ದೃಢ ನಿಶ್ಚಯ, ಕಠಿಣ ಶ್ರಮ ಯಶಸ್ಸಿನ ಶಿಖರವೇರಲು ಪ್ರೇರೇಪಿಸುತ್ತದೆ: ನಾರಾಯಣ ಭರಮಣಿ

Ravi Talawar
ದೃಢ ನಿಶ್ಚಯ, ಕಠಿಣ ಶ್ರಮ ಯಶಸ್ಸಿನ ಶಿಖರವೇರಲು ಪ್ರೇರೇಪಿಸುತ್ತದೆ: ನಾರಾಯಣ ಭರಮಣಿ
WhatsApp Group Join Now
Telegram Group Join Now

ಬೆಳಗಾವಿ: ನಮ್ಮಲ್ಲಿನ ಶಿಸ್ತು ನಮ್ಮ ಕರ್ತವ್ಯ ನಿಷ್ಠೆಯನ್ನು ತೋರಿಸುತ್ತದೆ. ವಿದ್ಯಾರ್ಥಿಗಳು ದೃಢ ಸಂಕಲ್ಪದೊಂದಿಗೆ ಸತತ ಪರಿಶ್ರಮ ವಹಿಸಿದರೆ ನಿಶ್ಚಿತ ಗುರಿ ತಲುಪಲು ಸಾಧ್ಯ. ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನದಿಂದ ವಿಚಲಿತರಾಗದೇ  ದೃಢ ನಿಶ್ಚಯ, ಕಠಿಣ ಪರಿಶ್ರಮ ವಹಿಸಬೇಕು ಇವು ಯಶಸ್ಸಿನ ಶಿಖರವೇರಲು ಪ್ರೇರೇಪಿಸುತ್ತವೆ ಎಂದು ಉಪ ಪೊಲೀಸ್ ಆಯುಕ್ತ ನಾರಾಯಣ ಭರಮಣಿ ಅಭಿಪ್ರಾಯಪಟ್ಟರು. ಅವರು ಇಂದು ಇಲ್ಲಿನ ಶಿವಬಸವ ನಗರದ ಸಿದ್ಧರಾಮೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಶಾಲಾ ಸಂಸತ್ತಿನ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ನಾಗನೂರು ರುದ್ರಾಕ್ಷಿಮಠ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಮಾತನಾಡಿ ವಿದ್ಯಾರ್ಥಿಗಳು ಬಾಲ್ಯದಲ್ಲಿ ನಾಯಕತ್ವ ಗುಣಗಳನ್ನು ಅಳವಡಿಸಿಕೊಂಡು ನಿಸ್ವಾರ್ಥ ಮನೋಭಾವದಿಂದ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ಭವಿಷ್ಯದಲ್ಲಿ ದೇಶದ ಆಸ್ತಿಯಾಗಿ ರೂಪಗೊಳ್ಳುತ್ತಾರೆ. ನಾಯಕತ್ವ ಎನ್ನುವುದು ಮುಂಚೂಣಿ ಸೇವೆಗಾಗಿ ಇರಬೇಕೆ ಹೊರತು ಅಧಿಕಾರ ಅನುಭವಿಸಲಿಕ್ಕೆ ಅಲ್ಲ. ಪ್ರಚಾರ ಪ್ರತಿಷ್ಠೆಯ ಬೆನ್ನು ಹತ್ತದೇ ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.

ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್‌.ಪಿ. ಹಿರೇಮಠ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಪದವಿ ಕಾಲೇಜಿನ ಪ್ರಾಚಾರ್ಯ ಸಿದ್ದರಾಮ ರೆಡ್ಡಿ ಪ್ರೌಢಶಾಲೆಯ ಸಂಯೋಜಕ ರಾಜಶೇಖರ ಪಾಟೀಲ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಶಾಲೆಯ ಪ್ರಾಚಾರ್ಯೆ ಪೂಜಾ ನಾಯಕ ಸ್ವಾಗತಿಸಿದರು ಶಿಕ್ಷಕಿ ರೋಹಿಣಿ ಚಾಜಗೌಡ ಅತಿಥಿ ಪರಿಚಯ ಮಾಡಿದರು ಸ್ವಾತಿ ಪೂಜಾರಿ ನಿರೂಪಿಸಿದರು ಕೊನೆಗೆ ಸೌಮ್ಯ ಪಾಟೀಲ ವಂದಿಸಿದರು.

WhatsApp Group Join Now
Telegram Group Join Now
Share This Article