ಬೆಂಗಳೂರು, ಜೂನ್ 25: ನಂದಿನಿ ಹಾಲಿನ ದರ ಹೆಚ್ಚಿಸಿ ಕರ್ನಾಟಕ ಹಾಲು ಮಹಾಮಂಡಳ ಕೆಎಂಎಫ್ (KMF) ಮಹತ್ವದ ನಿರ್ಧಾರ ಪ್ರಕಟಿಸಿದೆ. ಕೆಎಂಎಫ್ ಮುಖ್ಯ ಕಚೇರಿಯಲ್ಲಿ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಸುದ್ದಿಗೋಷ್ಠಿ ನಡೆಸಿ ದರ ಹೆಚ್ಚಳದ ಬಗ್ಗೆ ಮಾಹಿತಿ ನೀಡಿದರು.
ಒಂದು ಲೀಟರ್ ನಂದಿನಿ ಹಾಲಿನ ಪ್ಯಾಕೆಟ್ಗೆ 50 ಎಂಎಲ್ ಹಾಲು ಹೆಚ್ಚುವರಿಯಾಗಿ ಸೇರಿಸಲಾಗುವುದು. ಸದ್ಯ ಲೀಟರ್ ಹಾಲಿಗೆ ಇರುವ 42 ರೂಪಾಯಿ ಇರುವ ರವನ್ನು 2 ರೂಪಾಯಿ ಹೆಚ್ಚಳ ಮಾಡಲಾಗುವುದು. ನಾಳೆಯಿಂದ ಈ ದರ ನಾಳೆಯಿಂದ ಅನ್ವಯವಾಗಲಿದೆ ಎಂದು ಭೀಮಾನಾಯ್ಕ್ ತಿಳಿಸಿದರು. ಕೆಎಂಎಫ್ ಎಂಡಿ ಎಂಕೆ ಜಗದೀಶ್, ಆಡಳಿತ ಮಂಡಳಿ ಸದಸ್ಯರು ಸಹ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದಾರೆ.
ಅರ್ಧ ಲೀಟರ್ ಹಾಲಿನ ಪ್ಯಾಕೆಟ್ ದರ 22ರಿಂದ 24 ರೂ.ಗೆ ಏರಿಕೆಯಾಗಲಿದೆ. ಮೊಸರು, ಇನ್ನಿತರ ಯಾವುದೇ ಹಾಲಿನ ಉತ್ಪನ್ನದ ದರ ಏರಿಕೆ ಮಾಡಲ್ಲ. ಕೇರಳದಲ್ಲಿ ಒಂದು ಲೀಟರ್ ಹಾಲಿನ ಬೆಲೆ 52 ರುಪಾಯಿ ಇದೆ. ಗುಜರಾತ್ನಲ್ಲಿ ಅಮುಲ್ ಒಂದು ಲೀಟರ್ಗೆ 56 ರೂ. ಮಹಾರಾಷ್ಟ್ರದಲ್ಲಿ 56 ರೂ. ದೆಹಲಿ ಮದರ್ ಡೈರಿಯ ಹಾಲಿನ ಬೆಲೆ 54 ರೂ. ಇದೆ ಎಂದು ಎಂದು ಭೀಮಾನಾಯ್ಕ್ ಹೇಳಿದರು.
ರಾಜ್ಯದಲ್ಲಿ ಸದ್ಯಕ್ಕೆ ನಂದಿನಿ ಹಾಲಿನ ದರ ಏರಿಕೆ ಮಾಡುವ ಯಾವುದೇ ಚಿಂತನೆ ಸರ್ಕಾರದ ಮುಂದೆ ಇಲ್ಲ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಕೆಲವು ತಿಂಗಳ ಹಿಂದೆ ಹೇಳಿದ್ದರು. ಆದರೆ, ಇದೀಗ ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಹಾಲಿನ ದರ ಏರಿಕೆ ಮಾಡಲಾಗಿದೆ. ಇದು ಸಹಜವಾಗಿ ಮಧ್ಯಮ ವರ್ಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಲೋಕಸಭೆ ಚುನಾವಣೆ ಫಲಿತಾಂಶಕ್ಕೂ ಮುನ್ನ ಗುಜರಾತ್ನ ಅಮುಲ್ ಕಂಪನಿ ತನ್ನ ಎಲ್ಲ ರೀತಿಯ ಹಾಲಿನ ಬೆಲೆಯನ್ನು ಲೀಟರ್ಗೆ 2 ರೂ. ಹೆಚ್ಚಿಸಿತ್ತು. ಉತ್ಪಾದನೆಯ ಒಟ್ಟಾರೆ ವೆಚ್ಚದ ಹೆಚ್ಚಳದಿಂದಾಗಿ ಅಮುಲ್ ಹಾಲಿನ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ಗುಜರಾತ್ ಸಹಕಾರಿ ಹಾಕು ಮಾರುಕಟ್ಟೆ ಒಕ್ಕೂಟ ತಿಳಿಸಿತ್ತು.
ಅಮುಲ್ ಕಂಪನಿಯ ಹಾಲಿನ ದರ ಏರಿಕೆ ರಾಜ್ಯದ ಜನರಿಗೆ ಅಷ್ಟೊಂದು ಪರಿಣಾಮ ಬೀರಿಲ್ಲ. ಆದರೆ ಕೆಎಂಎಫ್ನ ನಂದಿನಿ ಹಾಲಿನ ದರ ಏರಿಕೆ ರಾಜ್ಯದ ಜನರಿಗೆ ಬಿಸಿ ತುಪ್ಪವಾಗಿದೆ. ಇತ್ತೀಚಿಗಷ್ಟೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿದ್ದ ರಾಜ್ಯ ಸರ್ಕಾರ ಇದೀಗ, ಹಾಲಿನ ದರ ಏರಿಸಿದ್ದು,ರಾಜ್ಯದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.