ಸಿರುಗುಪ್ಪ.ಜು.15 : ಪತ್ರಿಕೆಗಳು ಸಮಾಜದ ಪ್ರತಿಬಿಂಬಗಳು ಅವು ಸಮಾಜದಲ್ಲಿ ನಡೆಯುವ ಘಟನೆಗಳು, ಸಮಸ್ಯೆಗಳು ಮತ್ತು ಜನರ ಜೀವನದ ವಿವಿಧ ಅಂಶಗಳನ್ನು ಪ್ರತಿಬಿಂಬಿಸುತ್ತವೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ತಿಳಿಸಿದರು.
ಬಳ್ಳಾರಿ ಜಿಲ್ಲೆ ಸಿರುಗುಪ್ಪ ನಗರದಲ್ಲಿರುವ ವಿಜಯನಗರವಾಣಿ ಕಛೇರಿಗೆ ಆಗಮಿಸಿದ ಶ್ರೀಗಳು ಪಾದಪೂಜೆ ಸ್ವೀಕರಿಸಿ ಮಾತನಾಡಿದ ಅವರು ಪತ್ರಿಕೆಗಳು ಸಮಾಜದಲ್ಲಿ ನಡೆಯುವ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಹಾಗೂ ಸಾಂಸ್ಕೃತಿಕ ಘಟನೆಗಳನ್ನು ಜನರಿಗೆ ತಿಳಿಸುತ್ತವೆ. ಸಮಾಜದಲ್ಲಿನ ಸಮಸ್ಯೆಗಳು, ದೌರ್ಜನ್ಯಗಳು ಹಾಗೂ ಅನ್ಯಾಯಗಳನ್ನು ವರದಿ ಮಾಡುವ ಮೂಲಕ ಸಮಾಜದ ಗಮನಕ್ಕೆ ತರುತ್ತವೆ, ಸಮಾಜದ ಮೌಲ್ಯಗಳು, ನಂಬಿಕೆಗಳು ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತವೆ ಅಲ್ಲದೆ ಪಸ್ತುತ ವಿಷಯಗಳ ಬಗ್ಗೆ ಮಾಹಿತಿಯನ್ನು ಒದಗಿಸುವ ಮೂಲಕ ಓದುಗರ ಅಭಿಪ್ರಾಯಗಳನ್ನು ರೂಪಿಸಲು ಸಹಾಯ ಮಾಡುತ್ತವೆ. ಪತ್ರಿಕೆಗಳು ಸಮಾಜದ ಪ್ರಮುಖ ಅಂಗವಾಗಿದ್ದು, ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ರಾಜಕೀಯ ನಾಯಕರಿಗೆ ಪತ್ರಿಕೆಗಳು ಅಗತ್ಯವಾಗಿ ಬೇಕು, ತಪ್ಪು, ಒಪ್ಪುಗಳನ್ನು ತಿದ್ದಿ ತೀಡಿ ಸಮರ್ಥ ನಾಯಕತ್ವ ಹೊರಹೊಮ್ಮುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅದರೊಟ್ಟಿಗೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಮಹತ್ತರ ಪಾತ್ರವನ್ನು ನಿಭಾಯಿಸುತ್ತವೆ, ಪತ್ರಿಕೆಗಳು ಸಮಾಜದ ಸಮಸ್ಯೆಗಳನ್ನು ಪ್ರತಿಬಿಂಬಿಸಿ ಅವುಗಳನ್ನು ಪರಿಹರಿಸುವ ಕಾರ್ಯವನ್ನು ಮಾಡುತ್ತಿದ್ದು, ಕಾರ್ಯಾಂಗ ನ್ಯಾಯಾಂಗ ಮತ್ತು ಶಾಸಕಾಂಗ ಕ್ಕಿಂತಲೂ ಪತ್ರಿಕಾ ರಂಗ ಅತ್ಯಂತ ಬಲಿಷ್ಠ ವಾದದ್ದು ಮಾಧ್ಯಮ ರಂಗಕ್ಕೆ ಅದರಲ್ಲೂ ಮುದ್ರಣ ಮಾಧ್ಯಮಕ್ಕೆ ಎಂದಿಗೂ ಉತ್ತಮವಾದ ಭವಿಷ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಜಯನಗರವಾಣಿ ದಿನಪತ್ರಿಕೆ ಸಂಪಾದಕ ಬಿ.ರಮೇಶ, ಗುರುಬಸವ ಮಠದ ಬಸವಭೂಷಣ ಸ್ವಾಮೀಜಿ ಮತ್ತು ಸಾರ್ವಜನಿಕರು ಇದ್ದರು.