ಬೆಂಗಳೂರು, ಮಾ26: ಕಾಂಗ್ರೆಸ್ಗೆ ನೋ ವಿಷನ್, ನೋ ಮಿಷನ್. ಕರ್ನಾಟಕ ಕಾಂಗ್ರೆಸ್ ಬರೀ ಪರ್ಸೆಂಟೇಜ್ಗೆ ಸೀಮಿತ ಆಗಿದೆ ಎಂದು ಮಾಜಿ ಸಚಿವ ಸಿ ಟಿ ರವಿ ವಾಗ್ದಾಳಿ ನಡೆಸಿದರು. ಯಾವ ಪಾಲಿಸಿ ಇಟ್ಟುಕೊಂಡು ಜನರ ಮುಂದೆ ಹೋಗಬೇಕು ಅನ್ನೋ ನೀತಿಯೇ ಇಲ್ಲ. ಅವರು ಕೇವಲ ಇಂಟಾಲರೆನ್ಸ್, ದ್ವೇಷವನ್ನೇ ಅಸ್ತ್ರ ಮಾಡಿಕೊಂಡಿದ್ದಾರೆ. ಭಾಷಣದಲ್ಲಿ ವ್ಯಕ್ತ ಆಗ್ತಿರೋದು ದ್ವೇಷ ಮಾತ್ರ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಾತನಾಡಿದ ಅವರು, ಪ್ರಧಾನಿಗಳಾದವರು ವಿಷನ್ ಇಟ್ಟುಕೊಂಡು, ಮಿಷನ್ ರೂಪದಲ್ಲಿ ಕೆಲಸ ಮಾಡ್ತಿದ್ದಾರೆ. ಅಮೃತ ಕಾಲದಲ್ಲಿ ಭಾರತ ಆರ್ಥಿಕ, ಶೈಕ್ಷಣಿಕ ಸೇರಿ ಎಲ್ಲ ರಂಗದಲ್ಲೂ ಬೆಳೆಯಬೇಕು. ಅದಕ್ಕೆ ಇಡೀ ವಿಷನ್ ಅನ್ನು, ಅಮೃತ ಕಾಲಕ್ಕೆ ಜೋಡಿಸಿ ಕೆಲಸ ಮಾಡ್ತಿದ್ದಾರೆ. ಆದರೆ, ಕಾಂಗ್ರೆಸ್ ಈ ಚುನಾವಣೆಯಲ್ಲಿ ಯಾರ ನೇತೃತ್ವದಲ್ಲಿ ಈ ಚುನಾವಣೆ ಸ್ಪರ್ಧೆ ಮಾಡುತ್ತಿದೆ, ಯಾರ ನೇತೃತ್ವದಲ್ಲಿ ಚುನಾವಣೆ ಎದುರಿಸ್ತೀವಿ ಅಂತ ಸ್ಪಷ್ಟನೆ ಇಲ್ಲ ಎಂದು ತಿರುಗೇಟು ನೀಡಿದರು.
ಪ್ರಧಾನಿ ಮೋದಿ ವಿರುದ್ಧ ಸೋನಿಯಾ ಗಾಂಧಿ, ಮಣಿಶಂಕರ್ ಅಯ್ಯರ್, ಪವನ್ ಖೇರಾ, ಪ್ರಿಯಾಂಕ್ ಖರ್ಗೆ, ಶಿವರಾಜ್ ತಂಗಡಗಿ, ಪರಮೇಶ್ವರ್, ಸಿಎಂ ಸಿದ್ದರಾಮಯ್ಯ ಆದಿಯಾಗಿ ಬಾಯಿಗೆ ಬಂದಂತೆ ಮಾತನಾಡಿದರು. ಕೊನೆಗೆ ಬಿಜೆಪಿ ಒಂದೇ ಸೀಟು ಗೆಲ್ಲಲಿದೆ ಅಂತ ಶಾಪ ಹಾಕಿದ್ರು. ಅದಕ್ಕೆ ಅವರಿಗೆ ಒಂದೇ ಸೀಟು ಗೆದ್ದಿದ್ರು ಎಂದು ತಿರುಗೇಟು ನೀಡಿದರು.
