ಗದಗ,ಏಪ್ರಿಲ್16: ಹಿರಿಯ ಚಲನಚಿತ್ರನಟ, ಕರ್ನಾಟಕದ ಸಾಂಸ್ಕೃತಿಕ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಡಾ. ಬಿ. ಎಸ್. ದ್ವಾರಕೀಶ ಅವರು ತಮ್ಮ ೮೧ ನೆಯ ವಯಸ್ಸಿನಲ್ಲಿ ವಿಧಿವಶರಾದುದು ಸಾಂಸ್ಕೃತಿಕ ಲೋಕದ ಉಜ್ವಲ ನಕ್ಷತ್ರವೊಂದು ಕಣ್ಮರೆಯಾದಂತಾಗಿದೆ ಎಂದು ಗದಗ-ಡಂಬಳ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತಮ್ಮ ಶೋಕ ವ್ಯಕ್ತಪಡಿಸಿದ್ದಾರೆ.
ಸತತ ಆರು ದಶಕಗಳ ಕಾಲ ಚಲನಚಿತ್ರರಂಗದ ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಸೇವೆ ಸಲ್ಲಿಸಿದ್ದ ಅವರು ಅನೇಕ ಚಿತ್ರಕಥೆಗಳನ್ನು ರಚಿಸಿ ಖ್ಯಾತನಾಮರಾಗಿದ್ದರು. ಡಾ. ರಾಜಕುಮಾರ, ಡಾ. ವಿಷ್ಣುವರ್ಧನ ಮುಂತಾದ ನಾಯಕನಟರೊಂದಿಗೆ ಪಾತ್ರ
ನಿರ್ವಹಿಸಿದ್ದ ಅವರು ಹಾಸ್ಯನಟರೆಂದೇ ಹೆಸರುವಾಸಿಯಾಗಿದ್ದರು.
ತಮ್ಮ ಅಭಿನಯದ ಮೂಲಕ ಚಲನಚಿತ್ರ ವೀಕ್ಷಕರನ್ನು ಹೊಟ್ಟೆಹುಣ್ಣಾಗುವಂತೆ ನಗಿಸುತ್ತಿದ್ದರೂ ಅಶ್ಲೀಲತೆ ಹಾಗೂ ದ್ವಂದ್ವಾರ್ಥಗಳ ಪ್ರಯೋಗಕ್ಕೆ ಎಡೆಮಾಡಿಕೊಡುತ್ತಿರಲಿಲ್ಲ. ಮೇಯರ್ ಮುತ್ತಣ್ಣ, ಕುಳ್ಳ ಎಜಂಟ್, ಭಾಗ್ಯವಂತರು, ಕುಳ್ಳ- ಕುಳ್ಳಿ, ಕಿಟ್ಟು-ಪುಟ್ಟು ಇಂದಿನ ರಾಮಾಯಣ, ಭಾಗ್ಯವಂತರು ಮುಂತಾದ ಚಿತ್ರಗಳಲ್ಲಿ ಅವರು ತುಂಬ ಮನೋಜ್ಞವಾಗಿ ಅಭಿನಯಿಸಿದ್ದರು.
ಚಲನಚಿತ್ರರಂಗದಲ್ಲಿ ಅವರಿಗೆ ವಿಶೇಷ ಗೌರವದ ಸ್ಥಾನವಿತ್ತು. ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪುರಸ್ಕಾರಕ್ಕೆ ಭಾಜನರಾಗಿದ್ದ ಅವರು ಅನೇಕ ಸಂಘ-ಸಂಸ್ಥೆಗಳ, ಸರಕಾರದ ವಿವಿಧ ಪ್ರಶಸ್ತಿಗಳಿಂದ ವಿಭೂಷಿತರಾಗಿದ್ದರು. ಅವರ ಅಗಲುವಿಕೆ
ನಮ್ಮ ನಾಡಿಗೆ ತುಂಬಲಾಗದ ನಷ್ಟವನ್ನುಂಟು ಮಾಡಿದೆ. ಕನ್ನಡಿಗರು ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಶ್ರೀಗಳು ತಮ್ಮ
ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ದಯಾಘನನಾದ ಭಗವಂತ ಅವರ ಆತ್ಮಕ್ಕೆ ಚಿರಶಾಂತಿಯನ್ನು ದಯಪಾಲಿಸಲಿ. ಕರ್ನಾಟಕ ಸರಕಾರ ಅವರ ಹೆಸರನ್ನು ಚಿರಸ್ಥಾಯಿಗೊಳಿಸುವ ನಿಟ್ಟಿನಲ್ಲಿ ಸ್ಮಾರಕ ನಿರ್ಮಾಣ ಮಾಡಲಿ ಅಥವಾ ಯಾವುದಾದರೂ ಯೋಜನೆಯನ್ನು ಹಾಕಿಕೊಂಡು ಅನುಷ್ಠಾನಗೊಳಿಸಲಿ ಎಂದು ಆಶಿಸುವೆವು.