ಬೆಳಗಾವಿ: ಉತ್ತರ ಕರ್ನಾಟಕದ ಶಾಸಕರು ಬೆಂಗಳೂರಿಗೆ ಬಂದು ಭಿಕ್ಷುಕರ ತರ ಭಿಕ್ಷೆ ಬೇಡಿಕೊಳ್ಳಬೇಕು. ಕೊನೆಗೆ ಹತ್ತು, ಇಪ್ಪತ್ತು ಪೈಸೆ ಕೊಟ್ಟು ಸಮಾದಾನ ಮಾಡುತ್ತಾರೆ ಎಂದು ಆಡಳಿತ ಪಕ್ಷದ ಶಾಸಕ ರಾಜು ಕಾಗೆ ಅಸಹಾಯಕತೆ ಹೊರಹಾಕಿದರು.
ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಬಗ್ಗೆ ನಡೆದ ಚರ್ಚೆ ವೇಳೆ ಮಾತನಾಡಿದ ಅವರು, ಉತ್ತರ ಕರ್ನಾಟಕದವರು ಇಲ್ಲಿಗೆ ಬಂದು ಎಲ್ಲರ ಮುಂದೆ ಕೈಮುಗಿದು ನಿಲ್ಲಬೇಕು. ನಾನು ಈ ಬಗ್ಗೆ ಧ್ವನಿ ಎತ್ತಿದ್ದೆ. ಆದರೆ ನಾನು ನನ್ನ ಪಕ್ಷದ ವಿರುದ್ಧ ಮಾತನಾಡಿದ್ದೆ ಎಂದು ಮಾಧ್ಯಮಗಳಲ್ಲಿ ಪ್ರಸಾರ ಆಗಿತ್ತು. ನಾನು ಸರ್ಕಾರದ ವಿರುದ್ಧ ಮಾತನಾಡಿಲ್ಲ. ಅಧಿಕಾರಿಗಳು ಪಾರದರ್ಶಕತೆಯಿಂದ ಕೆಲಸ ಮಾಡಬೇಕು ಎಂದಿದ್ದೆ ಎಂದು ವಿವರಿಸಿದರು.
ಉತ್ತರ ಕರ್ನಾಟಕ ಭಾಗಕ್ಕೆ ಐದು ಸಾವಿರ ಕೋಟಿ ರೂ.ಕೊಡಿ:
ನಾನು ಪ್ರಧಾನಿ, ಸಿಎಂಗೆ ಪ್ರತ್ಯೇಕ ರಾಜ್ಯ ಮಾಡುವಂತೆ ಕೋರಿ ಪತ್ರ ಬರೆದಿದ್ದೆ. ಇದು ನನ್ನ ಅನಿಸಿಕೆ ಮಾತ್ರ ಆಗಿತ್ತು. ಇದಕ್ಕೆ ಕೆಲ ಸಂಘ ಸಂಸ್ಥೆಗಳು ಬೆಂಬಲಿಸಿದರು. ಕೆಲವರು ಟೀಕೆ ಮಾಡಿದರು. ಕಲ್ಯಾಣ ಕರ್ನಾಟಕದ 371ಜೆ ಯಿಂದ ನಮಗೆ ಏನೂ ಉಪಯೋಗ ಇಲ್ಲ. ಉತ್ತರ ಕರ್ನಾಟಕ ಭಾಗಕ್ಕೂ ಐದು ಸಾವಿರ ಕೋಟಿ ಕೊಡಿ ಎಂಬುದು ನನ್ನ ಮನವಿ. ಏಕೆಂದರೆ ನಮ್ಮ ಭಾಗವೂ ಹಿಂದುಳಿದಿದೆ. ನಮ್ಮಲ್ಲಿ ಅನೇಕರು ಇನ್ನೂ ಬೆಂಗಳೂರು ನೋಡಿಲ್ಲ. ಏಕೆಂದರೆ, ಸುಮಾರು 800 ಕಿ. ಮೀ. ದೂರ ಇದೆ ಎಂದರು. ಕಲ್ಯಾಣ ಕರ್ನಾಟಕ ಜೊತೆ ಜೊತೆಗೆ ಉತ್ತರ ಕರ್ನಾಟಕ ಭಾಗಕ್ಕೂ ಸುಮಾರು 5,000 ದಿಂದ 10,000 ಕೋಟಿ ರೂ. ನೀಡಬೇಕು ಎಂಬುದು ನನ್ನ ಮನವಿಯಾಗಿತು.
ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಸಾಯೋ ತನಕ ನಾನು ಹೋರಾಡುವೆ:
ರಾಜು ಕಾಗೆ ಅವರು ತಮ್ಮ ಮಾತು ಸರ್ಕಾರದ ಪರ ಅಥವಾ ವಿರುದ್ಧ ಅಲ್ಲ, ಬದಲಿಗೆ ಸತ್ಯವನ್ನು ಹೇಳುತ್ತಿದ್ದೇನೆ ಎಂದರು. ‘ನಮ್ಮ ಗೋಳು ಯಾರಿಗೆ ಹೇಳಬೇಕು? ನಾನು ಏನಾದರೂ ಮಾತನಾಡಿದರೆ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದೇನೆ ಎನ್ನುತ್ತಾರೆ. ಅದಕ್ಕೆ ನಾವು ಪ್ರತ್ಯೇಕ ರಾಜ್ಯ ಕೇಳೊದು. ‘ಯಾರು ಬೇಕಾದರೂ ಬರಲಿ, ಯಾರು ಬೇಕಾದರೂ ವಿರೋಧ ಮಾಡಲಿ. ನಾನು ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡೇ ಮಾಡ್ತೀನಿ. ಸಾಯಲಿ ಬಿಡ್ಲಿ…. ನಾನು ಹೋರಾಟ ಮಾಡೋನೆ’ ಎಂದು ಸದನದಲ್ಲಿ ನಿಂತು ಮತ್ತೊಮ್ಮೆ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಪ್ರಖರವಾಗಿ ಮಂಡಿಸಿದರು.
ಬೆಂಗಳೂರಲ್ಲಿ ಕಂದಾಯ ಕಾರ್ಯದರ್ಶಿ ಕಟಾರಿಯಾ ಅವರಿಗೆ ಮನವಿ ಕೊಡಲು ಭೇಟಿ ಮಾಡಿದ್ದೆ. ಆದರೆ ಆ ಅಧಿಕಾರಿ ನನ್ನ ಮವಿಯನ್ನು ಸ್ವೀಕರಿಸದೇ ಎದ್ದು ಹೋಗ್ತಾರೆ ಎಂದು ಆರೋಪಿಸಿದರು.
ಕಳೆದ ಬಾರಿಯ ಅಧಿವೇಶನದಲ್ಲಿ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ್ದೆ. ಆದರೆ, ಇದುವರೆಗೂ ಆ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಎಂದು ಶಾಸಕ ಕಾಗೆ ಆಕ್ಷೇಪಿಸಿದರು.


