ನಿರೂಪಣಾ ಲೆಜೆಂಡ್ ’ಅಪರ್ಣಾ ನೆನಪು’ ನಿತ್ಯ ಜೀವಂತ!

Ravi Talawar
ನಿರೂಪಣಾ ಲೆಜೆಂಡ್ ’ಅಪರ್ಣಾ ನೆನಪು’ ನಿತ್ಯ ಜೀವಂತ!
WhatsApp Group Join Now
Telegram Group Join Now

ಸ್ಪಷ್ಟತೆ, ನಿರರ್ಗಳತೆ, ಸರಳತೆ, ಭಾವುಕತೆ, ಅಚ್ಚುಕಟ್ಟಾದ ಪ್ರಸ್ತುತತೆ ಇವೆಲ್ಲವೂ ಅಪ್ಪಟ ಕನ್ನಡತಿ ಅಪರ್ಣಾ ಅವರ ವಿಶೇಷತೆ! ’ಮಸಣದ ಹೂವು’ ಚಿತ್ರದ ಮುಖೇನ ಕನ್ನಡ ಚಿತ್ರ ಜಗತ್ತಿಗೆ ಪಾದಾರ್ಪಣೆ ಮಾಡಿದ ಸ್ಫುರದ್ರೂಪಿ ಅಪರ್ಣಾ ನಂತರದಲ್ಲಿ ನಿರೂಪಣಾ ಕ್ಷೇತ್ರದತ್ತ ವಾಲಿದರು. ಕರ್ನಾಟಕದಲ್ಲಿ ನಿರೂಪಣೆಗೂ ಒಂದು ಕ್ಷೇತ್ರವಿದೆ, ಅದೂ ಒಂದು ಉದ್ಯೋಗ, ಸಾಧಿಸಬಹುದಾದ ಕಾರ್ಯ ಅಂತ ನನಗೆ ಅನ್ನಿಸಿದ್ದು ಅಪರ್ಣಾ ಅವರು ಮತ್ತು ಶಂಕರ ಪ್ರಕಾಶ ಅವರನ್ನೇ ನೋಡಿ.

ಕಾರ್ಯಕ್ರಮದ ಯಶಸ್ವಿಗೆ ನಿರೂಪಕರು ಪ್ರಮುಖ. ನಿರೂಪಕರು ಆಯಾ ಕಾರ್ಯಕ್ರಮದ ದಂಡನಾಯಕರು ಇದ್ದಂತೆ! ಅಂತಹ ದಂಡನಾಯಕತ್ವನ್ನು ಯಶಸ್ವಿಯಾಗಿ ನಿರ್ವಹಿಸಿದ ನಿರೂಪಣಾ ಚತುರೆ ಅಪರ್ಣಾ ಕನ್ನಡಿಗರ ಜನಮಾನಸದಲ್ಲಿ ಚಿರಸ್ಥಾಯಿ! ಸಾವಿರಾರು ಸರ್ಕಾರಿ, ಖಾಸಗಿ ಕಾರ್ಯಕ್ರಮಗಳ ನಿರೂಪಣೆ, ಮೆಟ್ರೋಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಇವರದೇ ಧ್ವನಿ ಈಗ ಜೀವಂತವಾಗಿದೆ! ಬಿಗ್‌ಬಾಸ್, ಮಜಾ ಟಾಕೀಸ್‌ಗಳಂತಹ ರಿಯಾಲಿಟಿ ಶೋಗಳಲ್ಲಿಯೂ ಅಪರ್ಣಾ ಮಿಂಚಿ ಜನರನ್ನು ರಂಜಿಸಿದ್ದಾರೆ.

