ನೆಲಮಂಗಲ ಭೀಕರ ಅಪಘಾತ: ಗರ್ಭಿಣಿ, ಹೊಟ್ಟೆಯಿಂದ ಹೊರ ಬಂದ ಮಗು ವಿಲ ವಿಲ ಒದ್ದಾಡಿ ಸಾವು

Ravi Talawar
ನೆಲಮಂಗಲ ಭೀಕರ ಅಪಘಾತ: ಗರ್ಭಿಣಿ, ಹೊಟ್ಟೆಯಿಂದ ಹೊರ ಬಂದ ಮಗು ವಿಲ ವಿಲ ಒದ್ದಾಡಿ ಸಾವು
WhatsApp Group Join Now
Telegram Group Join Now

ನೆಲಮಂಗಲ, ಆಗಸ್ಟ್​​ 07: ಬೆಂಗಳೂರು ಗ್ರಾಮಾಂತರ  ಜಿಲ್ಲೆ ನೆಲಮಂಗಲ ತಾಲೂಕಿನ ಎಡೇಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ  ಟಿಪ್ಪರ್ ಡಿಕ್ಕಿಯಾಗಿ ಬೈಕ್​ ಹಿಂಬದಿ ಕುಳಿತಿದ್ದ ಗರ್ಭಿಣಿ ಮೃತಪಟ್ಟಿದ್ದಾರೆ. ಹೊಟ್ಟೆಯಲ್ಲಿದ್ದ 8 ತಿಂಗಳ ಮಗು ಹೊರಗಡೆ ಬಂದು ವಿಲ ವಿಲ ಒದ್ದಾಡಿ ಸಾವನ್ನಪ್ಪಿದೆ. ಎಡೇಹಳ್ಳಿಯ ಸಿಂಚನಾ (30) ಮೃತದುರ್ದೈವಿ. ಸಿಂಚನಾ ಪತಿ ಮಂಜುನಾಥ್ ಪವಾಡ ಸದೃಶ ರೀತಿಯಲ್ಲಿ ​ಪಾರಾಗಿದ್ದಾರೆ. ಅಪಘಾತದ ಬಳಿಕ ಸ್ಥಳದಲ್ಲೇ ಟಿಪ್ಪರ್ ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಂಚನಾಗೆ ಬರುವ ಆಗಸ್ಟ್​ 17ಕ್ಕೆ 8 ಮುಗಿದು 9 ತಿಂಗಳು ತುಂಬುತ್ತಿತ್ತು. ಹೀಗಾಗಿ ಹೆರಿಗೆ ಸುಸೂತ್ರವಾಗಿ ಆಗಲಿ ಎಂದು ದಂಪತಿ ಬೈಕ್​ನಲ್ಲಿ​​ ದಾಬಸ್​ ಪೇಟೆಯಲ್ಲಿರುವ ಶಿವಗಂಗೆಯ ಗಣಪತಿ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿ ಪೂಜೆ ಸಲ್ಲಿಸಿ ಮರಳಿ ತಮ್ಮೂರು ತೋಟನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಟಿಪ್ಪರ್​ ಡಿಕ್ಕಿ ಹೊಡೆದಿದೆ. ಆಗ ಸಿಂಚನಾ ಬೈಕ್​ನಿಂದ ಕೆಳೆಗೆ ಬಿದ್ದಿದ್ದಾರೆ. ಬಳಿಕ ಟಿಪ್ಪರ್ ​ಸಿಂಚನಾ ಮೇಲೆ ಹರಿದ ಪರಿಣಾಮ ಹೊಟ್ಟೆಯಲ್ಲಿದ್ದ 8 ತಿಂಗಳು ಮಗು ಹೊರಗೆ ಬಂದಿದೆ. ನಡು ರಸ್ತೆಯಲ್ಲೇ ಮಗು ವಿಲ ವಿಲ ಒದ್ದಾಡಿ ಮೃತಪಟ್ಟಿದೆ. ಮನಕಲಕುವ ಘಟನೆ ಕಂಡು ಸ್ಥಳೀಯರು ಕೂಡ ಕಣ್ಣೀರು ಹಾಕಿದ್ದಾರೆ.

ಮೃತ ದೇಹದ ಮುಂದೆ ಪತಿ ಮಂಜುನಾಥ್​​ ಹಾಗೂ ಅತ್ತೆಯ ಆಕ್ರಂದನ ಮುಗಿಲು ಮುಟ್ಟಿದೆ. ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸಾರ್ವಜನಿಕ ಅಸ್ಪತ್ರೆಗೆ ಮೃತದೇಹದ ರವಾನೆ ಮಾಡಲಾಗಿದೆ.

WhatsApp Group Join Now
Telegram Group Join Now
Share This Article