ಹೈದ್ರಾಬಾದ್ ಕರ್ನಾಟಕ ನಿಜಾಮನಿಂದ ಶೋಷಣೆಗೊಳಪಟ್ಟರೆ ಮುಂಬೈ ಕರ್ನಾಟಕ ಪೇಶ್ವೆಗಳಿಂದ ಶೋಷಣೆಗೆ ಒಳಪಟ್ಟಿತ್ತು. ಹಾಗಾಗಿ ಇಲ್ಲಿ ಶಿಕ್ಷಣ ,ಮೂಲಭೂತ ಸೌಕರ್ಯಗಳ ಕೊರತೆ ತಾಂಡವಾಡುತ್ತಿತ್ತು .ಇಂಥ ಸಂದರ್ಭದಲ್ಲಿ ಈ ನಾಡನ್ನು ಕಟ್ಟುವ ಅನಿವಾರ್ಯತೆ ಎದುರಾಗಿತ್ತು ಆ ಸಂದರ್ಭದಲ್ಲಿ ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ದಾಹ ಇದ್ದಾಗ ಈ ಭಾಗಕ್ಕೆ ಅಕ್ಷರಶಃ ಸರಸ್ವತಿ ರೂಪದಲ್ಲಿ ಬಂದವರು ಡೆಪ್ಯುಟಿ ಚನ್ನಬಸಪ್ಪನವರು ಗಿಲಗಂಚಿ ಗುರುಸಿದ್ದಪ್ಪನವರು, ತದನಂತರದಲ್ಲಿ ರಾಜ ಲಖಮ ಗೌಡ ದೇಸಾಯಿಯವರು ಜೊತೆಗೆ ಸಪ್ತರ್ಷಿಗಳು ಉತ್ತರ ಕರ್ನಾಟಕದಲ್ಲಿ ಶಿಕ್ಷಣದ ಕೈಂಕರ್ಯಯವನ್ನು ಹೊತ್ತುಕೊಂಡರು.
1851 ರಲ್ಲಿ ಮುಂಬೈ ಕರ್ನಾಟಕದ ಮೊದಲ ಪ್ರೌಢಶಾಲೆ ಬೆಳಗಾವಿಯ ಸರ್ದಾರ್ ಪ್ರೌಢಶಾಲೆ ಪ್ರಾರಂಭವಾಯಿತು .ತದನಂತರ 1856 ರಲ್ಲಿ ಧಾರವಾಡದಲ್ಲಿ ನಾರ್ಮಲ್ ಸ್ಕೂಲ್ ಪ್ರಾರಂಭವಾಗಿ ಡೆಪ್ಯುಟಿ ಚೆನ್ನಬಸಪ್ಪನವರು ಅದರ ಮೊದಲ ಮುಖ್ಯ ಶಿಕ್ಷಕರಾಗಿ ಕಾರ್ಯವನ್ನು ನಿರ್ವಹಿಸಿದ್ದರು. ಅವರ ಕರ್ಣದಾರತ್ವ ಕ್ರಿಯಾ ಬದ್ಧತೆಯಿಂದ ನಾರ್ಮಲ್ ಸ್ಕೂಲು ಗಂಡು ಮಕ್ಕಳ ತರಬೇತಿ ಶಾಲೆಯಾಗಿ ಮೇಲ್ದರ್ಜೆಗೇರಿತು. ಮುಂಬೈ ಕರ್ನಾಟಕವನ್ನು ಬ್ರಿಟಿಷರು ದಕ್ಚಿಣ ಮಹಾರಾಷ್ಟ್ರ ಎಂದು ಕರೆಯುತ್ತಿದ್ದರು .ಬ್ರಿಟಿಷರಿಗೆ ಇದು ಅಚ್ಚ ಕನ್ನಡದ ನಾಡು ಹಾಗಾಗಿ ಇದನ್ನು ಕನ್ನಡ ನಾಡು,ಕರ್ನಾಟಕ ನಾಡು ಎಂದು ಕರೆಯುವಂತೆ ಮನವರಿಕೆ ಮಾಡಿ ಒಂದು ನಾಡಿನ ಸಂಸ್ಕೃತಿ ಮರೆಮಾಚುವಂತಹ ಸಂದರ್ಭದಲ್ಲಿ ಗಂಡು ಮಕ್ಕಳ ತರಬೇತಿ ಶಾಲೆಯ ಮೂಲಕ ಮತ್ತೆ ಕನ್ನಡದ ಸಂಸ್ಕೃತಿ ಪುಟಿದೇಳುವಂತೆ ಮಾಡಿದ್ದೆ ಡೆಪ್ಯುಟಿ ಚೆನ್ನಬಸಪ್ಪನವರು,ಮತ್ತು ಅವರು ಕಟ್ಟಿ ಬೆಳೆಸಿದ ಧಾರವಾಡದ ಗಂಡು ಮಕ್ಕಳ ತರಬೇತಿ ಶಾಲೆ. ಡೆಪ್ಯುಟಿ ಚೆನ್ನಬಸಪ್ಪನವರ ನಿಧನದ ಸ್ಮರಣಾರ್ಥ ಗಿಲಗಂಚಿ ಗುರುಸಿದ್ದಪ್ಪನವರು ,ಅರಟಾಳ ರುದ್ರಗೌಡರು ಧಾರವಾಡದಲ್ಲಿ 1883 ರಲ್ಲಿ ಲಿಂಗಾಯತ್ ಎಜುಕೇಶನ್ ಅಸೋಸಿಯೇಷನ್ ಪ್ರಾರಂಭಿಸಿದರು ಇವುಗಳ ಪ್ರೇರಣೆಯಿಂದ 1916 ರಲ್ಲಿ ಧಾರವಾಡದಲ್ಲಿ ಕೆಸಿಸಿ ಬ್ಯಾಂಕ್ 1917ರಲ್ಲಿ ಕೆ ಸಿ ಡಿ ಮಹಾವಿದ್ಯಾಲಯ 1917ರಲ್ಲಿ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ ಪ್ರಾರಂಭವಾಯಿತು ಇದರ ಸಂಸ್ಥಾಪಕ ಅಧ್ಯಕ್ಷರಾಗಿ ಅರಟಾಳ ರುದ್ರಗೌಡ್ರು 1917 ರಿಂದ 1928 ರ ವರೆಗೆ ಕಾರ್ಯನಿರ್ವಹಿಸಿದರು ಇವರು ಉತ್ತರಾಧಿಕಾರಿಯಾಗಿ ರಾಜ ಲಖಮಗೌಡ ದೇಸಾಯಿ ಅವರು 1928 ರಿಂದ 1943ರ ವರೆಗೆ KLE ಸಂಸ್ಥೆಯವನ್ನು ವಿರಾಜಮಾನವಾಗಿ ಕಟ್ಟಿ ಬೆಳೆಸಿದರು. ಕೇವಲ ಅಷ್ಟೇ ಅಲ್ಲದೆ ಉತ್ತರ ಕರ್ನಾಟಕ ಮಹಾರಾಷ್ಟ್ರದ ಭಾಗದಲ್ಲಿನ ಶೈಕ್ಷಣಿಕ ಸಂಸ್ಥೆಗಳು ಬೆಳೆಯಲು ಅವುಗಳಿಗೆ ಬೇಕಾದ ಆರ್ಥಿಕ ಕಸುವನ್ನು ತುಂಬಿದರು .ಇವರು ನೀಡಿರುವ ದಾನ ದೊಡ್ಡ ಪ್ರಮಾಣದ್ದು. ಆದರೆ ದಕ್ಷಿಣದಲ್ಲಿರುವ ನಾಲ್ವಡಿ ಕೃಷ್ಣರಾಜನನ್ನು ನೆನೆಸಿದಂತೆ ಉತ್ತರ ಕರ್ನಾಟಕದಲ್ಲಿ ನ ರಾಜ ಲಕಮಗೌಡ ದೇಸಾಯಿ ಅವರನ್ನು ನೆನೆಸದೇ ಇರುವುದು ಸ್ಮರಿಸದೇ ಇರುವುದು ಖೇದಕರ ವಿಷಯ.