ನಿರೂಪಣಾ ಜಗತ್ತಿನಲ್ಲಿ ಗಡಸು ಧ್ಚನಿ ಮತ್ತು ಮಾಧುರ್ಯಪೂರ್ಣ ಧ್ಚನಿ ಜೋಡಿಯ ಶಂಕರ ಪ್ರಕಾಶ ಮತ್ತು ಅಪರ್ಣಾ ಅವರ ಸಾವಿರಾರು ವೇದಿಕೆ ಕಾರ್ಯಕ್ರಮಗಳು ಇವತ್ತಿಗೂ ಜೀವಂತಿಕೆಯನ್ನು ನಿರೂಪಿಸುತ್ತವೆ. ವೈಯಕ್ತಿಕವಾಗಿ ಭಾಷೆ, ಸಾಹಿತ್ಯ, ಸಂಗೀತ, ಕಲೆ, ಓದು, ಬರವಣಿಗೆ ಇವೆಲ್ಲವೂ ಅತ್ಯಾಪ್ತ ಅನ್ನಿಸುವ ಹವ್ಯಾಸಗಳು. ಅದರಲ್ಲೂ ನಿರೂಪಣೆ ನನ್ನನ್ನು ಅತೀವವಾಗಿ ಸೆಳೆದು ಬಿಡುತ್ತದೆ! ಯಾವುದೇ ಕಾರ್ಯಕ್ರಮವಿದ್ದರೂ ಅಲ್ಲಿ ಕೆಲಹೊತ್ತು ಎದುರಿರುವ ನಿರೂಪಕರ ಮೇಲೆಯೇ ನನ್ನ ನೆದರು ಕೇಂದ್ರೀಕರಿಸಿರುತ್ತದೆ.

ಪಿಯುಸಿಯಲ್ಲಿದ್ದಾಗಿನಿಂದಲೂ ಸಾಹಿತ್ಯದ ಹವ್ಯಾಸವನ್ನು ಸಹಜವಾಗಿ ಮೈಗೂಡಿಸಿಕೊಂಡಿದ್ದರಿಂದ ಹಲವಾರು ಸಣ್ಣಪುಟ್ಟ ಕಾರ್ಯಕ್ರಮಗಳಲ್ಲಿ ನಿರೂಪಣೆಯ ಜವಾಬ್ದಾರಿಯನ್ನೂ ನಿರ್ವಹಿಸಿದ್ದೇನೆ. ನಿರೂಪಣೆಯ ಕುರಿತು ವಿಶೇಷ ಆಸಕ್ತಿ, ಕಾಳಜಿ, ಕುತೂಹಲ ಸಹಜವಾಗಿ ರೂಢಿಸಿಕೊಂಡಿದ್ದೇನೆ. ಹೀಗಾಗಿ ನಿರೂಪಣಾ ಜಗತ್ತಿನ ಲೆಜೆಂಡ್‌ಗಳ ಸಂತಸ, ಸಂಕಟದ ಕ್ಷಣಗಳನ್ನೂ ನಾನೂ ಭಾವಿಸಿ, ಜೀವಿಸುತ್ತೇನೆ.

ಇಂಥ ನನ್ನಿಷ್ಟದ ಆಂಕರಿಂಗ್ ಲೆಜೆಂಡ್‌ಗಳಲ್ಲಿ ಅಚ್ಚ ಕನ್ನಡದ ಸ್ವಚ್ಛ ಪ್ರತಿಭೆ, ಅಂದಗಾತಿ ಅಪರ್ಣಾ ಅವರು ಒಬ್ಬರು. ವೇದಿಕೆಗೆ ತಕ್ಕಂತೆ ನವರಸಗಳನ್ನೂ ಪೂರ್ಣವಾಗಿ ಭರಿಸಿ ನಿರೂಪಿಸುವ ಅವರ ಚಾಕಚಕ್ಯತೆ ನನಗಂತೂ ಅತೀವ ಇಷ್ಟ! ಅನಿರೀಕ್ಷಿತ ಅನ್ನುವಂತೆ ಇಂಥ ಲೆಜೆಂಡ್ ಆಂಕರ್ ಅವರನ್ನು ಭೇಟಿ ಮಾಡಿದ ಕ್ಷಣ ನೆನಪಾದರೆ ಇವತ್ತಿಗೂ ಹೃದಯ ಡಿಂಡಮ ನಾದ ಹೊರಡಿಸುತ್ತದೆ!

೨೦೧೧ ಮಾರ್ಚ್ ೧೧ ರಂದು ಬೆಳಗಾವಿಯಲ್ಲಿ ಏರ್ಪಡಿಸಿದ್ದ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಖ್ಯ ವೇದಿಕೆಯ ಪ್ರಮುಖ ನಿರೂಪಕಿಯಾಗಿ ಅಪರ್ಣಾ ಮತ್ತು ಶಂಕರ ಪ್ರಕಾಶ ಅವರು ನಮ್ಮೆಲ್ಲರನ್ನು ಹಿಡಿದಿಟ್ಟುಕೊಂಡಿದ್ದರು. ಅವತ್ತು ಮಧ್ಯರಾತ್ರಿ ಸರಿಸುಮಾರು ೨ ಗಂಟೆ ಹೊತ್ತಿಗೆ ಅಪರ್ಣಾ ಅವರು ಒಬ್ಬರೇ ಚಂದನವನದ ನೃತ್ಯ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದರು. ಹತ್ತಾರೂ ಕಲಾವಿದರೂ ಒಟ್ಟಿಗೇ ವೇದಿಕೆ ಏರಿದ ಸಂಭ್ರಮದಲ್ಲಿ ಎಲ್ಲರೂ ವೇದಿಕೆ ಮೇಲೇರಿ ಫೋಟೋ, ವಿಡಿಯೋಗಳನ್ನು ತೆಗೆದುಕೊಳ್ಳುವುದಕ್ಕೆ ಶುರುಮಾಡಿದರು. ನಾನೂ ಅವರಲ್ಲಿ ನಾನೂ ಒಬ್ಬ.

