ಮಿಸ್ಟರ್ ಏಷ್ಯಾ ಬಾಡಿ ಬಿಲ್ಡಿಂಗ್ ಆಂಡ್ ಫಿಟ್​ನೆಸ್ ಸ್ಪರ್ಧೆ: ಚಾಂಪಿಯನ್ ಆಗಿ ಹೊರಹೊಮ್ಮಿದ ನಾಗೇಂದ್ರ ಮಡಿವಾಳ

Ravi Talawar
ಮಿಸ್ಟರ್ ಏಷ್ಯಾ ಬಾಡಿ ಬಿಲ್ಡಿಂಗ್ ಆಂಡ್ ಫಿಟ್​ನೆಸ್ ಸ್ಪರ್ಧೆ: ಚಾಂಪಿಯನ್ ಆಗಿ ಹೊರಹೊಮ್ಮಿದ ನಾಗೇಂದ್ರ ಮಡಿವಾಳ
WhatsApp Group Join Now
Telegram Group Join Now

ಬೆಳಗಾವಿ,ಮಾ26: ಹಿಂಡಲಗಾ ಗ್ರಾಮದ ನಾಗೇಂದ್ರ ಮಡಿವಾಳ, ಫೆ.24ರಂದು ದೆಹಲಿಯಲ್ಲಿ ಯುನೈಟೆಡ್ ಇಂಟರನ್ಯಾಶನಲ್ ಬಾಡಿ ಬಿಲ್ಡಿಂಗ್ ಫಿಟ್​ನೆಸ್ ಫೆಡರೇಷನ್ ವತಿಯಿಂದ ಆಯೋಜಿಸಿದ್ದ “ಮಿಸ್ಟರ್ ಏಷ್ಯಾ ಬಾಡಿ ಬಿಲ್ಡಿಂಗ್ ಆಂಡ್ ಫಿಟ್​ನೆಸ್ ಸ್ಪರ್ಧೆ”ಯ 75 ಕೆಜಿ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ವಿವಿಧ ರಾಜ್ಯ, ದೇಶಗಳ 45ಕ್ಕೂ ಹೆಚ್ಚು ಬಾಡಿ ಬಿಲ್ಡರ್​ಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ತಮ್ಮ ಅತ್ಯುತ್ತಮ ದೇಹದಾರ್ಢ್ಯತೆ ಪ್ರದರ್ಶಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.

2023ರ ಡಿಸೆಂಬರ್​ನಲ್ಲಿ ಬೆಂಗಳೂರು ಪ್ರೋ ಶೋದಲ್ಲಿ ಮಿಸ್ಟರ್ ಕರ್ನಾಟಕ ಪ್ರಶಸ್ತಿ ಗೆದ್ದಿದ್ದ ನಾಗೇಂದ್ರ ಮಿಸ್ಟರ್ ಏಷ್ಯಾ ಬಾಡಿ ಬಿಲ್ಡಿಂಗ್ ಆಂಡ್ ಫಿಟ್​ನೆಸ್ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಈ ಹಿಂದೆ 2019, 2023ರಲ್ಲಿ ಎರಡು ಬಾರಿ ಮಿಸ್ಟರ್ ಇಂಡಿಯಾ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. 15 ವರ್ಷಗಳ‌ ಕಠಿಣ ಪರಿಶ್ರಮದ ಫಲವಾಗಿ ಇಂದು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.‌ ಈವರೆಗೆ ಜಿಲ್ಲೆ, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸುಮಾರು 100ಕ್ಕೂ ಹೆಚ್ಚು ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಭಾಗಿಯಾಗಿ ಪದಕಗಳನ್ನು ಗೆದ್ದಿರುವ ಹೆಗ್ಗಳಿಕೆ ನಾಗೇಂದ್ರ ಅವರದ್ದು.

ಮೂಲತಃ ಬಸವನ ಕುಡಚಿ ಗ್ರಾಮದವರಾದ ನಾಗೇಂದ್ರ ಸದ್ಯ ಹಿಂಡಲಗಾ ಗ್ರಾಮದಲ್ಲಿ ವಾಸವಾಗಿದ್ದು, ಸ್ವಂತ ಜಿಮ್ ನಡೆಸುತ್ತಿದ್ದಾರೆ. ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ಸೇರಿ ಐದು ಗಂಟೆ ತಮ್ಮದೇ ಜಿಮ್ ನಲ್ಲಿ ಬೆವರು ಸುರಿಸುವ ನಾಗೇಂದ್ರ ಉಪ್ಪು, ಕಾರ, ಸಿಹಿ ತಿನಿಸುಗಳನ್ನು ತಿನ್ನೋದಿಲ್ಲ. ಪ್ರತಿನಿತ್ಯ ಅರ್ಧ ಕಿಲೋ ಚಿಕನ್, 30 ಮೊಟ್ಟೆ, ವಿವಿಧ ತರಕಾರಿ, ಬ್ರೌನ್ ರೈಸ್ ಸೇರಿ ಡಯಟ್​ಗೆ ಸಂಬಂಧಿಸಿದ ತಿನಿಸುಗಳನ್ನಷ್ಟೇ ಸೇವಿಸುತ್ತಾರೆ. ಅಲ್ಲದೇ ಈವರೆಗೆ ನಾಗೇಂದ್ರ ಗರಡಿಯಲ್ಲಿ ಸಾವಿರಾರು ಬಾಡಿ ಬಿಲ್ಡರ್ ಗಳು ತರಬೇತಿ ಪಡೆದು ಸಾಧನೆ ಮಾಡುತ್ತಿದ್ದಾರೆ.

WhatsApp Group Join Now
Telegram Group Join Now
Share This Article