ರಾಜ ಲಕಮಗೌಡ ದೇಸಾಯಿ ಅವರು 1864 ಜುಲೈ 29ರಂದು ಅಮ್ಮಣಿಗಿ ಗ್ರಾಮದಲ್ಲಿ ಜನಿಸಿದರು. ತಂದೆ ಅಲಗೌಡ ದೇಸಾಯಿ ತಾಯಿ ಕೃಷ್ಣಬಾಯಿ.ಈ .ದಂಪತಿಗಳಿಗೆ ನಾಲ್ಕು ಜನ ಮಕ್ಕಳು.
ಒಂಟುಮೂರಿ ಸಂಸ್ಥಾನದ 18ನೇ ದೇಸಾಯಿಯಾದ ಬಸವ ಪ್ರಭು ಬಾಬಾಸಾಹೇಬ್ ದೇಸಾಯಿ ಅವರು 1877ರಲ್ಲಿ ಸಂತಾನ ಇಲ್ಲದೇ ನಿಧನರಾಗಿದ್ದರು. ಈ ಸಂದರ್ಭದಲ್ಲಿ ಸಂಸ್ಥಾನವನ್ನು ಜಿಲ್ಲಾ ನ್ಯಾಯಾಧೀಶರಾದ” ಶ್ಯಾ” ಅವರು ಮುನ್ನಡೆಸುತ್ತಿದ್ದರು. (Court of wards)ಅಲಗೌಡ್ ದೇಸಾಯಿ ಅವರ ಮೂರನೇ ಮಗನಾದ ಅಪ್ಪಾಸಾಹೇಬನನ್ನು ವಂಟಮೂರಿಯ ಮೃತ ದೇಸಾಯಿಯವರ ಪತ್ನಿಯಾದ ಶಿವಗಂಗಮ್ಮ ನಿಯಮಾನುಸಾರ ಬ್ರಿಟಿಷರ ಒಪ್ಪಿಗೆ ಪಡೆದು ದತ್ತಕ ತೆಗೆದುಕೊಂಡರು. ದತ್ತಕ ತೆಗೆದುಕೊಳ್ಳಲು ಶಿವಗಂಗಮ್ಮ ಕೊಲಾಪುರದಲ್ಲಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರು ಮತ್ತು ದತ್ತಕ ಮಗು ಹತ್ತಿರದ ಸಂಬಂಧದ ವಾಸುದಾರನಿರುವುದನ್ನು ಸಹಿತ ಬ್ರಿಟಿಷ್ ಸರ್ಕಾರದ ಗಮನಕ್ಕೆ ತಂದರು.
ಬಾಲ್ಯದ ಶಿಕ್ಷಣ:
ಆರಂಭಿಕ ಶಿಕ್ಷಣವನ್ನು ಅಮ್ಮಣಗಿ ಗ್ರಾಮದಲ್ಲಿ ಪ್ರಾರಂಭಿಸಿದರು .ಪ್ರಾಥಮಿಕ ಶಿಕ್ಷಣದ ನಂತರ ಪ್ರೌಢ ಶಿಕ್ಷಣಕ್ಕೆ ಲಖಮಗೌಡ್ರನ್ನು 1878 ರಿಂದ 80ರಲ್ಲಿ ಕೊಲ್ಲಾಪುರದ ಸರ್ದಾರ್ ಮಕ್ಕಳ ಶಾಲೆಗೆ ದಾಖಲಿಸಲಾಯಿತು .ಶಾಲೆಯ ಮುಖ್ಯ ಶಿಕ್ಷಕರಾದ ಮಿಸ್ಟರ್ ಕ್ಯಾಂಡಿ ಅವರ ನೆಚ್ಚಿನ ಶಿಷ್ಯರಾದರು. ಸರ್ದಾರ್ ಶಾಲೆಯಲ್ಲಿ ಛತ್ರಪತಿ ಶಾಹು ಮಹಾರಾಜರು ,ಸವಣೂರಿನ ಸಲಾರಜಂಗ ನವಾಬ, ಮಿರಜ್ ನ ರಾಜಾ ಸಾಹೇಬ್ ಈಚಲಕರಂಜಿಯ ದೇಸಾಯಿ ಸಾವಂತವಾಡಿಯ ಸರದಾರ, ಶಿರಸಂಗಿ ಸಂಸ್ಥಾನದ ಲಿಂಗರಾಜ ದೇಸಾಯಿ ಲಕ್ಕಮ್ಮನಗೌಡ ದೇಸಾಯಿಯವರ ಸಹಪಾಠಿಗಳಾಗಿದ್ದರು. ಸಿರಸಂಗಿ ಲಿಂಗರಾಜರು ರಾಜ ಲಕಮಗೌಡ ದೇಸಾಯಿ ಅವರನ್ನು ತಮ್ಮ ಮಾರ್ಗದರ್ಶಕ ಎಂದು ತಿಳಿದಿದ್ದರು. 1880 ರಲ್ಲಿ ಸೋಲಾಪುರದ ಶಿಕ್ಷಣವನ್ನು ಮುಗಿಸಿಕೊಂಡು ವಂಟಮೂರಿಗೆ ಆಗಮಿಸಿದರು ತದನಂತರ ಆಂಗ್ಲ ಭಾಷೆಯಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸಲು ನಿರ್ಧರಿಸಿದರು
ಬೆಳಗಾವಿಯಲ್ಲಿ ಲಖಮಗೌಡರ ಶಿಕ್ಷಣ:
1881 ರಿಂದ 83 ರವರೆಗೆ ಸರ್ದಾರ್ ಹೈ ಸ್ಕೂಲಿನಲ್ಲಿ ಶಿಕ್ಷಣವನ್ನು ಪಡೆದುಕೊಂಡರು ಇಲ್ಲಿ ಪ್ರವೇಶವನ್ನು ಪಡೆಯುವ ಸಂದರ್ಭದಲ್ಲಿ ಬೆಳಗಾವ ಜಿಲ್ಲಾಧಿಕಾರಿಗಳ ಸಂಪರ್ಕದಲ್ಲಿ ರಾಜಾ ಲಕಮಗೌಡ ದೇಸಾಯಿ ಅವರು ಇದ್ದರು. 1883 ರಲ್ಲಿ ಮ್ಯಾಟ್ರಿಕ್ ಪರೀಕ್ಷೆಯನ್ನು ಮುಂಬೈ ವಿಶ್ವವಿದ್ಯಾಲಯದಿಂದ ಉನ್ನತ ಶ್ರೇಣಿಯಲ್ಲಿ ಪಾಸಾದರು. ದಕ್ಷಿಣ ಭಾರತದ ಸಂಸ್ಥಾನಗಳ ಸರದಾರರಲ್ಲಿಯೇ ಲಕಮಗೌಡ ದೇಸಾಯಿ ಯವರು ಉನ್ನತ ಶಿಕ್ಷಣವನ್ನು ಪಡೆದವರಾಗಿದ್ದರು ಇದರಿಂದ ಬ್ರಿಟಿಷ್ ಆಡಳಿತದಲ್ಲಿ ಇವರಿಗೆ ಯಾವಾಗಲೂ ರಾಜಮನ್ನಣೆ ಇರುತ್ತಿತ್ತು ಕೇವಲ ಮೂರು ಲಕ್ಷ ಆದಾಯ ಇರುವ ಸಂಸ್ಥಾನದ ಮುಖ್ಯಸ್ಥರಿಗೆ ಸಿಗುವ ಗೌರವವನ್ನು ಕಂಡು ಇತರ ಸಂಸ್ಥಾನಿಕರು ಅಸೂಯೆ ಪಟ್ಟುಕೊಂಡರು ಸಹಿತ ಇವರ ಬೌದ್ಧಿಕ ವಿದ್ವತ್ತಿಗೆ ಹೆದರಿ ಯಾರೂ ಸಹಿತ ಲಖಮಗೌಡರ ವಿರುದ್ಧ ಮಾತನಾಡುತ್ತಿರಲಿಲ್ಲ.
