ಬಳ್ಳಾರಿ:ಮಾ,11- ರಾಜ್ಯಸಭಾ ಸದಸ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಸೈಯ್ಯದ್ ನಾಸೀರ್ ಹುಸೇನ್ ಅವರು ಎಲ್ಪಿಜಿ, ಇಂಧನ ಹಾಗೂ ಇತರೆ ಅಗತ್ಯ ವಸ್ತುಗಳ ಕೊರತೆಯ ಬಗ್ಗೆ ಕೇಂದ್ರ ಸರ್ಕಾರದ ನಡೆಯನ್ನು ಪ್ರಶ್ನಿಸಿದ್ದಾರೆ.
ಪಶ್ಚಿಮಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವು ಈಗಾಗಲೇ ಇಂಧನ ಸರಬರಾಜಿನ ಮೇಲೆ ಪರಿಣಾಮ ಬೀರುವ ಲಕ್ಷಣಗಳು ಕಾಣಿಸುತ್ತಿವೆ. ಎಲ್ಪಿಜಿ, ಇಂಧನ ಹಾಗೂ ಇತರೆ ಅಗತ್ಯ ವಸ್ತುಗಳ ಕೊರತೆ ಇದೆ. ಬೆಲೆ ಏರಿಕೆಯ ಸಾಧ್ಯತೆ ಇದ್ದು ಇದು ಗಂಭೀರ ವಿಷಯವಾಗಿದೆ. ಸರಬರಾಜಿನ ವ್ಯತ್ಯಯಗಳನ್ನು ನಿರ್ವಹಿಸಲು ಸಧ್ಯ ಸಂಗ್ರಹದಲ್ಲಿರುವುದನ್ನು ಬಳಸಲು ಪ್ರಾರಂಭಿಸಿದರೆ, ಅವು ಎಷ್ಟು ಕಾಲ ದೇಶದ ಬೇಡಿಕೆಯನ್ನು ಪೂರೈಸಲು ಸಾಕಾಗುತ್ತವೆ ಎಂಬುದನ್ನು ಸರ್ಕಾರ ಸ್ಪಷ್ಟವಾಗಿ ತಿಳಿಸಬೇಕು. ಯುದ್ದ ಮುಂದುವರಿದರೆ ಯಾವ ರೀತಿಯ ತುರ್ತು ಯೋಜನೆಗಳನ್ನು ರೂಪಿಸಲಾಗಿದೆ ಎಂಬುದನ್ನೂ ವಿವರಿಸಬೇಕು ಎಂದಿದ್ದಾರೆ.
ತಳ ಮಟ್ಟದಲ್ಲಿ ಒತ್ತಡದ ಮೊದಲ ಲಕ್ಷಣಗಳು ಈಗಾಗಲೇ ಗೋಚರಿಸುತ್ತಿವೆ. ಕರ್ನಾಟಕದ ಕೆಲವು ಭಾಗಗಳಲ್ಲಿ ಎಲ್ಪಿಜಿ ಬೆಲೆ ಏರಿಕೆಯಾಗುತ್ತಿರುವ ವರದಿಗಳು ಬರುತ್ತಿವೆ. ಹೋಟೆಲ್ ಹಾಗೂ ಉಪಹಾರ ಗೃಹಗಳು ಗ್ಯಾಸ್ ಸಿಲಿಂಡರ್ ಸಮಸ್ಯೆ ಎದುರಿಸುತ್ತಿದ್ದು, ಕೊರತೆಯ ಭಯದಿಂದ ಜನರು ಗ್ಯಾಸ್ ಸಿಲಿಂಡರ್ಗಳನ್ನು ಸಂಗ್ರಹಿಸಿಕೊಳ್ಳಲು ಆರಂಭಿಸಿದ್ದಾರೆ. ಯುದ್ದವು ಹಲವಾರು ದೇಶಗಳಿಗೆ ವ್ಯಾಪಿಸಿಕೊಂಡಿದ್ದು, ನಿಲ್ಲುವ ಯಾವುದೇ ಸ್ಪಷ್ಟ ಲಕ್ಷಣಗಳು ಕಾಣಿಸುತ್ತಿಲ್ಲ. ಇದರಿಂದ ಇಂಧನ ಕೊರತೆ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ಅಗತ್ಯ ವಸ್ತುಗಳ ಬೆಲೆ, ದರ ಏರಿಕೆ ಹಾಗೂ ಜನರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲಿದೆ.
ಆದ್ದರಿಂದ ಈ ವಿಷಯದ ಕುರಿತು ಸಂಸತ್ತಿನಲ್ಲಿ ಸಂಪೂರ್ಣ ಹಾಗೂ ಮುಕ್ತ ಚರ್ಚೆ ನಡೆಯಬೇಕು ಎಂದಿದ್ದಾರೆ


