ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮಕ್ಕೆ ಸಾರಿಗೆ ಸಂಸ್ಥೆಯಿಂದ ಬಸ್ ಸೌಲಭ್ಯ ಕಲ್ಪಿಸಲು ಹಾಗೂ ಎಲ್ಲ ರೀತಿಯ ಬಸ್ಗಳ ನಿಲುಗಡೆಗೆ ಆಗ್ರಹಿಸಿ ಅಖಿಲ ಭಾರತೀಯ ವಾಲ್ಮೀಕಿ ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳು ರಸ್ತೆ ತಡೆ ಪ್ರತಿಭಟನೆ ಹಮ್ಮಿಕೊಂಡು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇಂದು ವಿಜಯಪುರ-ಖತಿಜಾಪೂರ-ಸಾರವಾಡ ಬಬಲೇಶ್ವರ ಮಾರ್ಗವಾಗಿ ೨ ಬಸ್ ಗಳನ್ನು ಕಲ್ಯಾಣ ಕರ್ನಾಟಕ ಸಾರಿಗೆಯಿಂದ ಬಿಟ್ಟಿದ್ದಕ್ಕೆ ಶಾಲಾ ವಿದ್ಯಾರ್ಥಿಗಳು ಹಾಗೂ ಮುಖಂಡರು ಬಸ್ಗಳಿಗೆ ಪೂಜೆ ಸಲ್ಲಿಸಿ, ಸಿಹಿ ಹಂಚಿ ಸಂಭ್ರಮಿಸಿ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಾಲ್ಮಿಕಿ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ ಮಾತನಾಡಿ, ಸಾರವಾಡ ಗ್ರಾಮದ ಮೇಲೆ ಹಾಯ್ದು ಹೋಗುವ ಎಲ್ಲ ರೀತಿಯ ಬಸ್ ನಿಲುಗಡೆಗೆ ಕ್ರಮ ವಹಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳೊಂದಿಗೆ ರಸ್ತೆ ತಡೆದು ಪ್ರತಿಭಟನೆ ಮಾಡಲಾಗಿತ್ತು. ನಮ್ಮ ಪ್ರತಿಭಟನೆಗೆ ಸ್ಪಂದಿಸಿದ ಸಾರಿಗೆ ಸಂಸ್ಥೆಯ ಅಧಿಕಾರಿಗಳು ವಿಜಯಪುರ-ಖತಿಜಾಪೂರ-ಸಾರವಾಡ- ಬಬಲೇಶ್ವರ ಮಾರ್ಗವಾಗಿ ಎರಡು ಬಸ್ಗಳನ್ನು ಬಿಟ್ಟಿದ್ದಕ್ಕೆ ಹಾಗೂ ಗ್ರಾಮದ ಮೇಲೆ ಹಾಯ್ದು ಹೋಗುವ ವಾಯುವ್ಯ ಕರ್ನಾಟಕ ಸಾರಿಗೆ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ವೇಗದೂತ ಮತ್ತು ಸಾಮಾನ್ಯ ಬಸ್ಗಳ ನಿಲುಗಡೆಗೆ ಕ್ರಮ ಕೈಗೊಂಡಿದ್ದಕ್ಕೆ ಸಾರಿಗೆ ಅಧಿಕಾರಿಗಳಿಗೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಸೇರಿದಂತೆ ಸಾರವಾಡ ಗ್ರಾಮದ ಮುಖಂಡರಾದ ಮುತ್ತು ಬಾಡಗಿ, ಅಂಬಣ್ಣ ನಾವಿ, ಮೋದಿನ ವಾಲಿಕಾರ, ಮಾಯಪ್ಪ ಹೂಗಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.