ಹೀಗೆ ವೇದಿಕೆ ಏರಿದ ನಂತರ ಎಲ್ಲರೂ ಕುಣಿಯುವವರನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದರೆ ನಾನು ಮಾತ್ರ ಅಪರ್ಣಾ ಅವರ ಪಕ್ಕದಲ್ಲೇ ಕುಳಿತುಕೊಂಡು ಅವರನ್ನೇ ಕಣ್ತುಂಬಿಕೊಂಡಿದ್ದೆ. ಅಬ್ಬಾ.. ಎಂಥ ಸ್ಫುರದ್ರೂಪಿ, ಎಷ್ಟೊಂದು ಸಭ್ಯ ಉಡುಗೆ, ಎಷ್ಟು ಸರಳ ಕಲಾವಿದೆ ಅಂತನ್ನಿಸಿಬಿಟ್ಟಿತು. ಆ ವಿಶಾಲ ವೇದಿಕೆಯಲ್ಲಿ ಕಲಾವಿದರು ಹಾಡಿಗೆ ಹೆಜ್ಜೆ ಹಾಕುತ್ತಿದ್ದರೆ, ಶಾಲೆಗಳಲ್ಲಿ ಮಕ್ಕಳು ಕುಳಿತು ಪಾಠ ಕೇಳುವಂತೆವೇದಿಕೆಯ ಕೆಳಗಡೆ ಒಂದು ಬದಿಗೆ ಕುಳಿತು ನೋಡುತ್ತಿದ್ದ ಅಪರ್ಣಾ ಅವರನ್ನು ನೋಡಿ ಆಶ್ಚರ್ಯ ಅನ್ನಿಸಿತ್ತು. ನನ್ನ ಅದೃಷ್ಟ ಅವರ ಪಕ್ಕದಲ್ಲೇ ಕುಳಿತು ನಾನು ಅವರನ್ನೇ ಗಮನಿಸುತ್ತಿದ್ದೆ. ಮಾತನಾಡಿಸಬೇಕು, ನಿರೂಪಣೆಯ ಕುರಿತು ಒಂದಿಷ್ಟು ಪ್ರಶ್ನೆಗಳು, ಸಲಹೆಗಳನ್ನು ಕೇಳಬೇಕು ಅಂದುಕೊಳ್ಳುತ್ತಿದ್ದೆ. ಆದರೆ ಅಷ್ಟೊಂದು ಧ್ಯರ್ಯ ಬರಲಿಲ್ಲ, ಯಾಕೆ ಅಂತ ಗೊತ್ತಿಲ್ಲ.

ಅಂತೂ ನಿರೂಪಣಾ ಚತುರೆ ಅಪರ್ಣೆ ಇನ್ನು ನೆನಪು ಮಾತ್ರ ಅಂತನ್ನುವ ವಿದಾಯ ಹೇಳಿದ್ದಾರೆ. ನಿರೂಪಣಾ ಜಗತ್ತಿಗೆ ಅವರು ನೀಡಿದ ಕೊಡುಗೆ ಚಿರಸ್ಥಾಯಿಯಾಗಿರಲಿ, ಅವರ ದಾಖಲೆ ನಿರೂಪಣಾ ಕ್ಷೇತ್ರದಲ್ಲಿ ಮಾರ್ಗದರ್ಶಿಯಾಗಿರಲಿ, ನೆನಪು ನಿತ್ಯವೂ ಜೀವಂತವಾಗಿರಲಿ!

♦ ರವಿ ಸುರೇಶ, ಹವ್ಯಾಸಿ ಬರಹಗಾರ

 

 

 

                                                                                                                                                       

 

WhatsApp Group Join Now
Telegram Group Join Now
Share This Article