ನವದೆಹಲಿ, ಫೆಬ್ರವರಿ 2: ಕರ್ನಾಟಕ ಬಿಜೆಪಿಯಲ್ಲಿ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ. ಕರ್ನಾಟಕ ಬಿಜೆಪಿಯಲ್ಲಿ ಸ್ಪಷ್ಟವಾಗಿ ಎರಡು ಬಣಗಳು ಸೃಷ್ಟಿಯಾಗಿವೆ. ಒಂದು ಬಣ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರೆ, ಮತ್ತೊಂದು ಬಣ ವಿಜಯೇಂದ್ರ ಪರವಾಗಿ ಗಟ್ಟಿಯಾಗಿ ನಿಂತಿದೆ. ವಿಜಯೇಂದ್ರ ವಿರುದ್ಧದ ಬಣದಲ್ಲಿ ಸಂಘಟನಾ ಚತುರ ಎಂದು ಕರೆಸಿಕೊಳ್ಳುವ ಅರವಿಂದ ಲಿಂಬಾವಳಿ ಗುರುತಿಸಿಕೊಂಡಿದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿಯಾಗಿದ್ದಾರೆ.
ಸದ್ಯದಲ್ಲೇ ರಾಜ್ಯ ಬಿಜೆಪಿ ಘಟಕಕ್ಕೆ ಚುನಾವಣೆ ನಡೆಯಲಿದ್ದು ವಿಜಯೇಂದ್ರ ಮುಂದುವರೆಯಬಾರದು ಎಂಬ ಮನವಿ ಮಾಡಿದ್ದಾರೆ. ರಾಜ್ಯ ಬಿಜೆಪಿ ಘಟಕದಲ್ಲಿ ಉಂಟಾಗಿರುವ ಗೊಂದಲ, ಅದಕ್ಕೆ ಕಾರಣಗಳ ಬಗ್ಗೆ ವರಿಷ್ಠರಿಗೆ ಮಾಹಿತಿ ನೀಡಿದ್ದಾರೆ. ವರಿಷ್ಠರು ಕೂಡಲೇ ಮಧ್ಯಪ್ರವೇಶ ಮಾಡದಿದ್ದರೆ ಭಿನ್ನಮತ ಇನ್ನಷ್ಟು ತೀವ್ರವಾಗಲಿದೆ ಎಂಬುದನ್ನು ನಡ್ಡಾ ಅವರ ಗಮನಕ್ಕೆ ಲಿಂಬಾವಳಿ ತಂದಿದ್ದಾರೆ.