ಧಾರವಾಡ:,02 ವಾರ್ಡ್‌ಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆಗಾಗಿ ತಮ್ಮ ಕ್ಷೇತ್ರದಲ್ಲಿ ಸುಮಾರು ರೂ. 110 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಯುಜಿಡಿ ಕಾಮಗಾರಿಗೆ ರೂ. 30 ಕೋಟಿ, ಕಾಂಕ್ರೀಟ್ ರಸ್ತೆಗಳಿಗೆ ರೂ. 40 ಕೋಟಿ, ಕುಡಿಯುವ ನೀರಿನ ಯೋಜನೆಗಳಿಗೆ ರೂ. 36 ಕೋಟಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಅನುದಾನ ಒದಗಿಸಲಾಗಿದೆ. ಮುರುಘಾಮಠದ ಬಳಿಯ ಸ್ಮಶಾನದಲ್ಲಿ ಆಧುನಿಕ ವಿದ್ಯುತ್ ಶವಸಂಸ್ಕಾರ ಘಟಕ ಸ್ಥಾಪನೆಗೂ ಅನುದಾನ ನೀಡಲಾಗಿದೆ. ಇದರ ಹೊರತಾಗಿಯೂ ವಿವಿಧ ಯೋಜನೆ ಹಾಗೂ ಅನುದಾನಗಳ ಮೂಲಕ ಸುಮಾರು 70 ರಿಂದ 80 ಕೋಟಿ ರೂಪಾಯಿ ಮೊತ್ತದ ಹೆಚ್ಚುವರಿ ಕಾಮಗಾರಿಗಳನ್ನು ಕ್ಷೇತ್ರದಲ್ಲಿ ಕೈಗೊಳ್ಳಲಾಗಿದೆ ಎಂದು ಶಾಸಕ ವಿನಯ ಕುಲಕರ್ಣಿ ಅವರು ಹೇಳಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಅಮೃತ ಮಹೋತ್ಸವ ಸಭಾಂಗಣದಲ್ಲಿ ಧಾರವಾಡ-71 ವಿಧಾನಸಭಾ ಮತಕ್ಷೇತ್ರದ ಪಾಲಿಕೆಯ ವಾರ್ಡುಗಳ, ವಿವಿಧ ವಿಭಾಗಗಳ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ, ಮಾತನಾಡಿದರು.
*ಸ್ವಚ್ಛತಾ ಸಿಬ್ಬಂದಿ ಹಾಜರಾತಿ ಪರಿಶೀಲನೆಗೆ ಬಯೋಮೆಟ್ರಿಕ್:* ನಗರದ ಸ್ವಚ್ಛತಾ ವ್ಯವಸ್ಥೆ ಕುರಿತು ಗಂಭೀರವಾಗಿ ಪರಿಶೀಲನೆ ನಡೆಸಲಾಗಿದೆ. ದಾಖಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಕಾರ್ಮಿಕರಿದ್ದರೂ ಕೆಲವು ಕಡೆ ನಿರೀಕ್ಷಿತ ಮಟ್ಟದಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿಲ್ಲ. ಕೆಲವರು ನಕಲಿ ಸಹಿ ಮಾಡಿ ಕರ್ತವ್ಯ ನಿರ್ವಹಿಸದೇ ಹೋಗುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಈ ಕುರಿತು ಆರೋಗ್ಯ ನಿರೀಕ್ಷಕರಿಗೆ ಎಚ್ಚರಿಕೆ ನೀಡಲಾಗಿದೆ. ಸ್ವಚ್ಛತಾ ಕಾರ್ಮಿಕರ ಹಾಜರಾತಿಯನ್ನು ಕಡ್ಡಾಯವಾಗಿ ಬಯೋಮೆಟ್ರಿಕ್ ಮೂಲಕ ದಾಖಲಿಸುವ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ. ಹಬ್ಬಗಳ ಹಿನ್ನೆಲೆ ನಗರ ಸ್ವಚ್ಛತೆಗೆ ಆದ್ಯತೆ ನೀಡಿ, ಮುಂದಿನ ದಿನಗಳಲ್ಲಿ ಗಣೇಶ ಚತುರ್ಥಿ ಸೇರಿದಂತೆ ವಿವಿಧ ಹಬ್ಬಗಳು ನಡೆಯಲಿರುವ ಹಿನ್ನೆಲೆಯಲ್ಲಿ ನಗರದ ಸ್ವಚ್ಛತೆ, ಚರಂಡಿ ಮತ್ತು ಗಟಾರಗಳ ದುರಸ್ತಿ, ಬೀದಿ ದೀಪಗಳ ನಿರ್ವಹಣೆ ಹಾಗೂ ಮೆರವಣಿಗೆ ಮಾರ್ಗಗಳಲ್ಲಿ ಅಡ್ಡಿಯಾಗುವ ಮರದ ಕೊಂಬೆಗಳ ತೆರವು ಕಾರ್ಯಕ್ಕೆ ವಿಶೇಷ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
*ಎಲ್ ಆ್ಯಂಡ್ ಟಿ ಅಗೆದ ರಸ್ತೆಗಳ ಪುನರ್ ನಿರ್ಮಾಣಕ್ಕೆ ಸೂಚನೆ:* ಕುಡಿಯುವ ನೀರಿನ ಯೋಜನೆಯಡಿ ಎಲ್ ಆ್ಯಂಡ್ ಟಿ ಸಂಸ್ಥೆ ಕೈಗೊಂಡಿರುವ ಪೈಪ್‍ಲೈನ್ ಕಾಮಗಾರಿಯಿಂದ ಹಲವು ರಸ್ತೆಗಳನ್ನು ಅಗೆದು ಬಿಡಲಾಗಿದೆ. ಆದರೆ ಅಗೆದ ರಸ್ತೆಗಳನ್ನು ಇನ್ನೂ ಸಮರ್ಪಕವಾಗಿ ಪುನರ್‌ನಿರ್ಮಾಣ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪೈಪ್‍ಲೈನ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಸಂಸ್ಥೆ ಇನ್ನೂ ಎರಡರಿಂದ ಮೂರು ತಿಂಗಳ ಕಾಲಾವಕಾಶ ಕೇಳಿದೆ. ವಿಳಂಬಕ್ಕೆ ಅವಕಾಶ ನೀಡದೆ, ಉಳಿದ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ತಾವು ನಾಳೆಯಿಂದಲೇ ಎಲ್ಲಾ ವಾರ್ಡ್ ಗಳಿಗೆ ಭೇಟಿ ನೀಡಿ, ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಲಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಎಲ್ ಆ್ಯಂಡ್ ಟಿ ಅಧಿಕಾರಿಗಳು ತಮ್ಮೊಂದಿಗೆ ಬರಬೇಕು ಎಂದು ಸೂಚಿಸಿದರು.
*ರಸ್ತೆ ಕಟಿಂಗ್ ಹಣದ ಲೆಕ್ಕ ಕೊಡಿ:* ಕಳೆದ ಮೂರು ವರ್ಷಗಳಲ್ಲಿ ವಿವಿಧ ಪೈಪ್‍ಲೈನ್, ವಿದ್ಯುತ್ ಹಾಗೂ ಕೇಬಲ್ ಕಾಮಗಾರಿಗಳಿಗಾಗಿ ನಗರದ ಹಲವು ರಸ್ತೆಗಳನ್ನು ಕತ್ತರಿಸಲಾಗಿದೆ. ರಸ್ತೆ ಕಟಿಂಗ್‍ಗೆ ಸಂಬಂಧಿಸಿದ ಶುಲ್ಕವನ್ನು ಮಹಾನಗರ ಪಾಲಿಕೆಗೆ ಪಾವತಿಸಲಾಗಿದ್ದರೂ ಅನೇಕ ಕಡೆ ರಸ್ತೆಗಳನ್ನು ಪುನರ್ ಸ್ಥಾಪಿಸಿಲ್ಲ ಎಂದು ಅವರು ಆರೋಪಿಸಿದರು.
ಕಳೆದ ಮೂರು ವರ್ಷಗಳಲ್ಲಿ ಎಷ್ಟು ರಸ್ತೆಗಳನ್ನು ಕತ್ತರಿಸಲಾಗಿದೆ, ಅದಕ್ಕಾಗಿ ಎಷ್ಟು ಹಣ ಪಾಲಿಕೆಗೆ ಜಮೆಯಾಗಿದೆ ಮತ್ತು ಆ ಹಣವನ್ನು ಯಾವ ಉದ್ದೇಶಕ್ಕೆ ಖರ್ಚು ಮಾಡಲಾಗಿದೆ ಎಂಬ ಸಂಪೂರ್ಣ ವಿವರವನ್ನು ತಕ್ಷಣ ನೀಡುವಂತೆ ಆಯುಕ್ತರಿಗೆ ಸೂಚಿಸಿದರು. ರಸ್ತೆ ಕಟಿಂಗ್ ಮಾಡಿದವರಿಂದ ಹಣ ಪಡೆದುಕೊಂಡ ಬಳಿಕವೂ ರಸ್ತೆಗಳನ್ನು ದುರಸ್ತಿ ಮಾಡದಿರುವುದು ಮಹಾನಗರ ಪಾಲಿಕೆಯ ಆಡಳಿತ ವೈಫಲ್ಯವಾಗಿದೆ. ಎಲ್ಲ ರಸ್ತೆಗಳನ್ನು ತಕ್ಷಣ ಪುನರ್ ನಿರ್ಮಿಸ ಬೇಕು ಎಂದು ಅವರು ಹೇಳಿದರು.