ವೈದ್ಯಕೀಯ ಶಿಕ್ಷಣದ ಕನಸು:
ಬ್ರಿಟಿಷ್ ಸರ್ಕಾರದ ಕಣ್ಣಗಾವಲಿನಲ್ಲಿದ್ದ ವಂಟುಮೂರಿ ದೇಶಗತಿಯ ಅಧಿಕಾರವನ್ನು 1884ರಲ್ಲಿ ಬ್ರಿಟಿಷ್ ಸರ್ಕಾರ ರಾಜಾ ಲಖಮಗೌಡ ದೇಸಾಯಿಯವರಿಗೆ ಒಪ್ಪಿಸಿತು. ಇದರ ಜೊತೆಗೆ ವೈದ್ಯಕೀಯ ಶಿಕ್ಷಣವನ್ನು ಪಡೆಯಬೇಕೆಂಬ ಹಂಬಲದಿಂದ ಪುಸ್ತಕಗಳನ್ನು ಓದಲು ಪ್ರಾರಂಭಿಸಿದರು. ಅದರಲ್ಲಿ ಜಟಿಲತೆ ಕಂಡು ಬಂದಾಗ ವೈದ್ಯಕೀಯ ಶಿಕ್ಷಣದಿಂದ ಮನಸ್ಸನ್ನು ಪರಿವರ್ತನೆ ಮಾಡಿ ಕಾನೂನು ಅಧ್ಯಯನದತ್ತ ಹೊರಳಿದರು
ಇಂಗ್ಲೆಂಡಿನಲ್ಲಿ ಶಿಕ್ಷಣ
ವೈದ್ಯಕೀಯ ಶಿಕ್ಷಣ ಒಗ್ಗದಾದಾಗ ಕಾನೂನಿನತ್ತ ಹೊರಳಿದರು ಆ ಸಂದರ್ಭದಲ್ಲಿ ಬೆಳಗಾವ್ ಜಿಲ್ಲೆಯ ನ್ಯಾಯಾಧೀಶರಾದ “ಮಿಸ್ಟರ್ ಶ್ಯಾ” ಮತ್ತು ಅಂದಿನ ಕಾಲದ ಬೆಳಗಾವಿಗೆ ಗಣ್ಯ ವಕೀಲರಾದ ಅಣ್ಣಾ “ಸಾಹೇಬ್ ಛತ್ರೆಯವರಿಂದ” ಕಾನೂನು ಅಧ್ಯಯನದ ಕುರಿತು ಮಾಹಿತಿ ಮತ್ತು ಸಲಹೆಗಳನ್ನು ಪಡೆದುಕೊಂಡರು. ಇವರಿಂದ ಪ್ರೇರೆಪಣೆಗೊಂಡು ದೇಸಾಯಿಯವರು ಬಾರ ಆಟ್ ಲಾ ಪರೀಕ್ಷೆಗಾಗಿ 1886 ರಲ್ಲಿ ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿದರು . 1888 ರಲ್ಲಿ “ಇನ್ನರ್ ಟೆಂಪಲ್” ವಿದ್ಯಾಲಯ ದಿಂದ ಬಾರ ಅಟ್ ಲಾ ಪದವಿಯನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಮಾರ್ಗದರ್ಶನ ನೀಡಿದ “ಸಿಲ್ವೆಸ್ಟರ ಮತ್ತು ಲೀ” ಎಂಬ ಶಿಕ್ಷಕರನ್ನು ಜೀವನದ ಉದ್ದಕ್ಕೂ ಸ್ಮರಿಸಿದರು. ಕರ್ನಾಟಕದಲ್ಲಿಯೇ ಬಾರ್ ಅಟ್ ಲಾ ಪದವಿಯನ್ನು ಪಡೆದ ಮೊದಲಿಗರು ಮತ್ತು ಲಿಂಗಾಯತ್ ಸಮಾಜದಲ್ಲಿಯೇ ಮೊದಲು ಬಾರ್ ಅ್ಯಟ್ ಲಾ ಪದವಿಯನ್ನು ಪಡೆದವರು ಲಖಮನ ಗೌಡ ದೇಸಾಯಿ ಯವರು . ಇಂಗ್ಲೆಂಡ್ನಲ್ಲಿ ಕಾನೂನು ಅಧ್ಯಯನದ ಸಂದರ್ಭದಲ್ಲಿ ಇಂಗ್ಲಿಷ್ ಸಾಹಿತ್ಯ ಲೋಕದ ದಿಗ್ಗಜ ಕೃತಿಗಳನ್ನು ಅಧ್ಯಯನ ಮಾಡಿದರು ಈ ಸಂದರ್ಭದಲ್ಲಿ ಫ್ರೆಂಚ್ ಭಾಷೆ ಮತ್ತು ಫ್ರೆಂಚ ಸಂಸ್ಕೃತಿಯನ್ನು ತಿಳಿಯುವ ಪ್ರಯತ್ನ ಮಾಡಿದರು ಆದರೆ ಸೂಕ್ತ ಮಾರ್ಗದರ್ಶಕರ ಕೊರತೆಯಿಂದ ಫ್ರೆಂಚ್ ಭಾಷೆ ಕಲಿಕೆಯನ್ನು ಅರ್ಧಕ್ಕೆ ನಿಲ್ಲಿಸಿದರು.
ವಿವಾಹ :
1880ರಲ್ಲಿ ಗೋಕಾಕದ ಕಲ್ಯಾಣ್ ಶೆಟ್ಟಿ ಅವರ ಮಗಳಾದ ಪಾರ್ವತಿ ದೇವಿಯನ್ನು ವಿವಾಹವಾದರು 1884ರಲ್ಲಿ ಬಸವಪ್ರಭು ಎಂಬ ಮಗುವಿಗೆ ಜನನ 1917ರಲ್ಲಿ ಪಾರ್ವತಿ ದೇವಿ ಲಿಂಗೈಕ್ಯ.
