ಮುದ್ದೇಬಿಹಾಳ,ಡಿ.13: ಒಕ್ಕಲುತನ ಈ ದೇಶದ ಬೆನ್ನೆಲುಬು. ಬೇರೆ ದೇಶಗಳಿಗೆ ಹೋಲಿಸಿದರೆ ನಾವು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ. ಒಕ್ಕಲುತನ ಇರುವುದರಿಂದಲೇ ದೇಶದಲ್ಲಿ ನೆಮ್ಮದಿಯ ಜೀವನವಿದೆ. ಈ ಒಕ್ಕಲುತನವನ್ನು ಕಾಯ್ದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜಲಾನಯನ ಯೋಜನೆಗಳು ಇದಕ್ಕೆ ಪೂರಕವಾಗಿವೆ ಎಂದು ಶಾಸಕ, ಕೆಎಸ್ಡಿ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಹೇಳಿದರು.
ಕವಡಿಮಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಲಾನಯನ ಇಲಾಖೆ, ಜಿಪಂ, ಕೃಷಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಜಲಾನಯನ ಅಭಿವೃದ್ಧಿ ಘಟಕ 2.0 (ಪಿಎಂಕೆಎಸ್ವೈ ಡಬ್ಲುಡಿಸಿ 2.0) ಅಡಿ ಶನಿವಾರ ಏರ್ಪಡಿಸಿದ್ದ ಜಲಾನಯನ ಮಹೋತ್ಸವ-2025 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಲಾನಯನ ಇಲಾಖೆಯಿಂದ ಕುಂಟೋಜಿ, ಕವಡಿಮಟ್ಟಿ ಗ್ರಾಪಂ ವ್ಯಾಪ್ತಿಯ 2800 ಹೆಕ್ಟೇರ್ ಪ್ರದೇಶದಲ್ಲಿ ಅಭಿವೃದ್ಧಿ ಆಗುತ್ತಿರುವುದು ಸಾಮಾನ್ಯ ವಿಚಾರವಲ್ಲ. ಕವಡಿಮಟ್ಟಿಯಲ್ಲಿ ಒಂದು ಕಾಲದಲ್ಲಿ ಪ್ರಗತಿಶೀಲ ರೈತರಿದ್ದರು ಎನ್ನುವ ಕಾರಣಕ್ಕಾಗಿ ಈ ಊರಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲು ಸಲಹೆ ನೀಡಿದ್ದೇನೆ. ಎಲ್ಲರೂ ಕೃಷಿ ಹೊಂಡದ ಮಹತ್ವ ತಿಳಿದುಕೊಳ್ಳಬೇಕು ಎಂದರು.
ಕೃಷಿ ಉಪನಿರ್ದೇಶಕ ಶರಣಗೌಡ ಆರ್ ಅವರು ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಮುದ್ದೇಬಿಹಾಳ ತಾಲೂಕಿಗೆ ಮಾತ್ರ ಜಲಾನಯನ ಯೋಜನೆ ಮಂಜೂರಾಗಿದೆ. ಇದು ಶಾಸಕ ನಾಡಗೌಡರ ಸತತ ಪ್ರಯತ್ನದ ಫಲ. ಈ ಯೋಜನೆಯಡಿ ಕವಡಿಮಟ್ಟಿ ಮತ್ತು ಕುಂಟೋಜಿ ಗ್ರಾಪಂ ವ್ಯಾಪ್ತಿಯ 4-5 ಗ್ರಾಮಗಳಲ್ಲಿ ಜಾರಿಗೊಳ್ಳಲಿರುವ ಈ ಯೋಜನೆಯ ಅನುಷ್ಠಾನಕ್ಕೆ ಹಲವಾರು ಚಟುವಟಿಕೆಗಳು ಮುಂಬರುವ ದಿನಗಳಲ್ಲಿ ನಡೆಯಲಿವೆ. ಇದರ ಅರಿವನ್ನು ರೈತರು ಹೊಂದಿರಬೇಕು ಎನ್ನುವ ಉದ್ದೇಶದಿಂದ ಇಂಥ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಜಾಥಾ, ಬೀದಿನಾಟಕ ಇನ್ನಿತರ ಚಟುವಟಿಕೆಗಳ ಮೂಲಕ ಜಲಾನಯನ ಪ್ರದೇಶದ ಪರಿಕಲ್ಪನೆ ಮೂಡಿಸಲಾಗುತ್ತಿದೆ ಎಂದರು.
