ಬೆಂಗಳೂರು: ”ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಇದರಿಂದ ರಾಜ್ಯದಲ್ಲಿ ಮೆಡಿಕಲ್ ಎಮರ್ಜೆನ್ಸಿ ಎಂದು ಘೋಷಿಸಬೇಕು. ಜೊತೆಗೆ ಡೆಂಗ್ಯೂ ನಿಯಂತ್ರಣಾ ಕ್ರಮಕ್ಕೆ ಟಾಸ್ಕ್ ಫೋರ್ಸ್ ರಚಿಸಬೇಕು” ಎಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು (ಶನಿವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ”ಕೋವಿಡ್ ಸಂದರ್ಭದಲ್ಲಿ ಯಾವ ರೀತಿ ಉಚಿತ ಚಿಕಿತ್ಸೆ ನೀಡಲಾಯ್ತು. ಅದೇ ರೀತಿ ಡೆಂಗ್ಯೂ ಕಾಯಿಲೆ ಬಂದವರಿಗೂ ಕನಿಷ್ಠ ಮಾನದಂಡದಲ್ಲಿ ಉಚಿತ ಚಿಕಿತ್ಸೆ ನೀಡಬೇಕು” ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
”ಡೆಂಗ್ಯೂ ಜ್ವರ ನಿಯಂತ್ರಣ ಅಂದ್ರೆ ಸೊಳ್ಳೆ ನಿಯಂತ್ರಣ. ಸೊಳ್ಳೆ ನಿಯಂತ್ರಣ ಆದರೆ ಮಾತ್ರ ಡೆಂಗ್ಯೂ ನಿಯಂತ್ರಣ ಆಗಲಿದೆ. ಮಳೆಗಾಲ ಪ್ರಾರಂಭದಲ್ಲಿ ಸೊಳ್ಳೆಯಿಂದ ಹರಡುವ ಕಾಯಿಲೆಗಳು ಹೆಚ್ಚಾಗಲಿವೆ. ಡೆಂಗ್ಯೂ ತಡೆಗಟ್ಟದಿದ್ದರೆ ಚಿಕೂನ್ ಗುನ್ಯಾ, ಜೀಕಾ ವೈರಸ್ ಬರಬಹುದು” ಎಂದು ಹೇಳಿದರು. ”ಕೋವಿಡ್ ಪ್ಯಾಂಡಮಿಕ್ ಅಂದೆವು. ಪ್ಯಾಂಡಮಿಕ್ ಅಂದರೆ ದೇಶದಲ್ಲಿ ಹರಡೋದು. ಡೆಂಗ್ಯೂ ಎಂಡಮಿಕ್ ಆಗಿದೆ.
ಎಂಡಮಿಕ್ ಅಂದರೆ ರಾಜ್ಯಾದ್ಯಂತ ಹರಡಿರೋದು. ಇದಕ್ಕೆ ತುರ್ತು ಚಿಕಿತ್ಸೆ ಅಗತ್ಯವಿದೆ” ಎಂದರು.