ಸಂಚಾರಿ ಜೀವಿ ರಾಜ ಲಕಮನಗೌಡ ದೇಸಾಯಿ:
1888 ರಲ್ಲಿ ಕಾನೂನು ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ಅಮೆರಿಕದ ಪ್ರವಾಸವನ್ನು ಕೈಗೊಂಡರು. ಬಾಷೆ , ಸಾಮಾಜಿಕ ,ರಾಜಕೀಯ ಶೈಕ್ಷಣಿಕ ಸ್ಥಿತಿಗತಿಗಳನ್ನು ಆಳವಾಗಿ ಅಧ್ಯಯನ ಮಾಡಿ 1888 ಅಗಸ್ಟ್ 16ರಂದು ಮರಳಿ ಭಾರತಕ್ಕೆ ಬಂದರು ತದನಂತರದಲ್ಲಿ ಇಡೀ ಭಾರತದಾದ್ಯಂತ ರೈಲಿನಲ್ಲಿ ಸಂಚಾರಿಸಿ ಬೇರೆ ಬೇರೆ ಪ್ರದೇಶದ ಜನರ ಧಾರ್ಮಿಕ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸ್ಥಿತಿಗತಿಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದರು ಆ ಭಾಗದಲ್ಲಿರುವ ಪ್ರಸಿದ್ಧ ವ್ಯಕ್ತಿಗಳ ಐತಿಹಾಸಿಕ ಪುಸ್ತಕಗಳನ್ನು ಖರೀದಿಸಿ ಆಳವಾಗಿ ಅಧ್ಯಯನ ಮಾಡಿದರು.
ಸೀತಾಫಲಹಣ್ಣನ್ನು ಕನ್ನಡಿಗರಿಗೆ ಪರಿಚಯಿಸಿದ ದೇಸಾಯಿಯವರು:
ರಾಜ ಲಖಮಗೌಡ ದೇಸಾಯಿ ಅವರು ಮಧ್ಯಪ್ರದೇಶದ ಪ್ರವಾಸದಲ್ಲಿದ್ದಾಗ ಅಲ್ಲಿ ಸಿಗುತ್ತಿರುವ ಒಳ್ಳೆಯ ಜಾತಿಯ ಸೀತಾಫಲ ಹಣ್ಣಿನ ಸಸಿಗಳನ್ನು ತಂದು ಈ ಭಾಗಕ್ಕೆ ಪರಿಚಯಿಸಿದವರು ರಾಜ ಲಖಮನಗೌಡ ದೇಸಾಯಿ ಅವರು.
ರಾಜ್ಯ ಆಡಳಿತ
1884 ಜುಲೈ 29ರಂದು 20ನೆಯ ಜನ್ಮದಿನದ ಸಂದರ್ಭದಲ್ಲಿ ಬ್ರಿಟಿಷ್ ಸರ್ಕಾರದ ಪ್ರತಿನಿಧಿಯಿಂದ ವಂಟುಮೂರಿ ಸಂಸ್ಥಾನದ ಆಡಳಿತದ ಅಧಿಕಾರವನ್ನು ವಹಿಸಿಕೊಂಡರು.
ಅಧಿಕಾರವಹಿಸಿಕೊಂಡ ಪ್ರಾರಂಭದಲ್ಲಿ ಸಂಸ್ಥಾನದ ಆಸ್ತಿಯನ್ನು ಕೂಲಂಕುಶವಾಗಿ ತಿಳಿದುಕೊಳ್ಳಲು ಪ್ರಯತ್ನಿಸಿದರು. ಸಂಸ್ಥಾನದಲ್ಲಿ ಕೆಲಸದಲ್ಲಿದ್ದ ನೌಕರರು ಸಂಸ್ಥಾನದ ಒಂದೊಂದು ಗ್ರಾಮವನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದರು ಬಿಟ್ಟುಹೋದ ಆಸ್ತಿಗಾಗಿ ಚಿಂತಿಸಲಾರದೆ ಇರುವ ಆಸ್ತಿಯನ್ನು ಸುರಕ್ಷಿತವಾಗಿ ಜತನದಿಂದ ಕಾಪಾಡಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ಕೊಟ್ಟರು.
ಸಂಸ್ಥಾನವನ್ನು ಆಡಳಿತದ ಅನುಕೂಲಕ್ಕಾಗಿ ಏಳು ಭಾಗಗಳಾಗಿ ವಿಂಗಡಿಸಿದ್ದರು ಅವುಗಳೆಂದರೆ ವಂಟಮೂರಿ ,ದಡ್ಡಿ ,ಹುಕ್ಕೇರಿ ,ನಿಪ್ಪಾಣಿ ,ಚಿಕ್ಕೋಡಿ ನಾಗರಮುನವಳ್ಳಿ ,ಸಂಕೇಶ್ವರ , ಲಕ್ಮನಗೌಡ ದೇಸಾಯಿಯವರು ಆಧುನಿಕತೆಯ ಭರಾಟೆಯಲ್ಲಿ ವಂಟಮೂರಿ ಸಂಸ್ಥಾನ ತನ್ನ ಸಾಂಪ್ರದಾಯಿಕ ಐತಿಹಾಸಿಕ ಹಿನ್ನಲೆ ಕಳೆದುಕೊಳ್ಳಲಿಲ್ಲ ಅಂದರೆ ದೇಸಾಯಿ ಅವರು ಹಿಂದಿನ ಸತ್ಸ ಸಂಪ್ರದಾಯಗಳನ್ನು ಪಾಲನೆ ಮಾಡಿಕೊಂಡು ಮುಂದುವರೆಸಿದರು.
ಲಕಮಗೌಡ ದೇಸಾಯಿಯವರ ಪಡೆದ ಅಧಿಕಾರ ಮತ್ತು ಪದವಿಗಳು :
1884ರ-ಲ್ಲಿ ಪ್ರಥಮ ದರ್ಜೆ ಸರ್ದಾರ
1888-ರಲ್ಲಿ ಪ್ರಥಮ ದರ್ಜೆ ನ್ಯಾಯಾಧೀಶರು
ಮೂರು ಸಾರಿ ಮುಂಬೈ ಲೆಜಿಸ್ಲೇಟಿವ್ ಕೌನ್ಸಿಲ್ನ ಸದಸ್ಯರು
1919 ರಲ್ಲಿ ಕಂಪ್ಯಾನಿಯನ್ ಆಪ್ ಇಂಡಿಯನ್ ಎಂಪರರ್ ಪದವಿ(CIE)
1930ರಲ್ಲಿ ಬ್ರಿಟಿಷ್ ಸರ್ಕಾರದಿಂದ ರಾಜಾ ಪದವಿ
1908ರಲ್ಲಿ ಬಾಗಲಕೋಟೆಯ 4ನೇಯ ವೀರಶೈವ ಮಹಾಸಭೆಯ ಅಧ್ಯಕ್ಷತೆ
1928 ರಿಂದ 1943ರ ವರೆಗೆ KLE ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ
1933 ರಿಂದ 1943 ರ ವರೆಗೆ ಲಿಂಗಾಯತ್ ವಿದ್ಯಾ ಅಭಿವೃದ್ಧಿ ಸಂಸ್ಥೆ ಧಾರವಾಡ ಇದರ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ
ಬೆಳಗಾವಿ ಸಾರ್ವಜನಿಕರಿಂದ ಬೃಹತ್ಕಾರ ಸಮಾರಂಭ 1935 ರಲ್ಲಿ ವಿಜಯನಗರ ಸ್ಮಾರಕೋತ್ಸವ ಮಂಡಲ ಧಾರವಾಡ ಅಧ್ಯಕ್ಷತೆ.
