ಬಳ್ಳಾರಿ. ಮಾ. 23.: ತುಂಗಭದ್ರಾ ಜಲಾಶಯದಲ್ಲಿ ಸುಮಾರು 33 ಟಿಎಂಸಿ ಯಷ್ಟು ಹೂಳು ತುಂಬಿಕೊಂಡಿದ್ದು ಇದರಿಂದ ನೀರಿನ ಸಂಗ್ರಹ 100 ಟಿ ಎಂ ಸಿ ಗೆ ಇಳಿದಿದೆ ಹೂಳು ತೆಗೆಯಲು ಮೂರು ರಾಜ್ಯದ ಯಾವುದೇ ಸರ್ಕಾರ ಮುಂದಾಗುತ್ತಿಲ್ಲ ಕಾರಣ ತುಂಗಭದ್ರ ರೈತ ಸಂಘದಿಂದ 2017ರಲ್ಲಿ ಹಮ್ಮಿಕೊಂಡಂತೆ ಈ ಸಲ ಮೇ ತಿಂಗಳಿನಿಂದ ಹೂಳು ತೆಗೆಯುವ ಕಾರ್ಯ ಹೂಳಿನ ಜಾತ್ರೇಯನ್ನು ಆರಂಭಿಸಲಾಗುವುದು ಎಂದು ತುಂಗಭದ್ರ ರೈತ ಸಂಘದ ಜಿಲ್ಲಾಧ್ಯಕ್ಷ ದರೂರು ಪುರುಷೋತ್ತಮ ಗೌಡ ತಿಳಿಸಿದರು.
ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಅಂತರಾಷ್ಟ್ರೀಯ ಜಲ ದಿನಾಚರಣೆಯ ನಿಮಿತ್ತ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ರಾಜ್ಯದ ಬಳ್ಳಾರಿ ವಿಜಯನಗರ ಕೊಪ್ಪಳ ರಾಯಚೂರು ನಾಲ್ಕು ಜಿಲ್ಲೆಗಳು, ಆಂಧ್ರಪ್ರದೇಶದ ಅನಂತಪುರ ಕರ್ನೂಲು ಕಡಪ ಮೂರು ಜಿಲ್ಲೆಗಳು ಹಾಗೂ ತೆಲಂಗಾಣದ ಎರಡು ಜಿಲ್ಲೆಗಳು ಸೇರಿದಂತೆ ಒಟ್ಟು ಒಂಬತ್ತು ಜಿಲ್ಲೆಗಳ ರೈತರ ಜೀವನಾಡಿಯಾದ ತುಂಗಭದ್ರಾ ಜಲಾಶಯ ಹೂಳುನಿಂದ ಕೂಡಿದ್ದು ಇದನ್ನು ತೆರವುಗೊಳಿಸಿದಲ್ಲಿ 30 ಟಿಎಂಸಿ ಯಷ್ಟು ಹೆಚ್ಚಿನ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳಬಹುದು, ಈ ಹೂಳನ್ನು ತೆಗೆಯಲು ತುಂಗಭದ್ರ ರೈತ ಸಂಘ ಮುಂದಾಗಿದ್ದು ಜಲಾಶಯದ ಹಾಲಿ ಮಾಜಿ ಇಂಜಿನಿಯರ್ ಗಳು ಮತ್ತು ನೀರಾವರಿ ತಜ್ಞರು ಜೊತೆಗೆ ಮಠಾಧೀಶರ ಸಹಯೋಗದಲ್ಲಿ ಹೂಳಿನ ಜಾತ್ರೆಯನ್ನು ನಡೆಸಿ ಸತತ ಒಂದು ವಾರಗಳ ಕಾಲ ಪ್ರತಿದಿನ ಐದು ನೂರು ಟ್ರ್ಯಾಕ್ಟರ್ ಗಳಷ್ಟು ಹೂಳನ್ನು ತೆಗೆಯಲಾಗುವುದು,
ಕಳೆದ ಬಾರಿ ಹೂಳಿನ ಜಾತ್ರೆ ನಡೆಸುವಾಗ ನಮ್ಮದೇ ರೈತ ಸಂಘದ ನಾಯಕರು ನನ್ನ ಮೇಲೆ ಆಪಾದನೆ ಮಾಡಿ ಗೂಬೆ ಕೂರಿಸಿದ್ದರು, ಇದರಿಂದ ಹೂಳಿನ ಜಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು ಈ ಬಾರಿ ಯಾವುದೇ ಕಾರಣಕ್ಕೂ ನಿಲ್ಲಿಸದೆ ಯೋಜಿತಗೊಂಡಷ್ಟು ದಿನ ಸತತವಾಗಿ ಹೂಳು ತೆಗೆಯುವ ಕಾರ್ಯ ನಡೆಸಲಾಗುವುದು ಎಂದರು.
ಜಲಾಶಯದಿಂದ ಕೈಗಾರಿಕೆಗಳು ನೀರು ಮಾತ್ರ ಪಡೆಯುತ್ತಿವೆ ಪ್ರತಿಯಾಗಿ ನಮಗೆ ಏನು ಕೊಟ್ಟಿದೆ ಎಂದು ಪ್ರಶ್ನಿಸಿದ ಗೌಡ, ನೀರು ಬೇಕಾದರೆ ಹೂಳು ತೆಗೆಯಿರಿ ಎಂದು ಕರೆ ನೀಡಿ, ಹೂಳು ತೆಗೆಯಲು ಕಂಪನಿಯ ಲಾರಿ ಹಿಟಾಚಿ ಮತ್ತು ಜೆಸಿಬಿಗಳನ್ನು ನೀಡಿ ಹೂಳು ತೆಗೆಯುವ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ತಾಕಿತು ಮಾಡಿದರು .
ನಾಲ್ಕು ಜಿಲ್ಲೆಗಳ ಶಾಸಕರು ಮತ್ತು ಸಚಿವರಿಗೆ ಜಲಾಶಯದ ನೀರನ್ನು ಸದುಪಯೋಗಪಡಿಸಿಕೊಳ್ಳುವ ಪೂರ್ವಭಾವಿ ಚಿಂತನೆ ಇಲ್ಲ ಎಂದ ಅವರು ಜನಪ್ರತಿನಿಧಿಗಳು ಜಲಾಶಯದ ಹೂಳು ತೆಗೆಯಲು ಸರ್ಕಾರದ ಮೇಲೆ ಒತ್ತಡ ಏರಬೇಕೆಂದು ಆಗ್ರಹಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಜಾಲಿಹಾಳ್ ಶ್ರೀಧರ್ ಗೌಡ ಆಗಲೂರಪ್ಪ ಮಲ್ಲ ರೆಡ್ಡಿ ವೀರಭದ್ರ ನಾಯಕ ವೀರೇಶ್ ವೀರಭದ್ರಯ್ಯ ಸೇರಿದಂತೆ ಇತರ ರೈತ ಮುಖಂಡರುಗಳು ಇದ್ದರು.


