ನಿಜಪ್ಪ ಹಿರೇಮನಿ ಎಂಬ ಅನಾಥ ಮಕ್ಕಳ ಗಾಡ್ ಪಾಧರ್ = ಇದು ಅಪ್ಪಂದಿರ ದಿನದ ವಿಶೇಷ

Ravi Talawar
ನಿಜಪ್ಪ ಹಿರೇಮನಿ ಎಂಬ ಅನಾಥ ಮಕ್ಕಳ ಗಾಡ್ ಪಾಧರ್ = ಇದು ಅಪ್ಪಂದಿರ ದಿನದ ವಿಶೇಷ
WhatsApp Group Join Now
Telegram Group Join Now
ಸ್ವಂತದ ಮಕ್ಕಳು ಹಠ ಮಾಡಿ ಅತ್ತಾಗಲೇ ಅಪ್ಪ ಅನ್ನಿಸಿಕೊಂಡವರು ಗದರಿಸುವದು,ಏ ನೋಡು ನಿನ್ನ ಅನ್ನುತ್ತ ಮಕ್ಕಳ ಮೈಮೇಲೆ ಏರಿ ಹೋಗುವದು,ಬುದ್ದಿ ಹೇಳುವ ಭರದಲ್ಲಿ ಕೆಣ್ಣೆಗೆ ಎರಡು ಏಟು ಹೊಡೆದು ಬಿಡುವದು,ಮತ್ತು ಅದೇ ಮಕ್ಕಳನ್ನ ಹೆಗಲ ಮೇಲೆ ಹೊತ್ತು ಊರು ಸುತ್ತಿಸುವ,ಜಾತ್ರೆ ತೋರಿಸುವ ಅದೆಷ್ಟೋ ಅಪ್ಪಂದಿರ ನಡುವೆಯೇ ವಿಶೇಷವಾಗಿ ಸಮಾಜದ ನಿರ್ಲಕ್ಷಕ್ಕೆ ಒಳಗಾದ ಅದೆಷ್ಟೋ ಅನಾಥ ಮಕ್ಕಳ ಬಾಯಲ್ಲಿ ಅಪ್ಪ ಅನ್ನಿಸಿಕೊಳ್ಳುವ ವಿಶೇಷ ವ್ಯಕ್ತಿಯೊಬ್ಬರು ನಮ್ಮ ನಿಮ್ಮ ನಡುವೆ ಇದ್ದಾರೆ.
ಅಪ್ಪ ಅನ್ನುವ ಎರಡಕ್ಷರದಲ್ಲಿ ಇಡೀ ಮನೆಯ ಮತ್ತು ಕುಟುಂಬದ ಜವಾಬ್ದಾರಿ ಹೊತ್ತ ಎಷ್ಟೋ ಜೀವಗಳು ಹಗಲು ರಾತ್ರಿ ಎನ್ನದೆ ದುಡಿಯುವದು ತನ್ನ ಮಕ್ಕಳ ಮತ್ತು ಕುಟುಂಬದ ಹಿತಕ್ಕಾಗಿ.ಅದರೆ ಅದೇ ಅಪ್ಪ ಒಬ್ಬ ಆದರ್ಶ ಪೋಷಕ ಅನ್ನಿಸಿಕೊಳ್ಳಬೇಕಾದರೆ ತನ್ನ ಮಕ್ಕಳನ್ನೂ ಸಮಾಜಕ್ಕೆ ಮಾದರಿ ಆಗುವಂತೆ ಬೆಳೆಸಬೇಕು ಅನ್ನುವದು ಪ್ರಜ್ಞಾವಂತರ ಅಭಿಪ್ರಾಯ.
