ಬೆಂಗಳೂರು,ಏಪ್ರಿಲ್ 11: ಲೋಕಸಭೆ ಚುನಾವಣೆ 2024 ಕಣ ದಿನಕಳದಂತೆ ರಂಗೇರಿದ್ದು, ರಾಜಕೀಯ ಪಕ್ಷಗಳ ಏಟು-ಎದಿರೇಟು ಪ್ರಹಸನ ಎಗ್ಗಿಲ್ಲದೇ ನಡೆಯುತ್ತಿದೆ.
ಇದಕ್ಕೆ ಇಂಬು ನೀಡುವಂತೆ ಸಿಎಂ ಸಿದ್ದರಾಮಯ್ಯ ಪ್ರಯೋಗಿಸಿದ್ದ ಒಕ್ಕಲಿಗ ಅಸ್ತ್ರಕ್ಕೆ ತಿರುಗೇಟು ನೀಡಿರುವ ಬಿಜೆಪಿ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಎನ್ ಡಿಎ ಒಕ್ಕೂಟ ತನ್ನ ಎಲ್ಲ ಕರ್ನಾಟಕದ ಅಭ್ಯರ್ಥಿಗಳನ್ನು ಒಕ್ಕಲಿಗ ಒಕ್ಕಲಿಗ ಮಠಾಧೀಶರಾದ ಆದಿಚುಂಚನಗಿರಿ ಶ್ರೀಗಳನ್ನು ಭೇಟಿ ಮಾಡಿಸುವ ಮೂಲಕ ಪ್ರತಿದಾಳ ಉರುಳಿಸಿದೆ.
ಮೊನ್ನೆ ಮೊನ್ನೆಯಷ್ಟೇ ಮೈಸೂರಿನಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಒಕ್ಕಲಿಗ ಪ್ರತಾಪ್ ಸಿಂಹ ಅವರಿಗೆ ಬಿಜೆಪಿ ಟಿಕೆಟ್ ತಪ್ಪಿಸಿ ಅರಸು ಮನೆತನಕ್ಕೆ ಟಿಕೆಟ್ ಕೊಟ್ಟಿದ್ದಾರೆ. ನಾವು ಒಕ್ಕಲಿಗರಾದ ಎಂ.ಲಕ್ಷ್ಮಣ್ಗೆ ಟಿಕೆಟ್ ಕೊಟ್ಟಿದ್ದೇವೆ ಎಂದಿದ್ದರು. ಇದೇ ದಾಳಕ್ಕೆ ಪ್ರತಿಯಾಗಿ ಇದೀಗ ಬಿಜೆಪಿ ಕೂಡ ಪ್ರತಿದಾಳ ಉರುಳಿಸಿದೆ. ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖಾ ಮಠಕ್ಕೆ ಮೈತ್ರಿ ಒಕ್ಕಲಿಗ ನಾಯಕರು ಭೇಟಿ ನೀಡುವ ಮೂಲಕ ಒಗ್ಗಟ್ಟು-ಶಕ್ತಿ ಪ್ರದರ್ಶಿಸಿದ್ದಾರೆ.
ವಿಪಕ್ಷ ನಾಯಕ ಆರ್.ಅಶೋಕ್, ಅಶ್ವತ್ಥ್ ನಾರಾಯಣ, ಡಾ.ಸಿ.ಎನ್.ಮಂಜುನಾಥ್, ಕುಮಾರಸ್ವಾಮಿ ಜೊತೆಗೆ ಯದುವೀರ್ ಒಡೆಯರ್ ಸಹ ಮಠಕ್ಕೆ ಭೇಟಿ ಶ್ರೀಗಳ ಆಶೀರ್ವಾದ ಪಡೆದರು.
ಜೆಡಿಎಸ್ ನಾಯಕ ಮತ್ತು ಮಂಡ್ಯ ಎನ್‌ಡಿಎ ಮೈತ್ರಿ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ, ತುಮಕೂರು ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ, ಬೆಂಗಳೂರು ಉತ್ತರ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ, ಕೋಲಾರ ಎನ್‌ಡಿಎ ಅಭ್ಯರ್ಥಿ ಮಲ್ಲೇಶ್ ಬಾಬು, ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ, ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಡಾ.ಸಿಎನ್ ಮಂಜುನಾಥ್ ಮತ್ತು ಬೆಂಗಳೂರು ಕೇಂದ್ರ ಬಿಜೆಪಿ ಅಭ್ಯರ್ಥಿ. ಪಿ.ಸಿ.ಮೋಹನ್ ಶ್ರೀಗಳನ್ನು ಸನ್ಮಾನಿಸಿ ಆಶೀರ್ವಾದ ಪಡೆದರು.
ಈ ವೇಳೆ ಮಾತನಾಡಿದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ‘ಯುಗಾದಿ ಹಬ್ಬದ ನಂತರ ಹೊಸ ವರ್ಷದ ಮೊದಲ ದಿನವಾಗಿದ್ದು, ಮೊದಲ ಹಂತದಲ್ಲಿ ಚುನಾವಣೆ ಎದುರಿಸುತ್ತಿರುವ ಕರ್ನಾಟಕದ 14 ಅಭ್ಯರ್ಥಿಗಳು ಶ್ರೀಗಳ ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿದ್ದೇವೆ ಎಂದು ಹೇಳಿದರು.