ಬಳ್ಳಾರಿ, ಆ.೧೮: ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ಸಂಖ್ಯೆ ೧೮ರ ಬಿಸಿಲಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಅಂದಾಜು ೧ ಕೋಟಿ ರೂ.ಗಳ ವೆಚ್ಚದ ೪ ಹೊಸ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಶಾಸಕ ನಾರಾ ಭರತ್ ರೆಡ್ಡಿ ಭೂಮಿ ಪೂಜೆ ನೆರವೇರಿಸುವ ಮೂಲಕ ಶನಿವಾರ ಚಾಲನೆ ನೀಡಿದರು.
ಈ ಸಂದರ್ಭ ಮೇಯರ್ ಮುಲ್ಲಂಗಿ ನಂದೀಶ್, ಎಪಿಎಂಸಿ ಅಧ್ಯಕ್ಷ ಕಟ್ಟೆಮನೆ ನಾಗೇಂದ್ರ, ಅಯಾಜ್ ಅಹ್ಮದ್, ಸೋಮು, ಬಿಸಿಲಹಳ್ಳಿ ಮಂಜುನಾಥ, ಹಗರಿ ಗೋವಿಂದ, ಹೊನ್ನಪ್ಪ, ಕೆರಕೋಡಪ್ಪ, ಸಮೀರ್ ಮೊದಲಾದವರು ಹಾಜರಿದ್ದರು.
ಬಹುನಿರೀಕ್ಷಿತ ಬಳ್ಳಾರಿ ಸಣ್ಣ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ವಾರ್ಡ್ ಸಂಖ್ಯೆ ೧೧ರ ವ್ಯಾಪ್ತಿಯ ಈ ಕಾಮಗಾರಿಗೆ ಅಂದಾಜು ವೆಚ್ಚ ೧ ಕೋಟಿ ೯೮ ಲಕ್ಷ ರೂ.ಗಳನ್ನು ನಿಗದಿ ಮಾಡಲಾಗಿದ್ದು, ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣ ಮಾಡಿ ಎಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಶಾಸಕ ನಾರಾ ಭರತ್ ರೆಡ್ಡಿ ಸೂಚನೆ ನೀಡಿದರು. ಈ ಸಂದರ್ಭ ಮೇಯರ್ ಮುಲ್ಲಂಗಿ ನಂದೀಶ್, ವಾರ್ಡಿನ ಸದಸ್ಯ ಗೋವಿಂದರಾಜುಲು, ಮಡಿವಾಳಪ್ಪ, ಸೋಮಪ್ಪ, ಹರಿ ಮೊದಲಾದವರು ಹಾಜರಿದ್ದರು.
ವಾರ್ಡ್ ಸಂಖ್ಯೆ ೪ರ ವ್ಯಾಪ್ತಿಯ ಗುಗ್ಗರಹಟ್ಟಿಯ ಕೊಲ್ಲಾಪುರದಮ್ಮ ದೇವಸ್ಥಾನದ ಬಳಿ ಅಂದಾಜು ೨೦ ಲಕ್ಷ ರೂ.ಗಳ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ನಾರಾ ಭರತ್ ರೆಡ್ಡಿ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ಮೇಯರ್ ಮುಲ್ಲಂಗಿ ನಂದೀಶ್, ಕಾಂಗ್ರೆಸ್ ಮುಖಂಡ ಡಿ.ಸೂರಿ, ಹೊನ್ನೂರಸ್ವಾಮಿ, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಶ್ರೀಕಾಂತ್ ಸೇರಿದಂತೆ ಹಲವರು ಹಾಜರಿದ್ದರು.
ತದನಂತರ ವಾರ್ಡ್ ಸಂಖ್ಯೆ ೯ರ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಆದ ಹಾನಿಯ ಬಗ್ಗೆ ಪರಿಶೀಲನೆ ನಡೆಸಿ, ಜನರಿಂದ ಅಹವಾಲು ಸ್ವೀಕರಿಸಿದರು. ಈ ಸಂದರ್ಭ ಪಾಲಿಕೆಯ ಸದಸ್ಯ ಜಬ್ಬಾರ್ ಜೊತೆಗಿದ್ದರು.
ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ನಾರಾ ಭರತ್ ರೆಡ್ಡಿ