ವಿಜಯಪುರದ ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್.ಸಾವಳಗಿ ಉಪನ್ಯಾಸ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಶಕುಂತಲಾ ಹಂಡರಗಲ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿರುವ ಕೃಷಿ ಅಧಿಕಾರಿ ಅರವಿಂದ ಹೂಗಾರ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಆರ್.ಟಿ.ಹಿರೇಮಠ, ಎಸ್ಡಿಎಂಸಿ ಅಧ್ಯಕ್ಷ ಬಸವರಾಜ ಪಾಟೀಲ, ಕೃಷಿ ಇಲಾಖೆಯ ತಾಂತ್ರಿಕ ಸಹಾಯಕಿ ರಾಜೇಶ್ವರಿ ನಾಡಗೌಡ, ಕೃಷಿ ಅಧಿಕಾರಿಗಳಾದ ಸೋಮನಗೌಡ ಬಿರಾದಾರ, ಗೋವಿಂದಗೌಡ ಮೆದಿಕಿನಾಳ, ಮುಖಂಡರಾದ ಸಂಗನಗೌಡ ಪಾಟೀಲ ಇನ್ನಿತರರು ವೇದಿಕೆಯಲ್ಲಿದ್ದರು.
ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಹಾಯಕ ಕೃಷಿ ನಿರ್ದೇಶಕ ಎಸ್.ಡಿ.ಭಾವಿಕಟ್ಟಿ ಸ್ವಾಗತಿಸಿದರು. ಶಿಕ್ಷಕ ಟಿ.ಡಿ.ಲಮಾಣಿ ನಿರೂಪಿಸಿ ವಂದಿಸಿದರು. ಇದಕ್ಕೂ ಮುನ್ನ ಗ್ರಾಮದಲ್ಲಿ ಜಲಾನಯನ ಕುರಿತು ವಿದ್ಯಾರ್ಥಿಗಳೊಂದಿಗೆ ಜಾಥಾ, ಬೀದಿನಾಟಕ ನಡೆಸಿ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಚಟುವಟಿಕೆಗಳಲ್ಲಿ ಸಾಧನೆ ತೋರಿದವರನ್ನು ಪುರಸ್ಕರಿಸಲಾಯಿತು. ಅರ್ಹ ಫಲಾನುಭವಿಗಳಿಗೆ ಕೃಷಿ ಯಂತ್ರೋಪಕರಣ ವಿತರಿಸಲಾಯಿತು.
ಘನಮಠ ಶಿವಯೋಗಿಗಳು ಹೇಳುವಂತೆ ಹೊಲಕ್ಕೆ ಒಡ್ಡು ಹಾಕಬೇಕು. ಸಮಪಾತಳಿ ಇರಬೇಕು. ಓಡುವ ನೀರನ್ನು ನಿಲ್ಲಿಸಬೇಕು. ಅಂದಾಗ ಮಾತ್ರ ರೈತರು ಉದ್ದಾರ ಆಗುತ್ತಾರೆ. ಕೃಷಿ ಪವಿತ್ರ ಕಸುಬು. ಇದನ್ನು ನಮ್ಮ ಹಿರಿಯರು ಯಾವ ರೀತಿ ಮಾಡ್ತಿದ್ದರು ಅನ್ನೋದನ್ನು ನಾವೆಲ್ಲರು ಮೆಲುಕು ಹಾಕಬೇಕು ಎಂದು ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ರೈತರಿಂದ ಪ್ರತಿಜ್ಞೆ ಸ್ವೀಕಾರ:
ಸಣ್ಣ, ಜಿನುಗು ಕೆರೆ ಇತ್ಯಾದಿ ಜಲಾನಯನ ರಚನೆಗಳ ನಿರ್ಮಾಣ ಮಾಡಿ ನಿರ್ವಹಣೆಯಲ್ಲಿ ಸಹಕರಿಸುತ್ತೇನೆ. ನನ್ನ ಜಮೀನಿನಲ್ಲಿ, ಜಲಾನಯನ ಪ್ರದೇಶದಲ್ಲಿ ಮಣ್ಣಿನ ಸವೆತವನ್ನು ತಡೆಗಟ್ಟಲು ಗಿಡ, ಮರಗಳನ್ನು ನೆಡುತ್ತೇನೆ. ಒಡ್ಡುಗಳನ್ನು ರಚಿಸುತ್ತೇನೆ. ಜಮೀನಿನಲ್ಲಿ, ಮನೆಯಲ್ಲಿ ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಪುನಶ್ಚೇತನ ವ್ಯವಸ್ಥೆ ಮಾಡುತ್ತೇನೆ. ಹವಾಮಾನ ಸ್ನೇಹಿ ಕೃಷಿ ಮತ್ತು ಸುಧಾರಿತ ನೀರಾವರಿ ವಿಧಾನಗಳನ್ನು ಬಳಸುತ್ತೇನೆ. ಎಲ್ಲರನ್ನೂ ಈ ಕುರಿತು ಪ್ರೋತ್ಸಾಹಿಸುತ್ತೇನೆ ಎನ್ನುವ ಪ್ರತಿಜ್ಞೆಯನ್ನು ಎಲ್ಲ ರೈತರು ಸಾಮೂಹಿಕವಾಗಿ ಸ್ವೀಕರಿಸಿ ಗಮನಸೆಳೆದರು.