1903 ರಲ್ಲಿ ಇಂಗ್ಲೆಂಡಿನ 7ನೇ ಅಡ್ವರ್ಡ್ ಚಕ್ರವರ್ತಿಯ ಸಿಂಹಾಸನರೋಹನದ ಅಂಗವಾಗಿ ದೆಹಲಿಯಲ್ಲಿ ಭವ್ಯ ಸಮಾರಂಭ ಏರ್ಪಡಿಸಲಾಗಿತ್ತು ಇದರಲ್ಲಿ ಭಾಗಿಯಾದ ದಕ್ಷಿಣ ಭಾರತದ ಸರದಾರರಲ್ಲಿ ಶಿರಸಂಗಿ ಲಿಂಗರಾಜರು ಮತ್ತು ರಾಜ ಲಕಮಗೌಡ ದೇಸಾಯಿ ಇವರಿಬ್ಬರೇ ಪ್ರಮುಖರು.
“ಸರ್ಕಾರಿ ಹುದ್ದೆಗಳನ್ನು ಪಡೆಯುವದಕ್ಕಾಗಿ ಶಿಕ್ಷಣ ಎಂಬುದು ತಪ್ಪು” ಎಂಬ ಅಭಿಪ್ರಾಯವನ್ನು 1908 ರಲ್ಲಿಯೇ ವ್ಯಕ್ತಪಡಿಸಿರುವುದು ಇವರ ಮುಂದಾಲೋಚನೆಯನ್ನು ಹೇಳುತ್ತದೆ.
KLE ಯ ಎರಡನೆಯ ಅಧ್ಯಕ್ಷರಾಗಿ 15 ವರ್ಷಗಳ ಅಮೋಘ ಸೇವೆ:
1917 ರಿಂದ 1928 ರ ವರೆಗೆ ಅರಟಾಳ ರುದ್ರಗೌಡರು ಕೆಎಲ್ಇ ಶಿಕ್ಷಣ ಸಂಸ್ಥೆಯ ಮೊದಲ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರೆ 1929 ರಿಂದ 1943 ರವರೆಗೆ ರಾಜ ಲಕಮಗೌಡ ದೇಸಾಯಿ ಅವರು ಕೆಎಲ್ಇಯ ಎರಡನೇಯ ಅಧ್ಯಕ್ಷರಾಗಿ ಸಂಸ್ಥೆಯನ್ನು ಯಶಸ್ಸಿನ ಪಥದತ್ತ ಮುನ್ನಡೆಸಿದರು. ಇವರ ಅಧ್ಯಕ್ಷತೆಯ ಅವಧಿಯಲ್ಲಿ ಧಾರವಾಡದಲ್ಲಿ ರಾಜ ಲಕಮಗೌಡ ಹೈಸ್ಕೂಲ್ ಧಾರವಾಡ ,ಆಂಗ್ಲೋ ವರನ್ಯಾಕುಲರ್ ಶಾಲೆವಂಟಮುರಿ, ಲಿಂಗರಾಜ್ ಮಹಾವಿದ್ಯಾಲಯಬೆಳಗಾವಿ, ರಾಜ ಲಕಮಗೌಡ ಮಹಾ ವಿದ್ಯಾಲಯ ಬೆಳಗಾವಿ ,ಈ ಸಂಸ್ಥೆಗಳ ಹುಟ್ಟು ಬೆಳವಣಿಗೆಗೆ ಪ್ರೇರಕ ಪೂರಕ ಶಕ್ತಿಯಾಗಿ ರಾಜ ಲಕಮಗೌಡ ದೇಸಾಯಿ ಅವರು ಕಾರ್ಯನಿರ್ವಹಿಸಿದರು.
ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ ಧಾರವಾಡ
55000 ಗಳ ದೇಣಿಗೆ ಮತ್ತು 1933 ರಿಂದ 1943 ರವರೆಗೆ ಲಿಂಗಾಯತ್ ವಿದ್ಯಾ ಅಭಿವೃದ್ಧಿ ಸಂಸ್ಥೆ ಧಾರವಾಡದ ಅಧ್ಯಕ್ಷರಾಗಿ ಯಶಸ್ವಿ ಕಾರ್ಯ ನಿರ್ವಹಣೆ.
ಕೊಲ್ಲಾಪುರ್ ಲಿಂಗಾಯತ್ ವಿದ್ಯಾರ್ಥಿಗಳ ವಸತಿ ನಿಲಯ ಸ್ಥಾಪನೆಗೆ 12,000ಗಳ ದೇಣಿಗೆ 1907ರಲ್ಲಿ ನೀಡಿದರು.
1908 ರಲ್ಲಿ ಶಿವಯೋಗ ಮಂದಿರ ಸ್ಥಾಪನೆಗೆ ಹಣಕಾಸಿನ ನೆರವು.
KLE ಸಂಸ್ಥೆ: 1928 ರಿಂದ 1943 ರವರೆಗೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ ಸಂಸ್ಥೆಯ ಪ್ರಾರಂಭದ ಸಂದರ್ಭದಲ್ಲಿ 20,000ಗಳ ಹಣಕಾಸಿನ ನೆರವು ನೀಡಿದರು ಈ ಹಣದಿಂದ ಬೆಳಗಾವಿಯಲ್ಲಿ ಜಮೀನು ಖರೀದಿಸಿ 80,000ಗಳ ವೆಚ್ಚವನ್ನು ಮಾಡಿ ಬೆಳಗಾವಿಯಲ್ಲಿ GA ಸ್ಕೂಲನ್ನು ಪ್ರಾರಂಭ ಮಾಡಿದರು.
1922 ರಲ್ಲಿ ಧಾರವಾಡದಲ್ಲಿ ಪ್ರೌಢಶಾಲೆಯನ್ನು ಪ್ರಾರಂಭ ಮಾಡಿ ಹಣಕಾಸಿನ ನೆರವು ನೀಡಿದರು ರಾಜಾ ಲಕಮಗೌಡ ದೇಸಾಯಿ ಪ್ರೌಢಶಾಲೆ ಎಂದು ನಾಮಕರಣ ಮಾಡಲಾಯಿತು . 1930ರಲ್ಲಿ ಬ್ರಿಟಿಷ್ ಸರ್ಕಾರ ಲಕಮಗೌಡ ದೇಸಾಯಿ ಅವರಿಗೆ “ರಾಜಾ” ಎಂಬ ಬಿರುದು ನೀಡಿತು .ರಾಜಾ ಲಕಮಗೌಡ ಸರ್ ದೇಸಾಯಿ ಪ್ರೌಢಶಾಲೆ ಎಂದು ಮರು ನಾಮಕರಣಗೊಂಡಿತು. 1972ರಲ್ಲಿ ಪದವಿ ಪೂರ್ವ ಮಹಾವಿದ್ಯಾಲಯವನ್ನು ಹೊಂದಿತು.
ಒಂಟುಮೂರಿಯಲ್ಲಿ ಆಂಗ್ಲೋ ವರ್ಣ್ಯಾಕುಲರ ಪ್ರೌಢಶಾಲೆ: 1925 ರಲ್ಲಿ ಕೆ.ಎಲ್.ಇ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ 50,000ಗಳನ್ನು ಖರ್ಚು ಮಾಡಿ ತಮ್ಮ ಸ್ವಂತ ಊರಾದ ಒಂಟುಮೂರಿಯಲ್ಲಿ ಆಂಗ್ಲೋ ವರ್ಣಕ್ಯುಲರ್ ಶಾಲೆಯನ್ನು ಪ್ರಾರಂಭಿಸಿದರು. ಇದು ಕೇವಲ ಐದಾರು ವರ್ಷಗಳ ಕಾಲ ನಡೆದು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿತು.
