ರಾಮನಗರ: ಜೆಡಿಎಸ್ ಯುವ ಘಟಕದ ಅಧ್ಯಕ್ಷ ಹಾಗೂ ಹೆಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಗೆ ಜೆಡಿಎಸ್ – ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದರು. ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ಬೃಹತ್ ಮೆರವಣಿಗೆ ನಡೆಸಿ ಶಕ್ತಿ ಪ್ರದರ್ಶನ ಮಾಡಲಾಯಿತು.
ಅದ‍್ಧೂರಿ ಮೆರವಣಿಗೆಯಲ್ಲಿ ನಿಖಿಲ್ ಕುಮಾರಸ್ವಾಮಿಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್, ಶಾಸಕ ಅಶ್ವತ್ಥನಾರಾಯಣ್, ಮಾಜಿ ಕೇಂದ್ರ ಸಚಿವ ಸದಾನಂದಗೌಡ ಸೇರಿದಂತೆ ಘಟಾನುಘಟಿ ನಾಯಕರು ಸಾಥ್ ನೀಡಿದರು. ಮೆರವಣಿಗೆಗೆ ಜನಸಾಗರವೇ ಹರಿದು ಬಂದಿತ್ತು.
ಚುನಾವಣಾಧಿಕಾರಿ ಕಚೇರಿವರೆಗೆ ತೆರದ ವಾಹನದಲ್ಲಿ ರೋಡ್ ಶೋಗೆ ಸಾವಿರಾರು ಮಂದಿ ಸಾಕ್ಷಿಯಾದರು. ಶೇರ್ವಾ ಸರ್ಕಲ್ನಿಂದ ತಹಶೀಲ್ದಾರ್ ಕಚೇರಿವರೆಗೆ ಜನಸಾಗರವೇ ತುಂಬಿತ್ತು. ಮೈತ್ರಿ ನಾಯಕರ ಮೆರವಣಿಗೆಗೆ ಕಲಾತಂಡಗಳು ಮೆರುಗು ತಂದವು. ಕಾಂಗ್ರೆಸ್ ಅಭ್ಯರ್ಥಿಯಾಗಿ ಈಗಾಗಲೇ ಸಿಪಿ ಯೋಗೇಶ್ವರ್ ನಾಮಪತ್ರ ಸಲ್ಲಿಸಿದ್ದು, ಇಂದು ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದರು. ಈ ಮೂಲಕ ಚನ್ನಪಟ್ಟಣ ಉಪಚುನಾವಣೆ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದೆ.