ಧಾರವಾಡ: ರೈತರ ಸಮಸ್ಯೆಗಳ ಕುರಿತು ಹೋರಾಟ ನಡೆಸುವುದು ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರ ಹಕ್ಕಾಗಿದ್ದು, ರೈತರ ಬೇಡಿಕೆಗಳಿಗೆ ಪರಿಹಾರ ದೊರೆಯುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ರಚನಾತ್ಮಕವಾಗಿ ಚರ್ಚೆ ನಡೆಸಬೇಕು ಎಂದು ಪ್ರಗತಿಪರ ರೈತ ಹಾಗೂ ಶಿಕ್ಷಣ ತಜ್ಞ ಬಸವರಾಜ ತಾಳಿಕೋಟಿ ಹೇಳಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ವಿರುದ್ಧ ರೈತರ ಹೋರಾಟದ ಹೆಸರಿನಲ್ಲಿ ವೈಯಕ್ತಿಕವಾಗಿ ಹಾಗೂ ಏಕವಚನದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿರುವುದು ಸರಿಯಲ್ಲ. ರೈತರ ಸಮಸ್ಯೆಗಳ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೆ ವಿಚಾರಗಳನ್ನು ಆಧರಿಸಿ ಟೀಕಿಸಬೇಕು. ಆದರೆ ವ್ಯಕ್ತಿಯ ಗೌರವಕ್ಕೆ ಧಕ್ಕೆ ತರುವಂತಹ ವೈಯಕ್ತಿಕ ನಿಂದನೆ, ಕುಟುಂಬದ ಕುರಿತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವುದು ಪ್ರಜಾಪ್ರಭುತ್ವದ ಆರೋಗ್ಯಕರ ಚರ್ಚೆಯ ಭಾಗವಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ರೈತರ ಹಿತಾಸಕ್ತಿಯೇ ಎಲ್ಲರ ಮುಖ್ಯ ಉದ್ದೇಶವಾಗಬೇಕು. ಕಬ್ಬು ಬೆಳೆಗಾರರು ಸೇರಿದಂತೆ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೊಂದಿಗೆ ಸಂವಾದ ನಡೆಸಿ, ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಒತ್ತಾಯಿಸಬಹುದು. ಆದರೆ ವೈಯಕ್ತಿಕ ದ್ವೇಷ ಮತ್ತು ನಿಂದನೆಗೆ ಅವಕಾಶ ನೀಡದೆ “ವಿಚಾರಕ್ಕೆ ವಿಚಾರದಿಂದ ಉತ್ತರ ನೀಡೋಣ; ರೈತರ ಹಿತಕ್ಕಾಗಿ ಒಗ್ಗಟ್ಟಿನಿಂದ ಧ್ವನಿ ಎತ್ತೋಣ” ಎಂದು ಬಸವರಾಜ ತಾಳಿಕೋಟಿ ಮನವಿ ಮಾಡಿದರು.