ಜನರೇ ಮೋದಿ ಮೋದಿ ಅಂತಿರೋದಕ್ಕೆ ಕಾಂಗ್ರೆಸ್ನವರಲ್ಲಿ ಅಸಹಾಯಕತೆ ಕಾಡ್ತಿರಬಹುದು. ಕೈಲಾಗದವನು ಮೈ ಪರಚಿಕೊಂಡ ಅಂತಾರೆ. ಅದು ಅವರಿಗೆ ಅನುಗುಣವಾಗಿದೆ. ಮೋದಿ ಅವರ ವಿರೋಧ, ಭಾರತದ ಸಹಿಷ್ಣುತೆ ಪ್ರಶ್ನಿಸಿದ್ರು. ಅಂತಾರಾಷ್ಟ್ರೀಯ ಶಕ್ತಿಗಳು ಮಧ್ಯಪ್ರವೇಶ ಮಾಡಬೇಕು ಅಂತ ಬಯಸಿದ್ರು. ಇಂಡಿಯಾ ಅಲಯನ್ಸ್ ಅದನ್ನು ಮುಂದುವರೆಸಿದೆ. ತಮಿಳುನಾಡಿನಲ್ಲಿ ಸ್ಟಾಲಿನ್ನಿಂದ ಹಿಡಿದು, ಅನಿತಾ ರಾಮಸ್ವಾಮಿ ವರೆಗೂ ಹೇಳಿಕೆ ನೀಡ್ತಿದ್ದಾರೆ. ಮೂರನೇ ಬಾರಿಯೂ ಮೋದಿ ಪ್ರಧಾನಿ ಆಗ್ತಾರಲ್ಲ ಅಂತ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಒಂದು ಸುಳ್ಳು ಹೇಳೋದು, ಇನ್ನೊಂದು ದ್ವೇಷ ಕಾರೋದು ಅವರ ಕೆಲಸ ಎಂದು ಸಿ ಟಿ ರವಿ ಆರೋಪಿಸಿದರು.
ದಲಿತ ಸಿಎಂ ಅನ್ನೋ ಅಸ್ತ್ರ ಬಿಟ್ಟು, ಹೇಳಿಕೆ ನೀಡುತ್ತಿದ್ದಾರೆ. ಖರ್ಗೆ, ಮಹದೇವಪ್ಪ, ಪರಮೇಶ್ವರ್ ಇವರನ್ನು ಅಸ್ತ್ರ ಮಾಡಿಕೊಂಡು ಹೇಳಿಕೆ ನೀಡ್ತಿದ್ದಾರೆ. ಜಗತ್ತಿನ ಜಿಡಿಪಿ ಕುಸಿದಾಗ, ಭಾರತದ ಜಿಡಿಪಿ ಗ್ರೋತ್ ಆಗಿದೆ. ಬಡವರಿಗೆ ಮಾಡಿರೋ ಕೆಲಸವನ್ನು ಮುಂದಿಟ್ಟುಕೊಂಡು ಮತ ಕೇಳ್ತೀವಿ. ಕಾಂಗ್ರೆಸ್ನವರು ಹೇಳ್ತಿರೋದು ತೆರಿಗೆ ವಂಚನೆ ಆಗಿದೆ ಅಂತ. ದೆಹಲಿಯಲ್ಲಿ ಜಯರಾಂ ರಮೇಶ್, ಇಲ್ಲಿ ಸಚಿವ ಕೃಷ್ಣ ಬೈರೇಗೌಡ ಸುದ್ದಿಗೋಷ್ಟಿ ಮಾಡಿ ಹೇಳಿದ್ದಾರೆ. ನಿರ್ಮಲಾ ಸೀತಾರಾಮನ್ ಸಂಸತ್ನಲ್ಲೇ ಹೇಳಿದ್ದಾರೆ. ವಿಶೇಷ ಅನುದಾನ ನೀಡಿಲ್ಲ ಅಂತ. ಇಲ್ಲದಿದ್ರೆ ಹಕ್ಕು ಚ್ಯುತಿ ಆಗಲಿದೆ. ಇವರು ಒಂದು ಪ್ರಶ್ನೆ ಕೂಡ ಮಾಡಲಿಲ್ಲ. ಹೊರಗೆ ಬಂದು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ನ್ಯಾಯಾಲಯದಲ್ಲಿ ಕೂಡ ಪ್ರಶ್ನೆ ಮಾಡಬಹುದು ಎಂದು ಸವಾಲು ಹಾಕಿದರು. ಸಿಎಂಗೆ ಪ್ರಶ್ನೆ ಮಾಡುತ್ತೇನೆ. ನಿಮ್ಮ ಬಳಿ ದಾಖಲೆ ಇದ್ರೆ ಯಾವ ಅನುದಾನ ಕೊರತೆ ಇದೆ ತಿಳಿಸಿ. ದಾಖಲೆ ಇದ್ದರೆ ಕೋರ್ಟ್ಗೆ ಹೋಗಿ. GST ಕೌನ್ಸಿಲ್ನಲ್ಲಿ ಪ್ರಶ್ನೆ ಮಾಡಬಹುದು. ಅದು ಬಿಟ್ಟು ಇಲ್ಲಿ ಬಂದು ಜನರ ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಹೋಳಿ ಆಡೋಕೆ ನೀರಿಲ್ಲ, ಅಭಿವೃದ್ಧಿ ಇಲ್ಲ. ಕಾಂಗ್ರೆಸ್ ತನ್ನ ಅಜೆಂಡಾವನ್ನು ದಲಿತ ಲೀಡರ್ ಮೂಲಕ ಆಡಿಸ್ತಾ ಇದ್ದಾರೆ. ಸಚಿವರಾದ ಶಿವರಾಜ್ ತಂಗಡಗಿ, ಪ್ರಿಯಾಂಕಾ ಖರ್ಗೆ ಮೂಲಕ ಕಾಂಗ್ರೆಸ್ ತಮ್ಮ ಅಜೆಂಡಾವನ್ನು ಅವರ ಮೂಲಕ ಮಾಡಿಸ್ತಾ ಇದೆ ಎಂದು ದೂರಿದರು.
ಜನಾರ್ದನ ರೆಡ್ಡಿ ಸೇರ್ಪಡೆ ಪಕ್ಷಕ್ಕೆ ಡ್ಯಾಮೇಜ್ ಆಗಿಲ್ಲವಾ ಅನ್ನೋ ವಿಚಾರವಾಗಿ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವದಲ್ಲಿ ಎಲೆಕ್ಷನ್ ನಂಬರ್ ಗೇಮ್. ಯಾರು ಎಷ್ಟು ವೋಟ್ ಹಾಕಿದ್ರು ಅನ್ನೋದು ಬರುತ್ತೆ. ಕೇಸನ್ನು ಅವರು ಎದುರಿಸ್ತಾರೆ. ನಾವು ನಮ್ಮ ರಾಜಕೀಯ, ಯುದ್ಧ ನೀತಿಯ ಭಾಗವೇ ಅಂದುಕೊಳ್ಳಿ. ಅವರು ರಾಜ್ಯಸಭೆಯಲ್ಲಿ ಜನಾರ್ದನ ರೆಡ್ಡಿ ವೋಟ್ ಹಾಕಿಸಿಕೊಂಡ್ರು. ಕಾಂಗ್ರೆಸ್ನವರು ಅವರ ಮತ ಬೇಡ ಅಂದ್ರಾ? ಪಕ್ಷದ ನೀತಿಯೇ ನಮ್ಮನ್ನ ಉಳಿಸಿದೆ ಎಂದರು. ಇದೇ ವೇಳೆ ಬರ ಪರಿಹಾರ ವಿಚಾರವಾಗಿ ಕೂಡ ಅವರು ಪ್ರತಿಕ್ರಿಯಿಸಿದರು.