ಯರಗಟ್ಟಿ : ತಾಲೂಕಿನ ಮುಗಳಿಹಾಳ ಗ್ರಾಮದ ಪ್ರತಿಭೆ ಸಂಸ್ಕೃತ ವಿದ್ಯಾಭ್ಯಾಸದಲ್ಲಿ ಅಪೂರ್ವ ಸಾಧನೆಗೈದ ಋತು ಜಿ. ಗಂಗರಡ್ಡಿ ಅವರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಹನ್ನೆರಡು ಹಾಗೂ ಹದಿಮೂರನೇ ದೀಕ್ಷಾಂತ ಘಟಿಕೋತ್ಸವದಲ್ಲಿ ಪ್ರತಿಷ್ಠಿತ “ಇನ್ಫೋಸಿಸ್ ದತ್ತಿನಿಧಿ’ ನಗದು ಪುರಸ್ಕಾರವನ್ನು ಸ್ವೀಕರಿಸಿ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.
ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಈ ಭವ್ಯ ಸಮಾರಂಭವು ವಿದ್ಯಾರ್ಥಿಗಳ ಸಾಧನೆಗೆ ಸಾಕ್ಷಿಯಾದ ಮಹತ್ವದ ವೇದಿಕೆಯಾಗಿತ್ತು. ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳ ಪರಿಶ್ರಮವನ್ನು ಕೊಂಡಾಡಿದರು.
ಉನ್ನತ ಶಿಕ್ಷಣ ಸಚಿವರಾದ ಎಮ್ ಸಿ ಸುಧಾಕರ್ ಅವರು ವಿಶಿಷ ಅತಿಥಿಯಾಗಿ ಭಾಗವಹಿಸಿ, ಶ್ರೇಷ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ಖ್ಯಾತ ಹೃದ್ರೋಗ ತಜ್ಞರು ಹಾಗೂ ಸಂಸದರಾದ ಸಿ ಎನ್ ಮಂಜುನಾಥ್ ಅವರು ದೀಕ್ಷಾಂತ ಭಾಷಣದ ಮೂಲಕ ಯುವಜನತೆಗೆ ಗುರಿ ಸಾಧನೆಗೆ ಪ್ರೇರಣಾದಾಯಕ ಸಂದೇಶ ನೀಡಿದರು.
೨೦೨೩-೨೪ನೇ ಸಾಲಿನ ಆಚಾರ್ಯ (ಎಂ.ಎ.) ಅದ್ವೈತ ವೇದಾಂತ ವಿಭಾಗದಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಋತು ಗಂಗರಡ್ಡಿ ಅವರು ಈ ಗೌರವಕ್ಕೆ ಪಾತ್ರರಾಗಿದ್ದು, ತಮ್ಮ ನಿರಂತರ ಪರಿಶ್ರಮ, ಶಿಸ್ತಿನ ಅಧ್ಯಯನ ಮತ್ತು ವಿಷಯದ ಮೇಲಿನ ಆಳವಾದ ಆಸಕ್ತಿಯಿಂದ ಈ ಸಾಧನೆಯನ್ನು ಸಾಧಿಸಿದ್ದಾರೆ. ವೇದವಿಜ್ಞಾನ ಶೋಧ ಸಂಸ್ಥಾನ ಸಂಸ್ಕೃತ ಮಹಾಪಾಠಶಾಲೆಯ ವಿದ್ಯಾರ್ಥಿನಿಯಾಗಿರುವ ಇವರ ಸಾಧನೆ ಸಂಸ್ಥೆಯಿಗೂ ಹೆಮ್ಮೆಯ ವಿಷಷಷಯವಾಗಿದೆ.
ಪುರಸ್ಕಾರ ಸ್ವೀಕರಿಸುವ ಸಂದರ್ಭದಲ್ಲಿ ಸಭಾಂಗಣದಲ್ಲಿ ಮೊಳಗಿದ ಅಭಿನಂದನೆಗಳು, ಋತು ಅವರ ಸಾಧನೆಯ ಮಹತ್ವವನ್ನು ಮತ್ತೊಮ್ಮೆ ಎತ್ತಿಹಿಡಿದವು. ಅವರ ಈ ಸಾಧನೆ ಕೇವಲ ವೈಯಕ್ತಿಕ ಯಶಸ್ಸಲ್ಲದೆ, ಸಂಸ್ಕೃತ ಮತ್ತು ವೇದ ವಿದ್ಯೆಯ ಮೇಲಿನ ಆಸಕ್ತಿಯನ್ನು ಯುವಜನರಲ್ಲಿ ಹೆಚ್ಚಿಸುವಂತಾಗಿದೆ.


