ಬಳ್ಳಾರಿ, ಆ.06: ಇತ್ತೀಚೆಗೆ ಬಳ್ಳಾರಿಯ ಬಾಪೂಜಿ ನಗರದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದ ಬಾಲಕ ವಿಕ್ಕಿ (03) ಕುಟುಂಬಸ್ಥರಿಗೆ ನಗರ ಶಾಸಕ ನಾರಾ ಭರತ್ ರೆಡ್ಡಿ ಮಹಾನಗರ ಪಾಲಿಕೆಯ ವತಿಯಿಂದ 5 ಲಕ್ಷ ರೂ.ಗಳ ಚೆಕ್ ವಿತರಿಸಿದರು.
ಮಂಗಳವಾರ ಸಂಜೆ ಮೃತ ಬಾಲಕನ ಮನೆಗೆ ತೆರಳಿ ಚೆಕ್ ವಿತರಿಸಿದರು. ಇದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು. ಮಹಾನಗರ ಪಾಲಿಕೆಯ ಕಸ ಸಂಗ್ರಹ ವಾಹನದ ಚಾಲಕನ ನಿರ್ಲಕ್ಷ್ಯದಿಂದ ಘಟನೆ ನಡೆದಿತ್ತು, ಬಾಲಕನ ಕುಟುಂಬಕ್ಕೆ ಪಾಲಿಕೆಯ ವತಿಯಿಂದ 5 ಲಕ್ಷ ರೂ.ಗಳ ಚೆಕ್ ಕೊಡುತ್ತಿದ್ದೇವೆ, ಅದೇ ರೀತಿ ಸಿಎಂ ಪರಿಹಾರ ಧನ ಅಡಿ 3 ಲಕ್ಷ ರೂ.ಗಳನ್ನು ನೀಡಲಾಗುವುದು, ಎಷ್ಟೇ ಪರಿಹಾರ ಕೊಟ್ಟರೂ ಹೋದ ಜೀವ ಬರುವುದಿಲ್ಲ, ಕುಟುಂಬಸ್ಥರಿಗೆ ಮಗುವಿನ ಸಾವಿನ ನೋವು ತಡೆದುಕೊಳ್ಳುವ ಶಕ್ತಿ ಸಿಗಲಿ ಎಂದರು.
ಮೃತ ಬಾಲಕನ ಕುಟುಂಬದ ಸದಸ್ಯರೊಬ್ಬರಿಗೆ ಮಹಾನಗರ ಪಾಲಿಕೆಯಲ್ಲಿ ಉದ್ಯೋಗ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.ಅದ್ಧೂರಿ ಸಾಹಿತ್ಯ ಸಮ್ಮೇಳನ ಆಯೋಜನೆ: ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಾಸಕ ನಾರಾ ಭರತ್ ರೆಡ್ಡಿ; ಆಂಧ್ರದ ಗಡಿ ಭಾಗದಲ್ಲಿರುವ ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಕನ್ನಡದ ಹಬ್ಬ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಏರ್ಪಡಿಸುವ ಅವಕಾಶ ನಮ್ಮದಾಗಲಿ ಅಂತಾನೇ ನಾವೆಲ್ಲ ಜನಪ್ರತಿನಿಧಿಗಳು ಪ್ರಯತ್ನ ಪಟ್ಟಿದ್ದೇವೆ, ಅದೇ ರೀತಿ ಸಮ್ಮೇಳನವನ್ನು ಅದ್ಧೂರಿಯಾಗಿ ಅರ್ಥಪೂರ್ಣವಾಗಿ ಏರ್ಪಡಿಸಲಾಗುವುದೆಂದರು.
ಪ್ರತಿಭಟನೆ ಮಾಡಿದ್ದ ಬಿಜೆಪಿಯವರ ವಿರುದ್ಧ ಪೊಲೀಸ್ ಕ್ರಮ ಜರುಗಿಸಲಾಗುತ್ತಿದೆ ಎಂಬ ಬಿಜೆಪಿಯ ಮುಖಂಡರ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾಸಕ ನಾರಾ ಭರತ್ ರೆಡ್ಡಿ; ಪ್ರಜಾಪ್ರಭುತ್ವದ ಅಸ್ತಿತ್ವವೇ ಪ್ರತಿಭಟನೆಯಲ್ಲಿದೆ, ವಿಪಕ್ಷದವರ ಧ್ವನಿ ಅಡಗಿಸುವ ಜಾಯಮಾನ ನನ್ನದಲ್ಲ, ಹಾಗೆ ಆಲೋಚಿಸಿದ್ದರೆ ಪ್ರತಿಭಟನೆಗೇ ಅವಕಾಶ ಕೊಡುತ್ತಿದ್ದಿಲ್ಲ ಎಂದರು.
ಈ ಸಂದರ್ಭ ಪಾಲಿಕೆಯ ಆಯುಕ್ತ ಖಲೀಲಸಾಬ, ಮುನಾಫ್ ಪಟೇಲ್, ಸದಸ್ಯರಾದ ಎಂ.ಪ್ರಭಂಜನಕುಮಾರ್, ಕಾಂಗ್ರೆಸ್ ಮುಖಂಡರಾದ ಶಿವರಾಜ್, ಸೂರಿ, ಹೊನ್ನಪ್ಪ, ಹಗರಿ ಗೋವಿಂದ, ಬಾಪೂಜಿ ನಗರ ವೆಂಕಟೇಶ, ಚಾನಾಳ್ ಶೇಖರ್, ಭರತ್, ಬಾಲರಾಜು, ಬುಜ್ಜಿ ಮೊದಲಾದವರು ಹಾಜರಿದ್ದರು.