ಬೆಂಗಳೂರು: ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್) ಮತಗಳು ಬಿಜೆಪಿಗೆ ಹೋಗಿದ್ದರಿಂದಲೇ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ತಮ್ಮ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಸೋಲು ಕಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ನಂತರ ಲಕ್ಷ್ಮಿ ಈ ವಿಷಯ ತಿಳಿಸಿದರು.ಕಾಂಗ್ರೆಸ್ ಟಿಕೆಟ್ನಿಂದ ಸ್ಪರ್ಧಿಸಿದ್ದ ಅವರ ಪುತ್ರ ಮೃಣಾಲ್ ಬಿಜೆಪಿಯ ಜಗದೀಶ್ ಶೆಟ್ಟರ್ ವಿರುದ್ಧ 1.78 ಲಕ್ಷ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.
‘ಬೆಳಗಾವಿಯಲ್ಲಿ ತ್ರಿಕೋನ ಸ್ಪರ್ಧೆ ನಡೆಯುತ್ತಿತ್ತು. ಆದರೆ, ಈ ಬಾರಿ ಬಿಜೆಪಿ ಮತ್ತು ಎಂಇಎಸ್ ಒಟ್ಟಿಗೆ ಬಂದಂತೆ ಕಾಣುತ್ತಿದೆ’ ಎಂದು ಲಕ್ಷ್ಮಿ ಹೇಳಿದರು.
‘ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಗ್ರಾಮಾಂತರದಲ್ಲಿ ಎಂಇಎಸ್ 45 ಸಾವಿರ ಮತಗಳನ್ನು ಪಡೆದಿದೆ. ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ 4 ಲಕ್ಷ ಮತ ಪಡೆದಿದ್ದರೆ, ಎಂಇಎಸ್ 1.30 ಲಕ್ಷ ಮತ ಪಡೆದಿತ್ತು. ಈ ಬಾರಿ ಎಂಇಎಸ್ ಅಭ್ಯರ್ಥಿ ಕೇವಲ 9 ಸಾವಿರ ಮತ ಪಡೆದಿದ್ದಾರೆ’ ಎಂದು ಹೇಳಿದರು. ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದನ್ನು ಲಕ್ಷ್ಮಿ ಸಮರ್ಥಿಸಿಕೊಂಡಿದ್ದಾರೆ.