ಆದರೆ ಅಂತಹುದೇ ತಂದೆ ಒಬ್ಬರು ತನ್ನದಲ್ಲದ ನೂರಾರು ಅಸಹಾಯಕ ಮಕ್ಕಳ ಆಶ್ರಯದಾತರಾಗಿ ಅಂತಹ ಮಕ್ಕಳಿಗೆ ಊಟ ,ವಸತಿ, ವಿದ್ಯೆ, ಉದ್ಯೋಗ ಕೊಡಿಸುತ್ತ ಯಾರೂ ದಿಕ್ಕಿಲ್ಲದ ದೇವರ ಮಕ್ಕಳ ಬದುಕು ಕಟ್ಟುವ ಮೂಲಕ ಅದೆಷ್ಟೋ ಮಕ್ಕಳ ಪಾಲಿಗೆ ತಂದೆಯ ಸ್ಥಾನದಲ್ಲಿ ಇದ್ದಾರೆ.
ಬ್ಲೆಸ್ಸಿಂಗ್ ಚಿಲ್ಡ್ರನ್ಸ್ ಹೋಮ್  ಆಶ್ರಮ ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆಯ ಮೂಲಕ ನಿಜಪ್ಪ ಹಿರೇಮನಿ ಅನ್ನುವ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಆಶ್ರಮ ನಡೆಸುತ್ತಿರುವ ವ್ಯಕ್ತಿಯೊಬ್ಬರು ತಮ್ಮ ವಿಭಿನ್ನವಾದ ಸಮಾಜ ಸೇವೆಯ ಮೂಲಕ ಸಮಾಜಕ್ಕೆ ಮಾದರಿಯಾಗಿ ನಿಲ್ಲುತ್ತಾರೆ.
ಜಮಖಂಡಿ, ರಾಯಭಾಗ, ಗೋಕಾಕ,ಬೆಳಗಾವಿ, ಮುಧೋಳ,ವಿಜಯಪುರ,ಹುಬ್ಬಳ್ಳಿ ಧಾರವಾಡ, ಕಾಗವಾಡ, ಚಿಕ್ಕೋಡಿ ಮತ್ತು ಗೋವಾ… ಬೆಳಗಾವಿ,ಬಾಗಲಕೋಟೆ,ಹಾಗೂ ಮಹಾರಾಷ್ಟ್ರದ ಸಾಂಗ್ಲಿ, ಸಾತಾರಾ, ಜಿಲ್ಲೆಗಳು ಸೇರಿದಂತೆ ಕರ್ನಾಟಕದ ಹಲವಾರು ಜಿಲ್ಲೆಗಳ ನೂರಾರು ಎಚ್ ಐ ವಿ ಪೀಡಿತ ಕುಟುಂಬಗಳ ಮಕ್ಕಳು ಅವರ ಕುಟುಂಬದವರಿಂದಲೇ ಅಸಡ್ಡೆಗೆ ಒಳಗಾಗದಂತೆ ಅವರ ಮನೋ ಸ್ಥೈರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಿಮ್ಮೊಂದಿಗೆ ನಾವು ಇದ್ದೇವೆ ಅನ್ನುವ ಭರವಸೆಯ ಬೆಳಕಾಗುತ್ತ ಎಚ್. ಐ.ವಿ ಬಾಧಿತವಾದ ಪೋಷಕರ ಮಕ್ಕಳನ್ನೂ ಕೂಡ ತಮ್ಮ ಸುಪರ್ದಿಗೆ ತೆಗೆದುಕೊಂಡು ಅವರ ಎಲ್ಲ ಖರ್ಚು ವೆಚ್ಚಗಳನ್ನು ನಿಭಾಯಿಸುವ ಮೂಲಕ ಆ ಮಕ್ಕಳ ಪಾಲಿನ ಆಶಾ ಕಿರಣವಾಗಿ ಮಮತೆಯಿಂದ ಅಂತಹ ಮಕ್ಕಳಿಗೆ ಪ್ರೀತಿ ಮತ್ತು ಕಾಳಜಿ ತೋರಿಸುವ ಮೂಲಕ ಆ ಮಕ್ಕಳ ಬಾಯಲ್ಲಿ ಅಪ್ಪ ಅನ್ನಿಸಿಕೊಂಡದ್ದು ನಿಜಪ್ಪ ಹಿರೇಮನಿ ಅವರ ಬದುಕಿನ ಅಮೃತ ಘಳಿಗೆ ಅಂದರೆ ತಪ್ಪಾಗಲಾರದು.
