ಬಳ್ಳಾರಿ 08..ಮಹಾನಗರ ಪಾಲಿಕೆಯ 30ನೇ ವಾರ್ಡ್‌ನ ಪಾಲಿಕೆ ಸದಸ್ಯ ಹಾಗೂ ಸಭಾ ನಾಯಕ ಎನ್‌ಎಂಡಿ ಆಸೀಫ್ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ನಗರ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ನಗರದ ಕಳೆದ 4ನೇ ಅವಧಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ನಿರೀಕ್ಷಿತ ಸ್ಥಾನಮಾನ ಕೈ ತಪ್ಪಿದ್ದ ಹಿನ್ನೆಲೆಯಲ್ಲಿ, ಅವರ ಮನವರಿಕೆಗಾಗಿ ಸಭಾ ನಾಯಕನ ಸ್ಥಾನವನ್ನು ಆಸೀಫ್ ಅವರಿಗೆ ನೀಡಲಾಗಿತ್ತು. ಆ ನಿರ್ಧಾರವು ಪಕ್ಷದೊಳಗೆ ಸಮತೋಲನ ಕಾಯ್ದುಕೊಳ್ಳುವ ಉದ್ದೇಶದಿಂದ ತೆಗೆದುಕೊಳ್ಳಲಾಗಿತ್ತು ಎನ್ನಲಾಗಿತ್ತು.
ಆದರೆ ಇತ್ತೀಚಿನ ಬೆಳವಣಿಗೆಗಳಲ್ಲಿ ಸಭಾ ನಾಯಕ ಸ್ಥಾನದಿಂದ ಆಸೀಫ್ ಅವರು ಹಿಂದೆ ಸರಿಯುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಕುರಿತು ಅಧಿಕೃತವಾಗಿ ಯಾವುದೇ ರಾಜೀನಾಮೆ ಪತ್ರ ಸಲ್ಲಿಕೆಯಾಗಿಲ್ಲ. ಆಸೀಫ್ ಅವರಿಂದಲೂ ಅಥವಾ ಪಾಲಿಕೆ ಮೇಯರ್ ಅವರಿಂದ ಸ್ಪಷ್ಟ ಹೇಳಿಕೆ ಇನ್ನೂ ಹೊರಬಿದ್ದಿಲ್ಲ. ಆದ್ದರಿಂದ ಇದು ಕೇವಲ ರಾಜಕೀಯ ವಲಯದ ಚರ್ಚೆಯ ಹಂತದಲ್ಲೇ ಇದೆ.


