ತಾಳಿಕೋಟೆ, ಕಾರಣಾಂತರಗಳಿಂದ ಮುಂದೂಡಲಾಗಿದ್ದ ೧೪ ವರ್ಷದೊಳಗಿನ ಬಾಲಕರ ಖೋ-ಖೋ ಫೈನಲ್ ಪಂದ್ಯವು ಮುದ್ದೇಬಿಹಾಳದ ಎಂ.ಜಿ.ವ್ಹಿ.ಸಿ. ಕಾಲೇಜು ಮೈದಾನದಲ್ಲಿ ನಡೆಯಿತು.
ಪಂದ್ಯದಲ್ಲಿ ಮೈಲೇಶ್ವರದ ಬ್ರಿಲಿಯಂಟ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳು ನಾಗಬೇನಾಳ ಶಾಲೆಯ ತಂಡದ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ ೪ ಅಂಕಗಳ ಅಂತರದಿಂದ ಗೆಲುವು ಸಾಧಿಸಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ತಂಡದ ವಿದ್ಯಾರ್ಥಿಗಳು ಪಂದ್ಯದುದ್ದಕ್ಕೂ ಉತ್ತಮ ಕ್ರೀಡಾ ಕೌಶಲ್ಯ, ಸಂಘಟಿತ ಆಟ ಹಾಗೂ ಆತ್ಮವಿಶ್ವಾಸದಿಂದ ಪ್ರದರ್ಶನ ನೀಡಿ ಗಮನ ಸೆಳೆದರು. ಈ ಮೂಲಕ ಬ್ರಿಲಿಯಂಟ್ ಶಾಲೆಯ ೧೪ ವರ್ಷ ದೊಳಗಿನ ಬಾಲಕರ ಖೋ-ಖೋ ತಂಡ ಸತತ ನಾಲ್ಕನೇ ಬಾರಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವುದು ಶಾಲೆಯ ಕ್ರೀಡಾ ಕ್ಷೇತ್ರದ ಸಾಧನೆಗೆ ಮತ್ತೊಂದು ಗರಿಮೆ ತಂದಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಮುದ್ದೇಬಿಹಾಳ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲ್ಲೂಕು ದೈಹಿಕ ಪರಿವೀಕ್ಷಕರು ಹಾಗೂ ತಾಲ್ಲೂಕು ಮಟ್ಟದ ಕ್ರೀಡಾಧಿಕಾರಿಗಳು ಶ್ರೀ ಮಾರುತಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಬ್ರಿಲಿಯಂಟ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮೈಲೇಶ್ವರದ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿ, ಜಿಲ್ಲಾ ಮಟ್ಟದ ಪಂದ್ಯಾವಳಿಯಲ್ಲಿಯೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.