಾರಿ ಮಾಡಿದ್ದು, 24 ಗಂಟೆಯೊಳಗೆ ಪ್ರತಿಕ್ರಿಯೆ ನೀಡುವಂತೆ ಆದೇಶಿಸಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಬೇರೊಬ್ಬ ವ್ಯಕ್ತಿಯ ವೈಯಕ್ತಿಕ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಆರೋಪ ರಾಜು ಕಾಗೆ ಅವರ ಮೇಲಿತ್ತು. ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ರಾಜು ಕಾಗೆ ಅವರು, ಪ್ರಧಾನಿ ಮೋದಿ ಸತ್ತರೆ ಮುಂದೆ ಯಾರೂ ಪಿಎಂ ಆಗುವುದಿಲ್ಲವೇ ಎಂದು ಪ್ರಶ್ನೆ ಮಾಡಿದ್ದರು. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜು ಕಾಗೆಯವರ ಹೇಳಿಕೆಗೆ ಬಿಜೆಪಿ ಕಿಡಿಕಾರಿತ್ತು. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಬಿಜೆಪಿ, ಕಾಂಗ್ರೆಸ್ ಪಕ್ಷದ ಕಾಗವಾಡ ಶಾಸಕ ರಾಜು ಕಾಗೆ ಅವರು ತಮ್ಮ ಎಲುಬಿಲ್ಲದ ನಾಲಿಗೆಯನ್ನು ಮತ್ತೊಮ್ಮೆ ಹರಿಬಿಟ್ಟಿದ್ದಾರೆ. ಟೀಕೆ ಮಾಡುವುದಕ್ಕೆ ವಿಷಯಗಳು ಇಲ್ಲದೆ ಇದ್ದರೆ, ರಣಹೇಡಿಗಳು ಪ್ರಧಾನಿ ಮೋದಿಯವರ ಸಾವನ್ನು ಬಯಸುತ್ತಾರೆ. 140 ಕೋಟಿ ಭಾರತೀಯರ ಆಶೀರ್ವಾದ ಪ್ರಧಾನಿ ಮೋದಿಯವರಿಗೆ ಇದೆ. ಕಾಂಗ್ರೆಸ್ಸಿಗರು ಅವರ ಸಾವು ಬಯಸಿದಷ್ಟು ಅವರ ಆಯಸ್ಸು ಹೆಚ್ಚುತ್ತದೆ ಎಂದು ಹೇಳಿತ್ತು.