ಕೃಷಿ ವಿಜ್ಞಾನ ಕೇಂದ್ರದಲ್ಲಿ ಹನ್ನೊಂದನೇಯ ವೈಜ್ಞಾನಿಕ ಸಲಹಾ ಸಮಿತಿ ಸಭೆ
ನೇಸರಗಿ: ಇತ್ತೀಚೆಗೆ ಮತ್ತಿಕೊಪ್ಪದ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹನ್ನೊಂದನೇಯ ವೈಜ್ಞಾನಿಕ ಸಲಹಾ ಸಮಿತಿ ಸಭೆಯನ್ನು ನಡೆಸಲಾಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕೇಂದ್ರದ ಕಾರ್ಯಾಧ್ಯಕ್ಷರಾದ ಶ್ರೀ ಬಿ. ಆರ್. ಪಾಟೀಲ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆಯವರ ಆಶಯದಂತೆ ೨೦೧೧ ರಲ್ಲಿ ಸ್ಥಾಪನೆಗೊಂಡ ಕೃಷಿ ವಿಜ್ಞಾನ ಕೇಂದ್ರವು ರೈತ ಸಮುದಾಯದ ಕಲ್ಯಾಣದ ದೃಷ್ಟಿಯಿಂದ ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ರೈತ ಸಮುದಾಯಕ್ಕೆ ಅತ್ಯುತ್ತಮ ಸೇವೆಗಳನ್ನು ಒದಗಿಸಿ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಉತ್ತಮ ಸಾಧನೆ ಮಾಡಿದೆ.
ಕರ್ನಾಟಕ ಸರ್ಕಾರದ ಮಾನ್ಯ ಕೃಷಿ ಸಚಿವರಾದ ಶ್ರೀ ಎನ್. ಚಲುವರಾಯಸ್ವಾಮಿಯವರು ಭೇಟಿ ನೀಡಿ, ಕೇಂದ್ರದ ಉದ್ಯಮಶೀಲತೆ ಅಭಿವೃದ್ಧಿ ಯೋಜನೆಯಡಿ ಸ್ಥಾಪಿಸಿದ ಒಂದು ಕಣ್ಣಿನ ಕಬ್ಬು ಸಸಿಗಳನ್ನು ತಯಾರಿಸುವ ನೇಚರ್ ನರ್ಸರಿ ಯನ್ನು ಉದ್ಘಾಟಿಸಿದ್ದಾರೆ ಹಾಗೂ ಇಲ್ಲಿಯವರೆಗೆ ಈ ನರ್ಸರಿಯಿಂದ ೫ ಲಕ್ಷ ಸಸಿ ಹಾಗೂ ಕಣ್ಣುಗಳನ್ನು ರೈತರಿಗೆ ಪೂರೈಸಲಾಗಿದೆ. ಕಾರಣ, ಕೃಷಿ ವಿಜ್ಞಾನ ಕೇಂದ್ರದ ಪ್ರಯತ್ನದಿಂದ ಈ ಹಂಗಾಮಿನಲ್ಲಿ ಈ ತಳಿಯು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸುಮಾರು ೮೦೦ ಎಕರೆ ಪ್ರದೇಶದಲ್ಲಿ ವಿಸ್ತಾರಗೊಂಡಿದೆ. ಕೃಷಿ ವಿಜ್ಞಾನ ಕೇಂದ್ರವು ಈ ತಳಿಯ ಬೀಜಗಳನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪೂರೈಸಿ ಮುಂಬರುವ ವ?ದಲ್ಲಿ ಸುಮಾರು ೧೦,೦೦೦ ಎಕರೆ ಪ್ರದೇಶಕ್ಕೆ ಬೀಜಗಳನ್ನು ತಯಾರಿಸಿ ರೈತರಿಗೆ ನೀಡುವ ಗುರಿಯನ್ನು ಹೊಂದಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಕಾರ್ಯಾಧ್ಯಕ್ಷ ಶ್ರೀ ಬಿ. ಆರ್. ಪಾಟೀಲ ತಿಳಿಸಿದರು.
ಕೆವಿಕೆಯ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ಡಾ. ಮಂಜುನಾಥ ಚೌರಡ್ಡಿಯವರು ಹಿಂದಿನ ವೈಜ್ಞಾನಿಕ ಸಲಹಾ ಸಮಿತಿ ಸಭೆಯಲ್ಲಿ ನೀಡಿರುವ ಸಲಹೆಗಳಿಗೆ ತೆಗೆದುಕೊಂಡ ಕ್ರಮಗಳ ಕುರಿತು, ೨೦೨೫-೨೬ ರ ಪ್ರಗತಿ ವರದಿ ಹಾಗೂ ೨೦೨೬-೨೭ ರ ಕ್ರಿಯಾ ಯೋಜನೆಯ ಪ್ರಸ್ತಾವನೆಯನ್ನು ಮಂಡಿಸಿದರು.
