ಶಿವಮೊಗ್ಗ, ಏಪ್ರಿಲ್ 22: ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಪ್ರಕರಣವನ್ನು ಅಪರಾಧ ತನಿಖಾ ಇಲಾಖೆ ಸಿಐಡಿಗೆ ಹಸ್ತಾಂತರಿಸಲು ಸರ್ಕಾರ ನಿರ್ಧರಿಸಿದ್ದು, ಪ್ರಕರಣದ ಶೀಘ್ರ ಇತ್ಯರ್ಥಕ್ಕಾಗಿ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಹೇಳಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಕೌನ್ಸಿಲರ್ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ (23ವ) ಅವರನ್ನು ಕಳೆದ ಗುರುವಾರ ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ಫಯಾಜ್ ಖೋಂಡುನಾಯ್ಕ್ ಎಂಬಾತ ಚಾಕುವಿನಿಂದ ಇರಿದು ಕೊಲೆ ಮಾಡಿದ್ದನು. ಬಳಿಕ ಸ್ಥಳದಿಂದ ಪರಾರಿಯಾಗಿದ್ದ ಆತನನ್ನು ಪೊಲೀಸರು ಬಂಧಿಸಿದ್ದರು.
ನೇಹಾ ಮೊದಲ ವರ್ಷದ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ (MCA) ವ್ಯಾಸಂಗ ಮಾಡುತ್ತಿದ್ದಳು. ಫಯಾಜ್ ಮತ್ತು ಆಕೆ ಈ ಮೊದಲು ಸಹಪಾಠಿಯಾಗಿದ್ದರು.
“ನಾವು ಪ್ರಕರಣವನ್ನು ಸಿಐಡಿಗೆ ನೀಡಲು ನಿರ್ಧರಿಸಿದ್ದೇವೆ. ಅದಕ್ಕಾಗಿ ನಾವು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸುತ್ತೇವೆ. ಕಾಲಮಿತಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸಿ ಪ್ರಕರಣವನ್ನು ಇತ್ಯರ್ಥಗೊಳಿಸಬೇಕು, ಆದ್ದರಿಂದ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ನೇಹಾ ಮನೆಗೆ ಭೇಟಿ ನೀಡಿದ್ದೀರಾ ಎಂದು ಕೇಳಿದಾಗ , ಆಕೆಯ ಪೋಷಕರ ನಿವಾಸಕ್ಕೆ ಹೋಗಲು ಸಾಧ್ಯವಾಗಿಲ್ಲ, ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪಕ್ಷದ ಕಾರ್ಯಕರ್ತರು ಹೋಗಿದ್ದರು. ಜೊತೆಗೆ ಕಾನೂನು ಸಚಿವರಾದ ಹೆಚ್ ಕೆ ಪಾಟೀಲ್ ಹೋಗುತ್ತಿದ್ದಾರೆ. ನಾನು ಕೂಡ ಸದ್ಯದಲ್ಲಿಯೇ ಹೋಗುತ್ತೇನೆ ಎಂದರು.