*ಸೂಪರ್ ಮಾರ್ಕೆಟ್ ಅಭಿವೃದ್ಧಿಗೆ ಶೀಘ್ರ ನಿರ್ಧಾರ:* ಧಾರವಾಡದ ಹಳೆಯ ಸೂಪರ್ ಮಾರ್ಕೆಟ್ ಅಭಿವೃದ್ಧಿ ಬಹುಕಾಲದ ಬೇಡಿಕೆಯಾಗಿದೆ. ನಗರದ ಜನರ ನೆನಪುಗಳೊಂದಿಗೆ ಬೆಸೆದುಕೊಂಡಿರುವ ಮಾರುಕಟ್ಟೆಯನ್ನು ಆಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು. ಪಿಪಿಪಿ ಸೇರಿದಂತೆ ಸೂಕ್ತ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಕುರಿತು ತಕ್ಷಣ ನಿರ್ಧಾರ ಕೈಗೊಂಡು ಮುಂದಿನ ಹಂತಕ್ಕೆ ಹೋಗಬೇಕು ಎಂದು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
*ರೂ. 35 ಕೋಟಿ ನೀರಿನ ಯೋಜನೆಯಲ್ಲೂ ರಾಜಕಾರಣ:* ಸವದತ್ತಿಯಿಂದ ಧಾರವಾಡಕ್ಕೆ ಬರುವ ಕುಡಿಯುವ ನೀರಿನ ಪೈಪ್‍ಲೈನ್‍ನಲ್ಲಿ ಅಪಾರ ಪ್ರಮಾಣದ ನೀರು ಸೋರಿಕೆಯಾಗುತ್ತಿದೆ. ಅಂದಾಜು ಶೇ.30 ರಿಂದ 40 ರಷ್ಟು ನೀರು ಮಾರ್ಗಮಧ್ಯದಲ್ಲೇ ವ್ಯರ್ಥವಾಗಿ ಹರಿದು ಹೋಗುತ್ತಿದೆ. ನೀರು ಸೋರಿಕೆ ತಡೆಗಟ್ಟುವ ಕಾಮಗಾರಿಗಾಗಿ ರೂ.35 ಕೋಟಿ ಅನುದಾನ ನೀಡಲು ತಾವು ಮುಂದಾಗಿದ್ದರೂ, ಕಾಪೆರ್Çರೇಷನ್‍ನಿಂದಲೇ ಕಾಮಗಾರಿ ನಡೆಸುವುದಾಗಿ ಹೇಳಿ ಅದನ್ನು ತಡೆಹಿಡಿಯಲಾಗಿದೆ. ಆದರೆ ಒಂದು ವರ್ಷ ಕಳೆದರೂ ಕಾಮಗಾರಿ ಆರಂಭವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಪೊರೇಷನ್ 15 ದಿನಗಳಲ್ಲಿ ಕಾಮಗಾರಿ ಆರಂಭಿಸುವ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದರೆ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿ ಕಾಮಗಾರಿ ಕೈಗೊಳ್ಳಲು ಅವಕಾಶ ನೀಡಬೇಕು. ಕುಡಿಯುವ ನೀರಿನಂತಹ ಜನಜೀವನಕ್ಕೆ ಸಂಬಂಧಿಸಿದ ವಿಷಯದಲ್ಲೂ ರಾಜಕಾರಣ ಮಾಡಬಾರದು ಎಂದು ಹೇಳಿದರು.
