ಮಂಗಳೂರು, ಏಪ್ರಿಲ್ 28: ಕರ್ನಾಟಕದಲ್ಲಿ ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಸಂದರ್ಭದಲ್ಲಿಯೇ ಇದೀಗ ರೈಲ್ವೆ ನೇಮಕಾತಿ ಮಂಡಳಿ ಕೂಡ ಆಕ್ಷೇಪಾರ್ಹ ಕ್ರಮ ಕೈಗೊಂಡಿದೆ. ಈ 29ರಂದು ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆ ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ಹಾಲ್ಟಿಕೆಟ್ ನೀಡಲಾಗಿದೆ. ಅದರಲ್ಲಿ, ಮಂಗಳಸೂತ್ರ ಮತ್ತು ಧಾರ್ಮಿಕ ಸಂಕೇತಗಳನ್ನೆಲ್ಲ ತೆಗೆದಿರಿಸಿ ಪರೀಕ್ಷೆಗೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ.
ರೈಲ್ವೆ ಪರೀಕ್ಷೆಯಲ್ಲಿ ಜನಿವಾರ ಮಾತ್ರವಲ್ಲ, ಮಂಗಳಸೂತ್ರವೂ ನಿಷಿದ್ಧ!

ರೈಲ್ವೆ ನೇಮಕಾತಿ ಮಂಡಳಿಯ ಈ ಕ್ರಮಕ್ಕೆ ಹಿಂದು ಪರ ಸಂಘಟನೆಗಳ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಂಗಳೂರಿನ ಮಣೇಲ್ ಬೆಸೆಂಟ್ ವಿದ್ಯಾ ಕೇಂದ್ರದಲ್ಲಿ ಕೂಡ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಗೆ ನೀಡಲಾದ ಹಾಲ್ ಟಿಕೆಟ್ನಲ್ಲಿ ಮಂಗಳಸೂತ್ರ ತೆಗೆದಿರಿಸುವಂತೆ ಉಲ್ಲೇಖಿಸಿರುವುದು ಕಂಡುಬಂದಿದ್ದು, ಜಿಲ್ಲೆಯ ಹಿಂದೂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಿವಾರ ಮತ್ತು ಮಂಗಳಸೂತ್ರ ಹಾಕುವುದು ಹಿಂದೂಗಳ ಧಾರ್ಮಿಕ ಸಂಪ್ರದಾಯ. ಅದನ್ನು ತೆಗೆದು ಪರೀಕ್ಷೆ ಬರೆಯುವಂತೆ ಪ್ರವೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇಂತಹ ಧರ್ಮ ವಿರೋಧಿ ಧೋರಣೆಯನ್ನು ಸಹಿಸಲು ಸಾಧ್ಯ ಎಂದು ಇಂದು ಮುಖಂಡರು ಹೇಳಿದ್ದಾರೆ.