ಪ್ರಪಂಚದಲ್ಲಿ ನಡೆಯುತ್ತಿರುವ ಪರಿಸರ ಬದಲಾವಣೆಗಳು ದಿನೇ ದಿನೇ ಗಂಭೀರವಾಗುತ್ತಿವೆ. ಜಾಗತಿಕ ತಾಪಮಾನ ಏರಿಕೆ, ಅರಣ್ಯನಾಶ ಜೀವವೈವಿಧ್ಯತೆಯ ನಾಶ ಇವೆಲ್ಲವು ಮಾನವಕುಲದ ಬದುಕಿನ ಮೇಲೆ ನೇರ ಪರಿಣಾಮ ಬೀರುತ್ತಿವೆ. ಆದರೆ ಈ ಎಲ್ಲದಲ್ಲಿ ಹೆಚ್ಚು ತೀವ್ರವಾದ ಮತ್ತು ಮೌನವಾಗಿ ಮುಂದುವರೆಯುತ್ತಿರುವ ಸಂಕಟವೆಂದರೆ ಜೇನುಹುಳಗಳ ಜನಸಂಖ್ಯೆ ಕುಸಿತ. ಬಾಹ್ಯವಾಗಿ ಚಿಕ್ಕದಾಗಿ ಕಾಣುವ ಈ ಕೀಟಗಳು ವಾಸ್ತವದಲ್ಲಿ ನಮ್ಮ ಆಹಾರ ವ್ಯವಸ್ಥೆಯ ಹೃದಯಭಾಗದಲ್ಲಿವೆ.
ಜೇನು ಹುಳು ಎನ್ನುವುದು ಪ್ರಕೃತಿಯ ಒಂದು ಚಿಕ್ಕ ಜೀವಿ ಆದರೆ ಅದರ ಪಾತ್ರ ಅತಿ ದೊಡ್ಡದು, ನಾವು ಕಾಣುವ ಹೂಗಳು ಹಣ್ಣುಗಳು ತರಕಾರಿಗಳು- ಇವುಗಳೆಲ್ಲವೂ ಜೇನು ಹುಳಗಳ ಸಹಾಯದಿಂದಲೇ ಬೆಳೆಯುತ್ತವೆ. ಏಕೆಂದರೆ ಜೇನು ಹುಳು ಪರಾಗಸ್ಪರ್ಶಕ ಕೀಟ. ಅದು ಹೂವಿನಿಂದ ಹೂವಿಗೆ ಹಾರುತ್ತಾ ಪರಾಗವನ್ನು ವರ್ಗಾಯಿಸುತ್ತದೆ.. ಈ ಕ್ರಿಯೆಯ ಮೂಲಕ ಸಸ್ಯಗಳಲ್ಲಿ ಫಲಸೃಷ್ಟಿ ಸಂಭವಿಸುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಜೇನು ಹುಳಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ವಿಜ್ಞಾನಿಗಳು ಹೇಳುವಂತೆ ವಿಶ್ವದ ಸುಮಾರು ಎಪ್ಪತ್ತು ಪ್ರತಿಶತಕ್ಕಿಂತ ಹೆಚ್ಚು ಬೆಳೆಗಳು ಜೇನು ಹುಳಗಳ ಪರಾಗಸ್ಪರ್ಶದ ಮೇಲೆ ಅವಲಂಭಿತವಾಗಿವೆ ಹೀಗಾಗಿ ಜೇನುಹುಳಗಳಿಲ್ಲದ ಕೃಷಿ ಕಲ್ಪನೆಯನ್ನು ಮಾಡಿಕೊಳ್ಳುವದು ಅಸಾಧ್ಯ.
ಜೇನುಹುಳು ಪ್ರಕೃತಿಯ ಅಸ್ತಿತ್ವ ಮತ್ತು ಮಾನವ ಜೀವ ಸಮುದಾಯದ ನಿರಂತರತೆಯ ಮಧ್ಯೆ ಪ್ರಮುಖ ಕೊಂಡಿಯಾಗಿದೆ. ಪರಾಗಸ್ಪರ್ಶಕ ಕೀಟವಾಗಿ ಇದು ಕೃಷಿ ವ್ಯವಸ್ಥೆಯ ಮೂಲಾಧಾರವಾಗಿದ್ದು ಜೀವವೈವಿಧ್ಯತೆಯ ಸ್ಥಿರತೆಗೆ ಅವಿಭಾಜ್ಯ ಅಂಶವಾಗಿದೆ. ವಿಶ್ವದ ಸುಮಾರು ಎಪ್ಪತ್ತು ಪ್ರತಿಶತ ಬೆಳೆಗಳು ಜೇನು ಹುಳಗಳ ಪರಾಗಸ್ಪರ್ಶದ ಮೇಲೆ ಅವಲಂಬಿತವಾಗಿವೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ.