*ಹೆರಿಗೆ ಆಸ್ಪತ್ರೆ ಕುರಿತು ಶೀಘ್ರ ತೀರ್ಮಾನಕ್ಕೆ ಒತ್ತಾಯ:* ಧಾರವಾಡದಲ್ಲಿ ಪ್ರತ್ಯೇಕ ಹೆರಿಗೆ ಆಸ್ಪತ್ರೆ ನಿರ್ಮಾಣ ಅತ್ಯಂತ ಅಗತ್ಯವಾಗಿದೆ. ಸಿವಿಲ್ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ಹಾಸಿಗೆ ಮತ್ತು ಕೊಠಡಿಗಳ ಕೊರತೆಯಿಂದ ಗರ್ಭಿಣಿಯರು ತೊಂದರೆ ಅನುಭವಿಸುತ್ತಿದ್ದಾರೆ. ಹೆರಿಗೆ ಆಸ್ಪತ್ರೆಯನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸುವುದಾದರೆ ಆರೋಗ್ಯ ಇಲಾಖೆಯ ಮೂಲಕ ಅಭಿವೃದ್ಧಿಪಡಿಸಬಹುದು. ಮಹಾನಗರ ಪಾಲಿಕೆಯ ಮೂಲಕ ಅಭಿವೃದ್ಧಿಪಡಿಸಲು ನಿರ್ಧರಿಸಿದರೆ ಅದಕ್ಕೂ ಅಗತ್ಯ ಅನುದಾನ ಹಾಗೂ ಸಹಕಾರ ಒದಗಿಸಲು ಸಿದ್ಧವಿದ್ದೇವೆ ಎಂದು ತಿಳಿಸಿದರು.
ಈ ಕುರಿತು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಾದರೂ ಚರ್ಚಿಸಿ ತಕ್ಷಣ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಕೆಲಸ ಆಗಬೇಕು. ಧಾರವಾಡ ಸಿವಿಲ್ ಆಸ್ಪತ್ರೆಗೆ 24*7 ಕುಡಿಯುವ ನೀರಿನ ಲೈನ್ ವ್ಯವಸ್ಥೆ ಕಲ್ಪಿಸಿ ಕೊಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಾಳೆಯಿಂದ ಜನನ ಹಾಗೂ ಮರಣ ಪ್ರಮಾಣ ಪತ್ರಗಳನ್ನು ವಿತರಿಸುವ ಪ್ರಕ್ರಿಯೆ ಆರಂಭಿಸಲಾಗುವುದು. ಇದುವರೆಗೆ ಪ್ರಮಾಣ ಪತ್ರ ಪಡೆಯಲು ಸಾರ್ವಜನಿಕರು ಎದುರಿಸುತ್ತಿದ್ದ ತೊಂದರೆಗಳನ್ನು ನಿವಾರಿಸುವ ಉದ್ದೇಶದಿಂದ ಪಾಲಿಕೆ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ನಾಳೆಯಿಂದ ಅರ್ಹ ಅರ್ಜಿದಾರರಿಗೆ ನಿಯಮಾನುಸಾರ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು.
ಸಾರ್ವಜನಿಕರು ಅಗತ್ಯ ದಾಖಲೆಗಳೊಂದಿಗೆ ಮಹಾನಗರ ಪಾಲಿಕೆಯ ಸಂಬಂಧಿಸಿದ ಕಚೇರಿಗೆ ಭೇಟಿ ನೀಡಿ ಪ್ರಮಾಣ ಪತ್ರಗಳನ್ನು ಪಡೆಯಬಹುದು. ಪ್ರಮಾಣ ಪತ್ರ ವಿತರಣಾ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಅವರು ಸ್ವಾಗತಿಸಿದರು. ವಲಯ ಕಛೇರಿ ಮೂರು ಸಹಾಯಕ ಆಯುಕ್ತ ಅರವಿಂದ ಜಮಖಂಡಿ ಅವರು ನಿರೂಪಿಸಿ, ವಂದಿಸಿದರು.
ಸಭೆಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧ್ಯಕ್ಷೆ ಶಿವಲೀಲಾ ವಿನಯ ಕುಲಕರ್ಣಿ, ಜಿಲ್ಲಾ ಪ್ರಾಧಿಕಾರದ ಸದಸ್ಯ ಅರವಿಂದ ಏಗನಗೌಡರ, ಗ್ಯಾರಂಟಿ ಯೋಜನಾ ಅನುμÁ್ಠನ ಪ್ರಾಧಿಕಾರ ಸಮಿತಿಯ ಅಧ್ಯಕ್ಷ ಬಸವರಾಜ ಹುಬ್ಬಳ್ಳಿ, ಮುಖ್ಯ ಅಧಿಕ್ಷಕ ಅಭಿಯಂತರರು ವಿಜಯ ಕುಮಾರ, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.