ತಾಳಿಕೋಟೆ, ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯಲ್ಲಿ ವಾರ್ಡರ್‌ಗಳು ಹಾಗೂ ಇತರೆ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸುವ ಪ್ರಕ್ರಿಯೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಇಲಾಖೆಯ ಪ್ರಭಾರಿ ಅಧೀಕ್ಷಕ ಶ್ರೀಶೈಲ ಎಸ್. ಮೇಟಿ ಅವರಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್, ಐಪಿಎಸ್ ಅವರು ಮೆಚ್ಚುಗೆ ಪತ್ರ ನೀಡಿ ಅಭಿನಂದಿಸಿದ್ದಾರೆ. ೨೦೨೬ರ ಸೆಪ್ಟೆಂಬರ್ ೧೯ರಂದು ನೀಡಿರುವ ಮೆಚ್ಚುಗೆ ಪತ್ರದಲ್ಲಿ, ವಾರ್ಡರ್‌ಗಳು ಮತ್ತು ಇತರೆ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಅಧಿಸೂಚನೆ ಪಡೆಯುವಲ್ಲಿ ಶ್ರೀಶೈಲ ಮೇಟಿ ಅವರು ಅತ್ಯುತ್ತಮ ಕಾರ್ಯ ನಿರ್ವಹಿಸಿದ್ದಾರೆ ಎಂದು ಡಿಜಿಪಿ ಉಲ್ಲೇಖಿಸಿದ್ದಾರೆ. ಅಲ್ಲದೆ, ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಪ್ರಸ್ತಾವನೆಗಳಿಗೆ ಸರ್ಕಾರದ ಮಟ್ಟದಲ್ಲಿ ಅನುಮೋದನೆ ದೊರಕಿಸುವಲ್ಲಿ ಸಾಕಷ್ಟು ಶ್ರಮ ವಹಿಸಿರುವುದನ್ನು ಪತ್ರದಲ್ಲಿ ಪ್ರಶಂಸಿಸಲಾಗಿದೆ. ಈ ಉತ್ತಮ ಕಾರ್ಯಗಳಿಗೆ ತಮ್ಮ ಮೆಚ್ಚುಗೆಯನ್ನು ದಾಖಲಿಸಿರುವ ಡಿಜಿಪಿ ಅಲೋಕ್ ಕುಮಾರ್ ಅವರು, ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ವೃತ್ತಿಪರ ಗುಣಮಟ್ಟ, ಶ್ರಮ ಮತ್ತು ಕಾರ್ಯನಿಷ್ಠೆಯನ್ನು ಮುಂದುವರಿಸುವಂತೆ ಆಶಿಸಿದ್ದಾರೆ. ಈ ಮೂಲಕ ಶ್ರೀಶೈಲ ಎಸ್. ಮೇಟಿ ಅವರ ಇಲಾಖಾ ಕಾರ್ಯನಿಷ್ಠೆ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ವಹಿಸಿದ ಶ್ರಮಕ್ಕೆ ಉನ್ನತಾಧಿಕಾರಿಗಳಿಂದ ಅಧಿಕೃತ ಮೆಚ್ಚುಗೆ ದೊರೆತಂತಾಗಿದೆ. ಅಧೀಕ್ಷಕ ಶ್ರೀಶೈಲ ಎಸ್. ಮೇಟಿ ಅವರು ತಾಳಿಕೋಟೆ ತಾಲೂಕಿನ ಲಕ್ಕುಂಡಿ ಗ್ರಾಮದವರಾಗಿದ್ದು ಬೆಂಗಳೂರಿನ ಡಿಜಿಪಿ ಕಚೇರಿಯಲ್ಲಿ ಅಧಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.