ಬೆಳಗಾವಿ: “ಎಂಇಎಸ್ ಎಂಥ ಸಂಘಟನೆ ಅಂತಾ ಇಡೀ ದೇಶಕ್ಕೆ ಗೊತ್ತಿದೆ. ಪಾಕಿಸ್ತಾನದ ಭಯೋತ್ಪಾದಕರಿಗೂ ಎಂಇಎಸ್ ಮತ್ತು ಶಿವಸೇನೆ ಕಾರ್ಯಕರ್ತರಿಗೂ ಯಾವುದೇ ವ್ಯತ್ಯಾಸ ಇಲ್ಲ” ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಯಣಗೌಡ ಹರಿಹಾಯ್ದರು.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, “ಒಬ್ಬ ಚಾಲಕ, ನಿರ್ವಾಹಕರನ್ನು ಬಸ್ನಿಂದ ಕೆಳಗಿಳಿಸಿ ಬಣ್ಣ ಹಾಕಿ, ಅವರಿಗೆ ಹಾರ ಹಾಕಿ ಜೈ ಮಹಾರಾಷ್ಟ್ರ ಅಂತಾ ಘೋಷಣೆ ಕೂಗಿಸುತ್ತೀರಿ. ಇಡೀ ಬೆಳಗಾವಿಯಲ್ಲಿರುವ ಪ್ರತಿಯೊಬ್ಬ ಮರಾಠಿಗನ ಬಾಯಿಯಿಂದಲೂ ಕರ್ನಾಟಕಕ್ಕೆ ಜೈ ಎನಿಸುವ ಕಾಲ ಬೇಗ ಬರುತ್ತದೆ. ಇದನ್ನೆಲ್ಲ ಬಿಟ್ಟು ಬಿಡಿ. ಬೆಳಗಾವಿಯಲ್ಲಿ ಎಂಇಎಸ್ ಸಂಪೂರ್ಣ ಅಂತ್ಯವಾಗಿದೆ. ಆ ಹೊಟ್ಟೆ ಉರಿಗೆ ಇಂಥ ಆಟ ಶುರು ಮಾಡಿದ್ದಾರೆ. ಬೆಳಗಾವಿ ಅಷ್ಟೇ ಅಲ್ಲದೇ ಇಡೀ ಕರ್ನಾಟಕದಲ್ಲಿ ಎಂಇಎಸ್ ಇಲ್ಲದಂತೆ ಮಾಡೋವರೆಗೂ ಕರವೇ ಹೋರಾಟ ಬಿಡುವುದಿಲ್ಲ” ಎಂದು ಎಚ್ಚರಿಸಿದರು.
ನಾನು ಬೆಳಗಾವಿಗೆ ಬಂದಷ್ಟು ಯಾವ ಸಚಿವರು ಬಂದಿಲ್ಲ: “ಇಡೀ ಕರ್ನಾಟಕದಲ್ಲಿ ಎಲ್ಲ ಕನ್ನಡಪರ ಹೋರಾಟಗಾರರ ಮೇಲಿನ ಕೇಸ್ ತೆಗೆಯುವಂತೆ ಹೋರಾಡುತ್ತಿರುವುದೇ ಕರವೇ. ಬೆಳಗಾವಿಗೆ ನಾನು ಬಂದಷ್ಟು ಯಾವ ಕರ್ನಾಟಕದ ಮುಖ್ಯಮಂತ್ರಿ, ಸಚಿವರೂ ಬಂದಿಲ್ಲ. ಬೆಳಗಾವಿ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ, ಸರ್ಕಾರದ ಮೇಲೆ ನನ್ನಷ್ಟು ಒತ್ತಡ ಬೇರೆ ಯಾರೂ ಹಾಕಿಲ್ಲ. ರಾಜ್ಯದ ಮುಖ್ಯಮಂತ್ರಿ ಒಳಗೊಂಡಂತೆ ಈ ಭಾಗದ ಮಂತ್ರಿಗಳನ್ನು ಒಳಗೊಂಡು ಯಾರೂ ಉಸಿರು ಬಿಡದೇ ಇದ್ದಾಗ ಮಾತಾಡಿದ್ದು, ಹೋರಾಟ ಮಾಡಿದ್ದು ಕರವೇ ಮಾತ್ರ” ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.