ಜೇನುಹುಳುಗಳು ಪರಾಗಸ್ಪರ್ಶ ಮಾಡದಿದ್ದರೆ ಅನೇಕ ಸಸ್ಯಗಳ ಸಂತಾನೋತ್ಪತ್ತಿ ಕುಂಠಿತಗೊಳ್ಳುತ್ತದೆ. ಇದು ಆಹಾರ ಸಂಕಷ್ಟಕ್ಕೆ ಕಾರಣವಾಗುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಅರಣ್ಯನಾಶ, ಕೃಷಿಯಲ್ಲಿ ಕೀಟನಾಶಕಗಳ ಅತಿಯಾದ ಬಳಕೆ, ಹವಾಮಾನ ಬದಲಾವಣೆ, ನಗರೀಕರಣ ಮತ್ತು ವಾಯುಮಾಲಿನ್ಯ ಇವು ಹೆಚ್ಚಾಗಿ ಜೇನು ಹುಳಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವುದಕ್ಕೆ ಕಾರಣಗಳಾಗಿವೆ.
ಜೇನುಹುಳುಗಳ ನಾಶವು ಪರಿಸರ ವ್ಯವಸ್ಥೆಯಲ್ಲಿನ ಇತರ ಜೀವಿಗಳು, ಸಸ್ಯಗಳು ಮತ್ತು ಪ್ರಾಣಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಅಲ್ಲದೆ ಜೇನು ಹುಳಗಳ ನಾಶವು ಮಾನವಕುಲದ ವಿನಾಶಕ್ಕೆ ಕಾರಣವಾಗಬಹುದು, ಏಕೆಂದರೆ ಅವು ಭೂಮಿಯ ೮೫% ಸಸ್ಯ ಜಾತಿಗಳ ಪರಾಗಸ್ಪರ್ಶಕ್ಕೆ ಅವಶ್ಯಕವಾಗಿವೆ. ಶೇಕಡಾ ೮೫ ಕ್ಕೂ ಹೆಚ್ಚು ಸಸ್ಯಗಳ ಸಂತತಿ ಮತ್ತು ನಾವು ಸೇವಿಸುವ ಮೂರನೆ ಒಂದು ಭಾಗದಷ್ಟು ಆಹಾರವು ಜೇನು ಹುಳುಗಳ ಪರಾಗಸ್ಪರ್ಶದಮೇಲೆ ಅವಲಂಭಿತವಾಗಿದೆ.
ಇದರ ಪರಿಣಾಮ ತುಂಬಾ ಭಯಾನಕವಾಗಿದೆ. ಜೇನು ಹುಳಗಳು ನಾಶವಾದರೆ, ಹೂವುಗಳ ಪರಾಗಸ್ಪರ್ಶ ಕ್ರಿಯೆ ಅಸಾಧ್ಯವಾಗುತ್ತದೆ. ಇದರಿಂದ ಹಣ್ಣು, ಕಾಯಿ. ತರಕಾರಿ ಬೆಳೆ ಹಾಗೂ ಮೇವು ಬೆಳೆಗಳ ಉತ್ಪಾದನೆ ಕುಗ್ಗುತ್ತದೆ. ಹೂವುಗಳು ಫಲ ನೀಡುವುದಿಲ್ಲ. ಬೆಳೆಗಳು ಬೆಳೆಯುವುದಿಲ್ಲ. ಹಣ್ಣು ತರಕಾರಿ ಬೆಳೆ ಮೇವು ಇವುಗಳ ಕೊರತೆಯಿಂದ ಆಹಾರ ಸರಪಳಿ ಕುಸಿಯುತ್ತದೆ. ಪಶುಪಾಲನೆಗೆ ಹಿನ್ನಡೆಯಾಗುತ್ತದೆ. ಮಾನವರಿಗೆ ಆಹಾರ ಕೊರತೆ ಉಂಟಾಗುತ್ತದೆ. ಪರಿಸರ ಸಮತೋಲನ ಸಂಪೂರ್ಣ ಹಾಳಾಗಿ ಮಾನವನ ಬದುಕಿನ ಮೇಲೆ ನೇರ ಪರಿಣಾಮ ಬೀರುತ್ತದೆ
ಜೇನುಹುಳುಗಳ ಸಂತತಿ ನಶಿಸಿದರೆ ಭೂಮಿಯಲ್ಲಿ ಮಾನವ ಜನಾಂಗ, ಪ್ರಾಣಿ, ಪಶುಪಕ್ಷಿಗಳು ಮತ್ತು ಇತರ ಜೀವಿಗಳಿಗೆ ಆಹಾರ ಸಿಗದೆ ಜೀವಸಂಕುಲವೇ ನಾಶವಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಪ್ರಸಿದ್ಧ ವಿಜ್ಞಾನಿ ಅಲ್ಬರ್ಟ್ ಐನ್ ಸ್ಟೈನ್ ಹೇಳಿದಂತೆ ಜೇನುಹುಳುಗಳು ನಾಶವಾದರೆ ಮಾನವ ಕುಲವೂ ಕೆಲವೇ ವರ್ಷಗಳಲ್ಲಿ ನಾಶವಾಗುತ್ತದೆ ಎಂಬ ಹೇಳಿಕೆ ಈ ಭೀತಿಯ ತೀವೃತೆಯನ್ನು ಸೃಷ್ಟಿಸುತ್ತದೆಯಲ್ಲದೆ ಈ ಮಾತು ಕೇವಲ ಎಚ್ಚರಿಕೆ ಅಷ್ಟೆ ಅಲ್ಲ, ಅದು ನಿಜದ ಭವಿಷ್ಯದ ಚಿತ್ರಣವಾಗಿದೆ.
ಈ ಹಿನ್ನೆಲೆಯಲ್ಲಿ ಜೇನುಹುಳಗಳ ಸಂರಕ್ಷಣೆ ಒಂದು ಪರಿಸರ ಚಳುವಳಿಯಷ್ಟೇ ಅಲ್ಲ, ಅದು ಮಾನವ ಕುಲದ ಭವಿಷ್ಯವನ್ನು ಕಾಪಾಡುವ ಅನಿವಾರ್ಯ ಕಾರ್ಯವಾಗಬೇಕು. ಕೀಟನಾಶಕಗಳ ನಿಯಂತ್ರಿತ ಬಳಕೆ, ಹೂ-ಗಿಡಗಳ ಬೆಳೆಸುವಿಕೆ ಮತ್ತು ಪರಿಸರ ಸ್ನೇಹಿ ಕೃಷಿ ಪದ್ಧತಿಗಳ ಅನುಸರಣೆ ಇವುಗಳ ಮೂಲಕ ಮಾತ್ರ ಜೇನು ಹುಳುಗಳ ಹಾಗೂ ಅದರ ಮೂಲಕ ಮನಕುಲದ ಉಳಿವನ್ನು ಖಚಿತಪಡಿಸಬಹುದು.
ಜೇನುಹುಳು ಪ್ರಕೃತಿಯ ಅತ್ಯಂತ ಮಹತ್ವದ ಜೀವಿಗಳಲ್ಲೊಂದು ಅದು ಕೇವಲ ಜೇನು ಉತ್ಪಾದನೆಯಲ್ಲ ಪರಾಗಸ್ಪರ್ಶದ ಮೂಲಕ ಸಸ್ಯ ಜೀವನದ ನಿರಂತರತೆಯನ್ನು ಕಾಯ್ದುಕೊಳ್ಳುವ ಜೇನುಹುಳುಗಳ ಅಸ್ತಿತ್ವ ಮಾನವ ಕುಲದ ಆಹಾರ ಭದ್ರತೆಗೆ ನೇರವಾಗಿ ಸಂಬಂಧಿಸಿರುವದರಿಂದ ಜೇನುಹುಳುಗಳನ್ನು ಕಾಪಾಡುವುದು ಕೇವಲ ಪರಿಸರಪ್ರಿಯರ ಕರ್ತವ್ಯವಲ್ಲ ಅದು ಪ್ರತಿಯೊಬ್ಬ ಮಾನವನ ಸಾಮಾಜಿಕ ಹೊಣೆಗಾರಿಯಾಗಿದ್ದು,
ಈ ನಿಟ್ಟಿನಲ್ಲಿ ಕೀಟನಾಶಕಗಳ ನಿಯಂತ್ರಿತ ಬಳಕೆ, ಹೂ-ಗಿಡಗಳನ್ನು ಮತ್ತು ಮರಗಳನ್ನು ಹೆಚ್ಚಾಗಿ ನೆಡುವುದು. ಅರಣ್ಯಗಳನ್ನು ಸಂರಕ್ಷಿಸುವುದು, ಮತ್ತು ಪರಿಸರ ಸ್ನೇಹಿ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುವುದರಿಂದ, ಜೇನುಗಾರಿಕೆಗೆ ಬೆಂಬಲ ನೀಡುವುದರಿಂದ, ಅರಿವು, ಸಂಶೋಧನೆ ಮೂಲಕ ಜೇನು ಹುಳುಗಳ ಸಂರಕ್ಷಣೆ ಮಾಡಬಹುದಾಗಿದೆ. ಇದು ಪ್ರಕೃತಿಯ ಸಂರಕ್ಷಣೆ, ಪ್ರಕೃತಿಯ ಉಳಿವು ಅಂದರೆ ನಮ್ಮ ಬದುಕಿನ ಉಳಿವು.
ಆದ್ದರಿಂದ ಅಳಿವಿನಂಚಿನಲ್ಲಿರುವ ಜೇನು ಹುಳುಗಳನ್ನು ಕಾಪಾಡೋಣ-ಪ್ರಕೃತಿಯನ್ನು ಕಾಪಾಡೋಣ- ನಮ್ಮ ಭವಿಷ್ಯವನ್ನು ಕಾಪಾಡೋಣ. ಜೇನುಹುಳುಗಳನ್ನು ರಕ್ಷಿಸುವುದು ನಮ್ಮ ಮುಂದಿನ ಪೀಳಿಗೆಗಳನ್ನು ರಕ್ಷಿಸುವ ಮೊದಲ ಹೆಜ್ಜೆ.

ಲೇಖಕರು : ಅನಂತ ಪಪ್ಪು
ಮೋ:೯೪೪೮೫೨೭೮೭೦