ಇಲ್ಲಿಯವರೆಗೆ 380 ಕ್ಕೂ ಹೆಚ್ಚು ಎಚ್ ಐ ವಿ ಪೀಡಿತ ಜೋಡಿಗಳ ಮನವೊಲಿಸಿ ಅವರೂ ಕೂಡ ವೈವಾಹಿಕ ಜೀವನ ನಡೆಸುವಂತೆ ಮಾಡುವ ಮೂಲಕ ಅವರಲ್ಲಿ ಕಮರಿ ಹೋಗಿದ್ದ ಕರುಳ ಬಳ್ಳಿ ಹಬ್ಬಿಸುವ ಆಸೆಗೂ ನೀರೆರೆದು ಪೋಷಿಸಿದ್ದು, ಎಚ್ ಐ ವಿ ಬಾಧಿತರ ಮಕ್ಕಳಿಗೆ ಎಚ್ ಐ ವಿ ಹರಡದಂತೆ ಚಿಕಿತ್ಸೆ ಕೊಡಿಸುವ ಜವಾಬ್ದಾರಿ ಹೊತ್ತು ಎಚ್ ಐ ವಿ ಬಾಧಿತರ ಬದುಕಿನಲ್ಲೂ ಹೊಸ ಕನಸುಗಳನ್ನು ಬಿತ್ತುವ ಮೂಲಕ ಅವರು ನೆಮ್ಮದಿಯಿಂದ ಬದುಕುವಂತೆ ಮತ್ತು ಎಲ್ಲರಂತೆ ಅವರೂ ಕೂಡ ಜೀವನ ನಡೆಸುವಂತೆ ಪ್ರೇರಣೆ ನೀಡಿದ್ದು ಇದೇ ನಿಜಪ್ಪ ಹಿರೇಮನಿ ಮತ್ತು ಸಂಗೀತಾ ಹಿರೇಮನಿ ಅನ್ನುವ ದಂಪತಿ.
ಕಳೆದ ಸುಮಾರು 2011-12 ರಿಂದಲೂ ಸಮಾಜ ಸೇವಾ ಸಂಸ್ಥೆಯೊಂದನ್ನು ಹುಟ್ಟು ಹಾಕಿ ಅಥಣಿ ತಾಲೂಕಿನ ಹಲವಾರು ನಿರ್ಗತಿಕ, ಬಡ ಮತ್ತು ಮಾನಸಿಕ ಅಸ್ವಸ್ಥರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತ ರಾತ್ರಿ ಹೊತ್ತಿನಲ್ಲಿ ಪರ ಊರುಗಳಿಗೆ ಹೋಗಲು ಬಸ್ಸು ತಪ್ಪಿದ ಮತ್ತು ಕೌಟುಂಬಿಕ ಕಲಹದಿಂದ ಮನೆ ಬಿಟ್ಟು ಬಂದ ಹಾಗೂ ರಸ್ತೆ ಬದಿಯಲ್ಲೇ ಜೀವನ ನಡೆಸುತ್ತಿರುವ ಅದೆಷ್ಟೋ ಜನ ಹಸಿದವರ ಹೊಟ್ಟೆಯನ್ನು ರಜನಿ ಕಮಲ ಊಟದ ಮನೆಯ ಮೂಲಕ ಉಚಿತವಾಗಿ ಊಟ ಕೊಟ್ಟು ಹಸಿವು ನೀಗಿಸುವ ನಿರಂತರ ಅನ್ನ ದಾಸೋಹದಲ್ಲಿ ತೊಡಗಿಸಿ ಕೊಂಡಿರುವ ನಿಜಪ್ಪ ಹಿರೇಮನಿ ಇಂದಿಗೂ ಶಾಲಾ ಕಾಲೇಜುಗಳಿಗೆ,ಜಾತ್ರೆಗಳಿಗೆ ತೆರಳಿ ಎಚ್ ಐ ವಿ ಮುಂಜಾಗೃತಾ ಮತ್ತು ದೇವದಾಸಿ ಪದ್ಧತಿ ನಿರ್ಮೂಲನೆಯ ಜಾಗೃತಿ ಮೂಡಿಸುತ್ತಿರುವ ಅವರ ಸಾಮಾಜಿಕ ಸೇವೆ ಅನನ್ಯವಾದದ್ದು.