ಸಭೆಯಲ್ಲಿ ಧಾರವಾಡ ಭಾರತೀಯ ಹುಲ್ಲು ಮತ್ತು ಮೇವು ಸಂಶೋಧನಾ ಸಂಸ್ಥೆಯ ಪ್ರಧಾನ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಕೆ. ಶ್ರೀಧರ, ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರಾದ ಹೆಚ್. ಡಿ. ಕೋಳೇಕರ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಮಹಾಂತೇಶ ಮುರಗೋಡ, ಶ್ರೀಮತಿ ಶೀಲಾ ವ್ಹಿ. ಮುರಗೋಡ, ಅರಣ್ಯ ಇಲಾಖೆಯ ರಾಜೇಶ್ವರಿ ಈರನಟ್ಟಿ, ಶ್ರೀನಾಥ ಎಮ್. ಕಡೋಲಕರ ನೀರಾವರಿ ಇಲಾಖೆಯ ಆನಂದ ಕುಮಾರ ಎಮ್., ಪಶುಸಂಗೋಪನೆ ಇಲಾಖೆಯ ಡಾ. ಸುದರ್ಶನ ಗಡಾದ, ರೇಷ್ಮೆ ಇಲಾಖೆಯ ಪಿ. ಎಸ್. ಇಮಗೌಡನವರ, ಎಮ್. ಬಿ. ಶೇಖ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ಕೃಷಿ ನಿರ್ದೇಶಕ ಸತ್ಯನಾರಾಯಣ ಭಟ್, ತುಕ್ಕಾನಟ್ಟಿ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ. ದತ್ತಾ ಮೇತ್ರೆ, ಲೀಡ್ ಬ್ಯಾಂಕಿನ ಪಿ. ಆರ್. ಘೋಡಕೆ, ಕೆಎಲ್‌ಇ ವೇಣುಧ್ವನಿಯ ಮನಿ? ಸನ್‌ನಾಯ್ಕ, ಹಾಗೂ ಪ್ರಗತಿಪರ ರೈತರಾದ ಶ್ರೀಮತಿ ವಿಜಯಲಕ್ಷ್ಮೀ ನಾಡಗೌಡರ, ಪ್ರಶಾಂತ ನೇಗೂರ, ನಾಗರಾಜ ತಲ್ಲೂರ, ರವಿ ಕುರಬೇಟ, ಭಾಗವಹಿಸಿ ಸಲಹೆ ನೀಡಿದರು. ರೈತರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ರೈತರ ಸಮಸ್ಯೆಗಳನ್ನು ಚರ್ಚಿಸಿ ಕೃಷಿ ವಿಜ್ಞಾನ ಕೇಂದ್ರದ ಕಡೆಯಿಂದ ಮುಂಬರುವ ವರ್ಷದಲ್ಲಿ ಅನುಷ್ಠಾನಗೊಳಿಸಬಹುದಾದ ಕ್ರಿಯಾ ಯೋಜನೆಗಳನ್ನು ನಿರ್ಧರಿಸಿದರು.
ಕೇಂದ್ರದ ವಿಜ್ಞಾನಿಗಳಾದ ಡಾ. ಎಸ್. ಎಸ್. ಹಿರೇಮಠ, ಶ್ರೀ ಎಸ್. ಎಮ್. ವಾರದ, ಜಿ. ಬಿ. ವಿಶ್ವನಾಥ, ಪ್ರವೀಣ ಯಡಹಳ್ಳಿ, ಡಾ. ಭಾವಿನಿ ಪಾಟೀಲ, ಡಾ. ಗುರುರಾಜ ಕೌಜಲಗಿ ಹಾಗೂ ಶಂಕರಗೌಡ ಪಾಟೀಲ ಚರ್ಚೆಯಲ್ಲಿ ಪಾಲ್ಗೊಂಡು ಯೋಜನೆ ರೂಪಿಸುವಲ್ಲಿ ಸಲಹೆಗಳನ್ನು ಸ್ವೀಕರಿಸಿದರು. ರಾಷ್ಟ್ರ ಗೀತೆಯೊಂದಿಗೆ ಸಭೆಯು ಮುಕ್ತಾಯವಾಯಿತು.