ರಾಜಾ ಲಕಮಗೌಡ ವಿಜ್ಞಾನ ಮಹಾವಿದ್ಯಾಲಯ ಬೆಳಗಾವಿ:
1917ರಲ್ಲಿ GA ಶಾಲೆ ಮತ್ತು 1933 ರಲ್ಲಿ ಉತ್ತರ ಕರ್ನಾಟಕದ ಮೊದಲ ಪದವಿ ಮಹಾವಿದ್ಯಾಲಯ ಲಿಂಗರಾಜ್ ಮಹಾವಿದ್ಯಾಲಯ ಆರಂಭವಾಗಿತ್ತು. 1935 ರಲ್ಲಿ ವಿಜ್ಞಾನ ಮಹಾವಿದ್ಯಾಲಯ ಆರಂಭವಾಯಿತು ಈ ಸಂದರ್ಭದಲ್ಲಿ 20,000 ಸಾವಿರ ರೂಪಾಯಿಗಳ ಹಣವನ್ನು ರಾಜಾ ಲಕಮಗೌಡ ದೇಸಾಯಿಯವರು ನೀಡಿ ವಿಜ್ಞಾನ ಮಹಾವಿದ್ಯಾಲಯ ಪ್ರಾರಂಭಿಸಲು ಬನ್ನೆಲುಬಾಗಿ ನಿಂತರು ಇವರ ಉದಾರ ನೆರವಿಗೆ ರಾಜಾ ಲಿಮ್ ವಿಜ್ಞಾನ ಮಹಾವಿದ್ಯಾಲಯ ಎಂದು 1941 ರಲ್ಲಿ ಹೆಸರಿಡಲಾಯಿತು. 1944 ರಲ್ಲಿ ಪದವಿ ತರಗತಿಗಳನ್ನು ನೊಬೆಲ್ ಪ್ರಶಸ್ತಿ ವಿಜೇತರಾದ ಸಿ ವಿ ರಾಮನ್ ರವರು ಉದ್ಘಾಟಿಸಿದರು .ರಾಜಾಲಕಮಗೌಡ ಮಹಾವಿದ್ಯಾಲಯ 1958 ರವರೆಗೆ ಲಿಂಗರಾಜ ಮಹಾವಿದ್ಯಾಲಯದ ಒಂದು ಭಾಗವಾಗಿತ್ತು ,ತದನಂತರ ಪ್ರತ್ಯಕ ವಾಯಿತು.
ಕರ್ನಾಟಕ ಲಾ ಸೊಸೈಟಿಯ ಕಾನೂನು ಮಹಾವಿದ್ಯಾಲಯ :
ಕರ್ನಾಟಕ ಲಾ ಆಡಳಿತ ಮಂಡಳಿಯವರು ಬಂದು ರಾಜಾ ಲಕಮಗೌಡ ಸರ್ ದೇಸಾಯಿ ಅವರಲ್ಲಿ ಕಾನೂನು ಮಹಾವಿದ್ಯಾಲಯದ ಸ್ಥಾಪನೆಗೆ ಹಣಕಾಸಿನ ನೆರವು ನೀಡಬೇಕೆಂದು ನಿವೇದಿಸಿಕೊಂಡರು. ಆ ಸಂದರ್ಭದಲ್ಲಿ ಮಹಾವಿದ್ಯಾಲಯದ ಸ್ಥಾಪನೆಗೆ ಸರಕಾರದಲ್ಲಿ ಠೇವಣಿಯಾಗಿಡಬೇಕಾದ ಒಂದು ಲಕ್ಷ ಹಣವನ್ನು 1939ರಲ್ಲಿ ಲಕಮಗೌಡ ದೇಸಾಯಿಯವರು ನೀಡಿದರು. ಇವರು ಕೊಟ್ಟಿರುವ ದೇಣಿಗೆಯ ಸ್ಮರಣಾರ್ಥವಾಗಿ ಕರ್ನಾಟಕ ಲಾ ಸೂಸಾಯಿಟಿಯವರು ಸ್ಥಾಪಿಸಿದ ಕಾನೂನು ಮಹಾವಿದ್ಯಾಲಯಕ್ಕೆ ರಾಜಾ ಲಖಮನಗೌಡ ಸರ್ ದೇಸಾಯಿ ಕಾನೂನು ಮಹಾವಿದ್ಯಾಲಯ ಎಂದು ಹೆಸರಿಟ್ಟರು.
ಕರ್ನಾಟಕ ಮಹಾವಿದ್ಯಾಲಯ ಧಾರವಾಡ:
ಅರಟಾಳರುದ್ರಗೌಡ್ರು ಒಂದು ಲಕ್ಷ ಗಳನ್ನು ಶ್ರೀನಿವಾಸರಾಯರು ಒಂದು ಲಕ್ಷ ರೂಪಾಯಿಗಳನ್ನು ಉಳಿದ 64000ಗಳನ್ನು ಬ್ರಿಟಿಷ್ ಸರ್ಕಾರ ಠೇವಣಿ ಇಟ್ಟ ನಂತರದಲ್ಲಿ ಧಾರವಾಡದಲ್ಲಿ ಕರ್ನಾಟಕ ಮಹಾವಿದ್ಯಾಲಯ ಸ್ಥಾಪನೆ ಮಾಡುವುದಾಗಿ ಅರಟಾಳ ಗೌಡ್ರು 70000 ಗಳನ್ನು ಸೇರಿಸಿದ್ದರು ಇನ್ನುಳಿದ 30,000ಗಳನ್ನು ನಾನು ಕೊಡುವುದಾಗಿ ರಾಜ ಲಕಮ ಗೌಡ ದೇಸಾಯಿ ಅವರು 1913ರಲ್ಲಿ ವಾಗ್ದಾನವನ್ನು ನೀಡಿದರು ಆದರೆ ಕೇವಲ ರೂ.7000ಗಳನ್ನು ಮಾತ್ರ ಅರಟಾಳ ರುದ್ರಗೌಡರು ಸ್ವೀಕರಿಸಿದರು.ರೊದ್ದ ಶ್ರೀನಿವಾಸರು ಕೇವಲ 27 ಸಾವಿರ ಮಾತ್ರ ಸಂಗ್ರಹಿಸಿದರು ಉಳಿದ ಹಣವನ್ನು ಸಂಗ್ರಹಿಸಲು ಅರಟಾಳರು ಸಹಾಯ ಮಾಡಿದರು. ರುದ್ರಗೌಡರು ಇಲ್ಲಿ ಸಂಗ್ರಹಿಸಿದ ಹಣವನ್ನು ಪೂಣಾ ಸರ್ಕಾರದಲ್ಲಿ ಪ್ರಾಮಿಸ್ರಿ ನೋಟನಲ್ಲಿ ಡಿಪೋಸಿಟ್ ಮಾಡಿದರು. ಅದಕ್ಕೆ 2727ರೂಪಾಯಿ ನಾಲ್ಕುಆಣೆ ಬಡ್ಡಿ ಹಣ ಬಂದಿತ್ತು ಅದಕ್ಕೆ ತಮ್ಮ ಕೈಲಿಂದ ಒಂದಿಷ್ಟು ಹಣವನ್ನು ಸೇರಿಸಿ 1917ರಲ್ಲಿ ಕೆಎಲ್ಇಯನ್ನು ಅಧಿಕೃತವಾಗಿ ಮುಂಬೈ ಎಜುಕೇಶನ್ ಆಕ್ಟ 1860 ರ ಅಡಿ ನೊಂದಣಿ ಮಾಡಿದರು ಅರಟಾಳ ರುದ್ರಗೌಡರು.