ಇಲ್ಲಿಯವರೆಗೆ ಸಾವಿರಾರು ಅನಾಥ  ಮಕ್ಕಳಿಗೆ ಊಟ, ವಸತಿ ಮತ್ತು ಶಿಕ್ಷಣ ನೀಡುವದರಲ್ಲಿ ಎಲೆ ಮರೆಯ ಕಾಯಿಯಂತೆ ಕೆಲಸ ಮಾಡುತ್ತಿರುವ ನಿಜಪ್ಪ ಹಿರೇಮನಿ ಅಷ್ಟೇ ಸಂಕೋಚದ ಸ್ವಭಾವದವರು ಅಂದರೆ ತಪ್ಪಾಗಲಾರದು.
ಬಲ ಗೈಯಿಂದ ಮಾಡಿದ ದಾನ ಎಡಗೈಗೆ ತಿಳಿಯಬಾರದು ಅನ್ನುವಂತಹ ಸಂಕೋಚದ ಸ್ವಭಾವ ಹೊಂದಿರುವ ನಿಜಪ್ಪ ಹಿರೇಮನಿ ಎಂದಿಗೂ ಕೂಡ ಪ್ರಚಾರಕ್ಕಾಗಿ ಸಮಾಜ ಸೇವೆಯನ್ನು ಮಾಡದೇ ಎಲೆ ಮರೆಯ ಕಾಯಿಯಂತೆ ಅದೆಷ್ಟೋ ಅನಾಥ ಮಕ್ಕಳ ಪಾಲಿನ ಅಪ್ಪನಾಗಿ ಅಸಂಖ್ಯಾತ ಮಕ್ಕಳ ಪಾಲಿನ ಪೋಷಕ ರಾಗಿ ಉಳಿದದ್ದು ಅಥಣಿಯ ಹೆಮ್ಮೆ ಅನ್ನುವದು ಹಲವರ ಅಭಿಪ್ರಾಯ.
