ಕೊಪ್ಪಳ ಮೇ ೦೬ : ಮಕ್ಕಳ ಮೇಲೆ ಯಾವುದೇ ರೀತಿಯ ಹಲ್ಲೆ, ದೌರ್ಜನ್ಯ ಮತ್ತು ಕಿರುಕುಳಗಳು ನಡೆಯದಂತೆ ಮಕ್ಕಳ ಪಾಲನಾ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಭಾಗೀದಾರರು ಸೂಕ್ತ ಕ್ರಮವಹಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಸಿಂಧು ಅಂಗಡಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಪ್ಪಳ ಹಾಗೂ ವೇರ್ ಆರ್ ಇಂಡಿಯನ್ ಚಿಲ್ಡ್ರನ್ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಕ್ಕಳ ಪಾಲನಾ ಸಂಸ್ಥೆಗಳ ಮುಖ್ಯಸ್ಥರುಗಳು ಮತ್ತು ಭಾಗೀದಾರ ಅಧಿಕಾರಿಗಳಿಗೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದತ್ತು ಮಾರ್ಗಸೂಚಿಗಳ-೨೦೨೨ರ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಅನ್ವಯ ಮಕ್ಕಳನ್ನು ಜೈವೀಕ ಪಾಲಕರಿಂದ ಅನಗತ್ಯವಾಗಿ ಬೇರ್ಪಡೆಸುವಂತಿಲ್ಲ. ಮಗುವಿನ ಹಿತದೃಷ್ಟಿಯಿಂದ ತೀರಾ ಅಗತ್ಯವಿದ್ದಲ್ಲಿ ಮಾತ್ರವೇ ಕುಟುಂಬದಿಂದ ಬೇರ್ಪಡಿಸಬಹುದು. ದತ್ತು ಪೂರ್ವದಲ್ಲಿ ಮಕ್ಕಳೊಂದಿಗೆ ಆಪ್ತ ಸಮಾಲೋಚನೆ ಕಡ್ಡಾಯ. ಮಕ್ಕಳ ಮೇಲೆ ಯಾವುದೇ ರೀತಿಯ ಹಲ್ಲೆ, ದೌರ್ಜನ್ಯ ಮತ್ತು ಕಿರುಕುಳಗಳು ನಡೆಯದಂತೆ ನೋಡಿಕೊಳ್ಳಬೇಕು. ಸಾಂಸ್ಥಿಕ ಸೇವೆಯು ಮಕ್ಕಳಿಗೆ ಕೊನೆಯ ಆಯ್ಕೆ ಮಗುವಿನ ಪೋಷಣೆ ಮತ್ತು ರಕ್ಷಣೆ ಕುಟುಂಬದ ಹೊಣೆಗಾರಿಕೆ ಮರಳಿ ಕುಟುಂಬಕ್ಕೆ ಸೇರ್ಪಡೆ ಮತ್ತು ಪುನಃ ಸ್ಥಾಪನೆಯ ಬಗ್ಗೆ ಮತ್ತು ಯಾವುದೇ ಪುನರವಸತಿ ಕ್ರಮಗಳು ಮಗುವಿನ ಹಿತದೃಷ್ಟಿಯಿಂದ ಕೈಗೊಳ್ಳುವಂತೆ ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-೨೦೧೫ರ ಮೂಲ ತತ್ವದಲ್ಲಿ ತಿಳಿಸುತ್ತದೆ. ಈ ಎಲ್ಲಾ ಅಂಶಗಳನ್ನು ಪಾಲಿಸಿ ನಿಮ್ಮ ಸಂಸ್ಥೆಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ ಯಾವುದೇ ಮಗುವಿನ ಪಾಲಕರು ಕನಿಷ್ಠ ಮಕ್ಕಳ ಭೇಟಿಗೂ ಸಹ ಆಗಮಿಸದಿದ್ದರೆ, ಅಂತಂಹ ಮಕ್ಕಳನ್ನು ಗುರುತಿಸಿ ದತ್ತು ಕಾರ್ಯಕ್ರಮಕ್ಕೆ ಒಳಪಡಿಸಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಪ್ರಕಾಶ ಕಡಗದ ಅವರು ಮಾತನಾಡಿ, ಜಿಲ್ಲೆಯಲ್ಲಿ ಕಳೆದ ೧೦ ವರ್ಷಗಳಲ್ಲಿ ೨೩ ಮಕ್ಕಳು ಪರಿತ್ಯಜಿಸಲ್ಪಟ್ಟಿದ್ದು, ೪೪ ಮಕ್ಕಳನ್ನು ಪಾಲಕರು ಮಕ್ಕಳ ಕಲ್ಯಾಣ ಸಮಿತಿಗೆ ಆಧ್ಯಾರ್ಪಿಸಿರುತ್ತಾರೆ. ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-೨೦೧೫ರಡಿಯಲ್ಲಿ, ಕೇಂದ್ರ ದತ್ತು ಪ್ರಾಧಿಕಾರದ ಸಹಯೋಗದೊಂದಿಗೆ ಒಟ್ಟು ೫೩ ಮಕ್ಕಳಲ್ಲಿ ೪೪ ಮಕ್ಕಳನ್ನು ದೇಶದೊಳಗೆ ಹಾಗೂ ೯ ಮಕ್ಕಳನ್ನು ವಿದೇಶಿ ಪಾಲಕರಿಗೆ ಕಾನೂನು ಬದ್ಧವಾಗಿ ದತ್ತು ನೀಡಲಾಗಿದೆ ಎಂದು ತಿಳಿಸಿದರು.
ಬೆಂಗಳೂರಿನ ವೇರ್ ಆರ್ ಇಂಡಿಯನ್ ಚಿಲ್ಡ್ರನ್ ಸಂಸ್ಥೆಯ ಯೋಜನಾ ನಿರ್ದೇಶಕರಾದ ಅಮೃತಾ ಅವರು, ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-೨೦೧೫, ತಿದ್ದುಪಡಿ-೨೦೨೧ ಕುರಿತು ಹಾಗೂ ವೇರ್ ಆರ್ ಇಂಡಿಯನ್ ಚಿಲ್ಡ್ರನ್ ಸಂಸ್ಥೆಯ ಯೋಜನಾಧಿಕಾರಿಗಳಾದ ಶ್ರೇಯಸ್ ಮತ್ತು ಶಿವರಾಜ್ ಅವರು ‘ದತ್ತು ಮಾರ್ಗಸೂಚಿಗಳು-೨೦೨೨ರ’ ಬಗ್ಗೆ ವಿವರಿಸಿದರು.
ಈ ತರಬೇತಿಯಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು, ಜಿಲ್ಲೆಯ ಎಲ್ಲಾ ಮಕ್ಕಳ ಪಾಲನಾ ಸಂಸ್ಥೆಗಳು ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಿವರಾಜ್ ಅವರು ಕಾರ್ಯಕ್ರಮ ನಿರೂಪಿಸಿದರು ಪ್ರಸ್ತಾವಿಕವಾಗಿ ಮಾತನಾಡಿದರು. ರವಿಕುಮಾರ ಪವಾರ ಸ್ವಾಗತಿಸಿದರೆ, ರವಿ ಬಡಿಗೇರ ವಂದಿಸಿದರು.
****