ಪುಣೆಯ ಬಂಡಾರ್ಕರ್ ಸಂಸ್ಕೃತ ರಿಸರ್ಚ್ ಅಸೋಸಿಯೇಷನ್:
ಈ ಸಂಸ್ಥೆಯ ಸದಸ್ಯರು ಒಂಟಮುರಿಗೆ ಬಂದು ರಾಜಾ ಲಕಮಗೌಡ ದೇಸಾಯಿ ಅವರನ್ನು ಭೇಟಿಯಾಗಿ ತಮ್ಮ ಸಂಸ್ಥೆಗೆ ಸಹಾಯವನ್ನು ಕೇಳಿದರು ಪ್ರತಿ ವರ್ಷ ರೂ. 50 ಗಳನ್ನು ದೇಣಿಗೆ ಕೊಡುವುದಾಗಿ ಹೇಳಿ ಪ್ರತಿ ವರ್ಷ ಜನವರಿ 5ನೇ ತಾರೀಕಿನ ಒಳಗಾಗಿ ಆ ಸಂಸ್ಥೆಗೆ ಹಣವನ್ನು ನೀಡುತ್ತಿದ್ದರು. ಇವರ ನಿಧನ ನಂತರ ಇವರ ಮಗನಾದ ಬಸವ ಪ್ರಭು ದೇಸಾಯಿ ಅವರು ಈ ಕಾರ್ಯವನ್ನು ಮುಂದುವರಿಸಿದರು.
ಡೆಕ್ಕನ್ ಎಜುಕೇಶನ್ ಸೊಸೈಟಿ ಪುಣೆ ಐದು ಸಾವಿರ ರೂಪಾಯಿ
ವಿಲ್ಲಿಂಗ್ಟನ್ ಕಾಲೇಜು ಸಾಂಗ್ಲಿ ಒಂದು ಸಾವಿರ ರೂಪಾಯಿ
ಲೇಡಿ ಐರ್ವಿನ್ ಕಾಲೇಜ್ ದೆಹಲಿ ಐದು ಸಾವಿರ ರೂಪಾಯಿ
ಮರಾಠ ಮಂಡಲ್ ಮಹಿಳಾ ವಿದ್ಯಾಲಯ ಮೂರು ಸಾವಿರ
ಭಾಷಾ ಮಿಷನ್ ವನಿತಾ ವಿದ್ಯಾಲಯ ರೂ.ಒಂದು ಸಾವಿರ.
ಸಾರ್ವಜನಿಕ ಗ್ರಂಥಾಲಯ ಮತ್ತು ವಾಚನಾಲಯ ಬೆಳಗಾವಿ ಹತ್ತು ಸಾವಿರ ರೂಪಾಯಿ ಆಯುರ್ವೇದ ಮಹಾವಿದ್ಯಾಲಯ ಬೆಳಗಾವಿ ಇಪ್ಪತ್ತೈದು ಸಾವಿರ ಕರ್ನಾಟಕ ಆರೋಗ್ಯ ಧಾಮ ಘಟಪ್ರಭಾ ಆರು ಸಾವಿರ ರೂಪಾಯಿಗಳ ದೇಣಿಗೆ
ಬೆಳಗಾವಿ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಕ್ಷೀರಣ ಯಂತ್ರದ ಖರೀದಿಗಾಗಿ 10,000ಗಳ ದೇಣಿಗೆ ಇದರಿಂದ ವಂಟಮೂರಿ ಗ್ರಾಮಸ್ಥರಿಗೆ ಉಚಿತವಾಗಿ ಸೌಲಭ್ಯ ದೊರಕುವಂತೆ ವ್ಯವಸ್ಥೆ ಮಾಡಿದ್ದರು ಜಿಲ್ಲಾ ಕ್ಷಯ ರೋಗ ನಿವಾರಣಾ ಸಂಸ್ಥೆ ಬೆಳಗಾವಿಗೆ 2000ಗಳ ದೇಣಿಗೆ. ಆಸ್ಪತ್ರೆ ಮಿಶನ್ ಆಸ್ಪತ್ರೆ ಮಿರಜ್ ಇದಕ್ಕೆ ರೂ.ಮೂರು ಸಾವಿರ ರೂಪಾಯಿಗಳ ಅನುದಾನ ಲೇಡಿ ಡಫರಿನ್ ಆಸ್ಪತ್ರೆ ದೆಹಲಿ ಇದಕ್ಕೆ 10000ಗಳ ಅನುದಾನ ಒಂಟಮೂರಿಯಲ್ಲಿ ಆರೋಗ್ಯ ನೈರ್ಮಲ್ಯ ಸಮಿತಿಯನ್ನು ರಚನೆ ಮಾಡಿದ್ದರು.
1930 ಧಾರವಾಡದಲ್ಲಿ ಲಿಂಗಾಯತ್ ಸಾಹಿತ್ಯ ಸಮಿತಿ ಸ್ಥಾಪನೆ ಆಯಿತು ಇದರ ಪುಸ್ತಕ ಪ್ರಕಟಣೆಗೆ 2500 ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿಗೆ ಒಂದು ಲಕ್ಷ ರೂಪಾಯಿಗಳ ದೇಣಿಗೆ. ಪಂಡರಪುರದಲ್ಲಿ ವಸತಿ ನಿಲಯ ಸ್ಥಾಪನೆಗೆ ಭೂಮಿಯ ದೇಣಿಗೆ ಬೆಳಗಾವಿಯಲ್ಲಿ ಸೋಶಿಯಲ್ ಕ್ಲಬ್ ಮತ್ತು ಕ್ರೀಡಾ ಭವನದ ನಿರ್ಮಾಣಕ್ಕೆ 6,000 ಗಳದೇಣಿೆಗೆಬೆ ಳಗಾವಿಯಲ್ಲಿ ಯೂನಿಯನ್ ಜಿಮಖಾನ ನಿರ್ಮಾಣಕ್ಕಾಗಿ 5000 ಗಳ ಉದಾರ ವಂಟಮೂರಿಯಲ್ಲಿ ನೂಲು ಗಿರಣಿ ನಿರ್ಮಾಣಕ್ಕೆ ಒಂದು ಲಕ್ಷ ರೂಪಾಯಿಗಳ ಠೇವಣಿ ನೀಡಿದ್ದರು .ಲಕಮ ಗೌಡರ ನಿಧನ ನಂತರ ಕಾರ್ಯಯೋಜನೆ ಸ್ಥಗಿತಗೊಂಡಿತು. ಪಂಚಾಯತ್ ರಾಜ್ ವ್ಯವಸ್ಥೆ ಜಾರಿ ಮುಂಚೆ ವಂಟಮೊರಿಯಲ್ಲಿ ಗ್ರಾಮ ಪಂಚಾಯತ್ ರಚನೆ ವಿವಿಧ ಸಮಿತಿಗಳನ್ನು ಮಾಡಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
ವಂಟಮೂರಿಗೆ ಹೆಚ್ಚು ಜನ ಬರುತ್ತಿದ್ದರಿಂದ ಸ್ವಂತ ಹಣದಲ್ಲಿ ಸುತ್ತಮುತ್ತಲಿನ ರಸ್ತೆಗಳನ್ನು ಮಾಡಿಸಿದ್ದರು. ಅದರಲ್ಲಿ ಹತ್ತರಕಿ ಇಂದ ಪಶ್ಚಾಪುರಕ್ಕೆ ತೆರಳುವ 12 ಮೈಲ್ ಉದ್ದದ ರಸ್ತೆ ಪ್ರಮುಖವಾದದ್ದು.
