ಬೀಳಗಿ- ಕ್ರಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ನಿರಾಶ್ರಿತರಿಗೆ ಇತ್ತೀಚೆಗೆ ಪ್ರಕಟವಾದ ಕೆ.ಎ.ಎಸ್. (KAS) ನೇಮಕಾತಿ ಅಧಿಸೂಚನೆಯಲ್ಲಿ ಮೀಸಲಾತಿ ನೀಡದೆ ರಾಜ್ಯ ಸರ್ಕಾರ ಅನ್ಯಾಯ ಮಾಡಿದೆ ಎಂದು ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತದ ಬಾಗಲಕೋಟೆ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಪ. ಹಿರೇಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೀಳಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಬಾಗಲಕೋಟೆ, ವಿಜಯಪುರ,ಬೆಳಗಾವಿ ರಾಯಚೂರು ಸೇರಿದಂತೆ ಉತ್ತರ ಕರ್ನಾಟಕದ ಸಾವಿರಾರು ರೈತರು ತಮ್ಮ ಫಲವತ್ತಾದ ಭೂಮಿ, ಮನೆ-ಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಪುನರ್ವಸತಿ ನೀತಿಯ ಪ್ರಕಾರ ನಿರಾಶ್ರಿತ ಕುಟುಂಬದ ಒಬ್ಬರಿಗೆ ಸರ್ಕಾರಿ ನೇಮಕಾತಿಯಲ್ಲಿ ಮೀಸಲಾತಿ ಕಲ್ಪಿಸುವುದು ಸರ್ಕಾರದ ಆದೇಶವಿದೆ. ಆದರೆ KPSC ಪ್ರಕಟಿಸಿದ KAS ನೇಮಕಾತಿಯಲ್ಲಿ ಈ ಮೀಸಲಾತಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ.
ಯೋಜನೆಗಾಗಿ ಸರ್ವಸ್ವ ತ್ಯಾಗ ಮಾಡಿದ ರೈತರ ಮಕ್ಕಳಿಗೆ ಉದ್ಯೋಗ ನೀಡುವುದು ಸರ್ಕಾರದ ಕರ್ತವ್ಯ. ಭೂಮಿ ಕಳೆದುಕೊಂಡವರಿಗೆ ಉದ್ಯೋಗದಲ್ಲೂ ಅನ್ಯಾಯ ಮಾಡಿದರೆ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಇದು ರೈತ ವಿರೋಧಿ ನಡೆ ಎಂದು ಹಿರೇಮಠ ಕಿಡಿಕಾರಿದರು.
ಕೂಡಲೇ KAS ನೇಮಕಾತಿ ಅಧಿಸೂಚನೆಯನ್ನು ತಿದ್ದುಪಡಿ ಮಾಡಿ ಕೃಷ್ಣಾ ಮೇಲ್ದಂಡೆ ಯೋಜನೆ ನಿರಾಶ್ರಿತರಿಗೆ ನಿಗದಿತ ಮೀಸಲಾತಿ ಕಲ್ಪಿಸಬೇಕು. ಇಲ್ಲದಿದ್ದರೆ ಭಾರತೀಯ ಕಿಸಾನ ಸಂಘದ ನೇತೃತ್ವದಲ್ಲಿ ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.