ಈಗಾಗಲೇ ಇವರ ಸಮಾಜ ಸೇವೆಯನ್ನು ಗುರುತಿಸಿ ರಾಜ್ಯಮಟ್ಟದ,ರಾಷ್ಟ್ರ ಮಟ್ಟದ,ಹಾಗೂ ಅಂತರ್ ರಾಷ್ಟ್ರೀಯ ಹತ್ತು ಹಲವು ಪ್ರಶಸ್ತಿ, ಸನ್ಮಾನಗಳು ನಿಜಪ್ಪ ಹಿರೇಮನಿ ಅವರನ್ನು ಅರಸುತ್ತ ಬಂದಿದ್ದು ದಾನಿಗಳು ಕೊಡುವ ತಿಂಗಳ ಪಡಿತರ,ಯಾರೋ ಸಮಾಜ ಸೇವಕರು ಅನಾಥ ಆಶ್ರಮದಲ್ಲಿ ಆಚರಿಸಿಕೊಳ್ಳುವ ಹುಟ್ಟು ಹಬ್ಬದಂತಹ ಕಾರ್ಯಕ್ರಮ ಗಳಿಂದ ಒಂದಷ್ಟು ಹೆಗಲ ಮೇಲಿನ ಭಾರ ಇಳಿಸಿಕೊಳ್ಳುತ್ತಿರುವ ನಿಜಪ್ಪ ಹಿರೇಮನಿ ಅವರು ಇಂದಿಗೂ ಅನಾಥ ಆಶ್ರಮವನ್ನು (ಎನ್ ಜಿ ಓ) ಹಿಪ್ಪರಗಿ ಗಲ್ಲಿಯ ಬಾಡಿಗೆ ಕಟ್ಟಡವೊಂದರಲ್ಲಿ ನಡೆಸುತ್ತಿದ್ದು ಸರ್ಕಾರ ಅಥವಾ ಜನ ಪ್ರತಿನಿಧಿಗಳು ಅವರಿಗೆ ಒಂದು ಸ್ವಂತದ ನಿವೇಶನ ನೀಡುವ ಮನಸ್ಸು ಮಾಡಿದರೆ ಅವರ ಸಮಾಜ ಸೇವೆಗೆ ಸಂದ ಗೌರವ ಅದಾಗುತ್ತದೆ ಅನ್ನುವದು ಹಲವು ಜನರ ಒತ್ತಾಸೆಯಾಗಿದೆ.
ತಮ್ಮ ಸಂಸ್ಥೆಗೆ ಅಸರೆ ಬಯಸಿ ಬರುವ ಮಕ್ಕಳಲ್ಲಿ
ಜಾತಿ,ಧರ್ಮ ಮತ್ತು ಲಿಂಗ ತಾರತಮ್ಯ ಮಾಡದೇ ಅದೆಷ್ಟೋ ಮಕ್ಕಳಿಗೆ ಊಟ,ವಸತಿ ಕಲ್ಪಿಸುವದರ ಜೊತೆಗೆ ಅಂತಹ ಅನಾಥ ಮಕ್ಕಳ ಶೈಕ್ಷಣಿಕ ಜೀವನಕ್ಕೂ ಭದ್ರ ಬುನಾದಿ ಹಾಕುತ್ತಿರುವ ನಿಜಪ್ಪ ಹಿರೇಮನಿ ಅಂತಹ ಸಮಾಜ ಸೇವಕರ ಸಂಖ್ಯೆ ಮತ್ತಷ್ಟು ಹೆಚ್ಚುವ ಮೂಲಕ ದೀಪದಿಂದ ದೀಪವ ಹಚ್ಚಬೇಕು ಮಾನವ ಅನ್ನುವ ಮಾತು ನಿಜವಾಗಲಿ ಅನ್ನುವ ಆಶಯದೊಂದಿಗೆ ಫಾದರ್ಸ ಡೇಯ ವಿಶೇಷ ದಿನದಂದು ನಿಜಪ್ಪ ಹಿರೇಮನಿ ಅವರಿಗೊಂದು ಅಭಿನಂದನೆ ಸಲ್ಲಿಸೋಣ ಅಲ್ಲವೇ.
ದಾನಿಗಳು ಸಂಪರ್ಕಿಸಬೇಕಾದ ವಿಳಾಸ: ನಿಜಪ್ಪ ರಜನೀಕಾಂತ್ ಹಿರೇಮನಿ ಕೆಂದ್ರ ಶಾಲೆಯ ಹತ್ತಿರ
ಹಿಪ್ಪರಗಿ ಗಲ್ಲಿ
ಅಥಣಿ-591304
ಮೊಬೈಲ್ :9964317012 /
8970228824
Account details:
Name: KRUPA AROGYA MATTU SAMAJ SEVA SOUNSTA SANKESHWAR
Acc No :375701010032104
IFSC CODE: UBIN0537578
Branch :Sankeshwar.
WhatsApp Group Join Now
Telegram Group Join Now
Share This Article