ಲಖಮಗೌಡರ ಆಡಳಿತ ಅವಧಿಯಲ್ಲಿ ಒಂಟಿಮೂರು ಗ್ರಾಮ ಪಂಚಾಯಿತಿ ಬೀದಿ ದೀಪಗಳನ್ನು ಹೊಂದಿತ್ತು ಅದರ ನಿರ್ವಹಣೆಗಾಗಿ ಊರ್ವ ಸಿಬ್ಬಂದಿಯನ್ನು ನೇಮಕ ಮಾಡಿ ಸಂಸ್ಥಾನದ ವತಿಯಿಂದ ಸಂಬಳವನ್ನು ನೀಡುತ್ತಿದ್ದರು.
ವಂಟಮೂರಿಗೆ ಬರುವ ಹೋಗುವ ಜನ ಹೆಚ್ಚು ಆದಕಾರಣ ಪಾಶ್ಚಾಪುರ್ ರೈಲ್ವೆ ನಿಲ್ದಾಣದಲ್ಲಿ ಸಾರ್ವಜನಿಕರಿಗಾಗಿ ಒಂದು ಸರ್ಕ್ಯೂಟ್ ಹೌಸ್ ಅನ್ನು ನಿರ್ಮಾಣ ಮಾಡಿ ಅದರ ನಿರ್ವಹಣೆಗಾಗಿ ಓರ್ವ ಕುಟುಂಬವನ್ನು ನೇಮಕ ಮಾಡಿದ್ದರು.
ಹೀಗೆ ರಾಜ ಲಕ್ಕಮ್ಮ ಗೌಡ ಸರ್ ದೇಸಾಯಿ ಅವರು ಆಧುನಿಕ ಶಿಕ್ಷಣವನ್ನು ಪಡೆದು ಒಂಟುಮೂರಿ ಸಂಸ್ಥಾನವನ್ನು ಆಡಳಿತಾತ್ಮಕವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಔದ್ಯೋಗಿಕವಾಗಿ ಎಲ್ಲರಂಗಗಳಲ್ಲಿ ಬಲಿಷ್ಠ ಗೊಳಿಸುವ ಯೋಜನೆಗಳನ್ನು ಹಾಕಿಕೊಂಡು ಅನುಷ್ಠಾನಗೊಳಿಸಿದ ಮಹಾನುಭಾವರು ಅಷ್ಟೇ ಅಲ್ಲದೆ ಸುತ್ತಮುತ್ತಲಿನ ಪ್ರಾಂತ್ಯಗಳಲ್ಲಿ ಶಿಕ್ಷಣ ಸಂಸ್ಥೆಗಳ ನಿರ್ಮಾಣಕ್ಕಾಗಿ ಬೃಹತ್ ಮೊತ್ತದ ಹಣವನ್ನು ನೀಡುವುದರ ಮೂಲಕ ನಾಡಿನ ಸಂಪನ್ಮೂಲವನ್ನು ಕಟ್ಟೋದ್ರಲ್ಲಿ ತಮ್ಮದೇ ಆಗಿರುವ ನಿರ್ಣಾಯಕ ಪಾತ್ರವನ್ನು ನಿರ್ವಹಿಸಿದ್ದಾರೆ ದಕ್ಷಿಣ ಕರ್ನಾಟಕದಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜರು ನಿರ್ವಹಿಸಿದ ಪಾತ್ರವನ್ನು ಉತ್ತರ ಕರ್ನಾಟಕದಲ್ಲಿ ಅವರಷ್ಟೇ ದೂರ ದೃಷ್ಟಿ ಇಟ್ಟುಕೊಂಡು ಆಡಳಿತ ನಡೆಸಿದವರು ರಾಜ ಲಕ್ಕಮ್ಮ ಗೌಡ ಸರ್ ದೇಸಾಯಿ ಅವರು ಆದರೆ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಸಿಕ್ಕಿರುವ ಆದ್ಯತೆ ಪ್ರಾಧಾನ್ಯತೆ ರಾಜ ಲಕ್ಕಮ್ ಗೌಡ ದೇಸಾಯಿಯವರಿಗೆ ಸಿಗದೇ ಇರುವುದು ಬೇಸರದ ವಿಷಯ.
ರಾಜಾ ಲಕಮ ಗೌಡ ಜಲಾಶಯ ಘಟಪ್ರಭಾ::
ಒಂಟಮೂರಿ ದೇಸಾಯಿಯವರಿಂದ ಪ್ರಸಿದ್ಧಿ ಪಡೆದ ಒಂಟಮೂರೆ ಗ್ರಾಮ 1975ರಲ್ಲಿ ಹಿಡಕಲ್ ಜಲಾಶಯವನ್ನು ಕಟ್ಟುವ ಸಂದರ್ಭದಲ್ಲಿ ಮತ್ತು ರಾಜಾ ಲಕಮಗೌಡ ದೇಸಾಯಿ ಅವರು ಬಾಳಿ ಬದುಕಿದ ಕೋಟೆಯು ಸಹಿತ ಜಲಾಶಯದಲ್ಲಿ ಮುಳುಗಿ ಹೋಯಿತು. ಅವರ ಸ್ಮರಣಾರ್ಥ ಜಲಾಶಯದ ಮೇಲೆ ರಾಜ ಲಕಮಗೌಡ ದೇಸಾಯಿ ಹಿಡಕಲ್ ಜಲಾಶಯ ಎಂದು ಬರೆಯಿಸಿ ಲಕಮ ಗೌಡರನ್ನು ಸ್ಮರಿಸುವ ಗೌರವಿಸುವ ಕೆಲಸವನ್ನು ಆಡಳಿತ ಮಾಡಿರುವುದು ಶ್ಲಾಘನೀಯವಾದದ್ದು.
ದಿನಾಂಕ 29 ಜುಲೈ 2024 ರಾಜ್ಯ ಲಕಮ ಗೌಡ ದೇಸಾಯಿ ಅವರ 161ನೆಯ ಜನ್ಮದಿನದ ಸ್ಮರಣಾರ್ಥವಾಗಿ ಅಕ್ಷರದ ಮೂಲಕ ನಾಡು ನುಡಿಯನ್ನು ಕಟ್ಟಿ ಬೆಳೆಸಿದ ಲಕಮ ಗೌಡರನ್ನು ಗೌರವಿಸುವ ಲೇಖನಕ್ಕೆ ವಿದಾಯ ಹೇಳುತ್ತೇನೆ .
ಲೇಖಕರು: ಮಹೇಶ್ ನೀಲಕಂಠ ಚನ್ನಂಗಿ ಉಪಪ್ರಾಂಶುಪಾಲರು, ಎಸ್.ಬಿ.ಎಮ್.ಸರಕಾರಿ ಬಾಲಕಿಯರ ಪ್ರೌಢಶಾಲೆ ಚೆನ್ನಮ್ಮನ ಕಿತ್ತೂರು. 974031382