•ಅಮ್ಮ ನೀನು ನಕ್ಕರೆ, ನಮ್ಮ ಬಾಳು ಸಕ್ಕರೆ!
•ಮೇ11 ರಂದು ಅಮ್ಮನ ದಿನ
•ಮಮತೆಯ ಮಾತೆಯ ಸ್ಮರಿಸುವ ಮೂಲಕ ವಿಶ್ವ ಮಾತೃ ದಿನವನ್ನು ಆಚರಿಸೋಣ
“ತಾಯಿ, ಮನೆಯ ಹೃದಯಬಡಿತ, ಆಕೆ ಇಲ್ಲದೆ ಇದ್ದರೆ ಮನೆಯ ಹೃದಯವೇ ಇಲ್ಲದಂತೆ ಭಾಸವಾಗುತ್ತದೆ.”ಎಂದು ತಾಯಿಯ ಪ್ರಾಮುಖ್ಯತೆಯನ್ನು ಅರ್ಥೈಸುವ ಮಾತಾಗಿದೆ.ದೇವರು ನನಗೆ ನೀಡಿದ ಶ್ರೇಷ್ಠ ಸಂಪತ್ತು ನೀವು. ಎಲ್ಲಾ ದೇವರಿಗಿಂತ ಮಿಗಿಲು ನೀವು.ತಾಯಿಯ ಪ್ರೀತಿಯ ನೆರಳು ಉಸಿರು ನೀಡಿದ ದೇವರು ನೀವು… ಸುಂದರ ಬದುಕಿನ ಮಾರ್ಗದರ್ಶಿ ನೀವು… ಅಮ್ಮ, ನೀವಿಲ್ಲದೆ ಜಗವೇ ಇಲ್ಲ… ಹೌದು ಹೀಗೆ ತಾಯಿಯನ್ನು ಎಷ್ಟು ವರ್ಣಿಸಿದರೂ ಸಾಲದು. ಅಮ್ಮ ಎಂಬ ಮಾತೇ ಅಮೃತ. ಅಮ್ಮನ ಪ್ರೀತಿಯೇ ಸಂಜೀವಿನಿ. ಅಮ್ಮ ಎಂದರೆ ವಾತ್ಸಲ್ಯದ ಮೂರ್ತಿ. ಹಾಗಾಗಿ ತಾಯಿ ಪ್ರೀತಿಗೆ ಕೊನೆಯ ಇಲ್ಲ.ತಾಯಿಯೇ ಮೊದಲ ಗುರು ಮನೆಯೇ ಮೊದಲ ಪಾಠ ಶಾಲೆ ಎಂಬಂತೆ ಮನೆಯಲ್ಲಿ ಮಗು ಮೊದಲು ನುಡಿವ ಶಬ್ದ “ಅಮ್ಮ’, ಕಿರಿಯರಿಂದ ಹಿಡಿದು ಹಿರಿಯರವರೆಗೆ ಅಕ್ಕರೆಯ, ಸಕ್ಕರೆಯ ಪದ “ಅಮ್ಮ”.ಅಮ್ಮ ಎನ್ನುವ ಪದ ನಮ್ಮ ಮನವನ್ನು ರೋಮಾಂಚನಗೊಳಿಸುತ್ತದೆ. ಆಕಸ್ಮಾತ್ ನಮಗೇನಾದರು ಆಘಾತ ಅಥವಾ ನೋವುಂಟಾದಾಗ’ ಅಮ್ಮಾ’….! ಎನ್ನುತ್ತೇವೆ ವಿನಃ ಅಪ್ಪಾ, ಅಜ್ಜಿ, ಅಜ್ಜ ಎಂದೂ ಕರೆಯುವುದಿಲ್ಲ ಇದು ಸಮಾಜದ ಸಹಜ ಸಂಗತಿ.ಹಾಗಾಗಿ ಧರ್ಮಶಾಸ್ತ್ರಕಾರ ‘ಮನು’ ಅವರು ಮನುಸ್ಮೃತಿಯಲ್ಲಿ ತಾಯಿ ಕುರಿತಾದ ಸಂಸ್ಕೃತ ನುಡಿಮುತ್ತು ಹೀಗಿದೆ-
ಉಪಾಧ್ಯಾಯಾನ್ ದಶಾಚಾರ್ಯ;
ಆಚಾರ್ಯಾಣಾಂ ಶತಂಪಿತಾ |
ಸಹಸ್ರಂತು ಪಿತೃನ್ ಮಾತಾ;
ಗೌರವೇಣಾತಿಲಚ್ಯತೇ |ಅರ್ಥಾತ್: ಶಿಕ್ಷಕನಿಗಿಂತ ಹತ್ತುಪಟ್ಟುಗುರುವೂ,ಗುರುವಿಗಿಂತ ನೂರುಪಟ್ಟು ತಂದೆಯೂ,ತಂದೆಗಿಂತ ಸಾವಿರಪಟ್ಟು ತಾಯಿಯೂ ಗೌರವಕ್ಕೆ ಪಾತ್ರಳಾಗಿರುತ್ತಾಳೆ ಎಂದು ಅವಳ ಕುರಿತು ಹೇಳಿದ ಮಾತು ಅಕ್ಷರಶಃ ಸತ್ಯ. ಸದಾ ನನ್ನೊಂದಿಗೆ ಇರುವ ದೇವರಿಗೆ ಹೊಗಳಲು ಪದಗಳಿಗೆ ಸಿಗದ ಮಾತೃ ಹೃದಯ ಅವಳದು.ಜೀವನದ ಆರಂಭದಲ್ಲಿ ಬದುಕಿಗೆ ಯಾವುದೇ ಮಾರ್ಗಸೂಚಿಯ ಇರುವುದಿಲ್ಲ ಆ ಸಮಯದಲ್ಲಿ ಬದುಕಿಗೆ ದಾರಿ ತೋರುವವಳು ತಾಯಿಯೊಬ್ಬಳೇ ಅದಕ್ಕಾಗಿ “ನನ್ನಮ್ಮ ನನ್ನ ಬದುಕಿನ ಮಾರ್ಗದರ್ಶಿ” .ಹಾಗಾಗಿ ಅಮ್ಮನ ನೆನಪಿಗೆ, ಅಮ್ಮನಿಗೆ ಮೀಸಲಿಟ್ಟ ಗೌರವದ ದಿನವಾಗಿ ಭಾರತ ಹಾಗೂ ಇತರೆ ದೇಶಗಳಲ್ಲಿ ಹುಟ್ಟಿಕೊಂಡಿದ್ದೇ “ತಾಯಿಯ ದಿನ(Mother’s Day)”.ಈ ದಿನವನ್ನು ಪ್ರತಿವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ಆಚರಿಸಲಾಗುತ್ತದೆ.ಈ ವರ್ಷ 11/05/2025 ರಂದು ಬಂದಿರುತ್ತದೆ.ಈ ದಿನ ಅಮ್ಮಂದಿರ ಮತ್ತು ಅವರ ತಾಯ್ತನದ ಮಹತ್ವವನ್ನು ಈ ಮೂಲಕ ತಿಳಿಸುವ ಕಾರ್ಯ ಮಾಡಲಾಗುತ್ತಿದೆ.
“ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರುತ್ತಾರೆ; ಆದರೆ ಕೆಟ್ಟ ತಾಯಿ ಇರಲೂ ಸಾಧ್ಯವಿಲ್ಲ” ಎಂಬುದಾಗಿ ಶಾಸ್ತ್ರಜ್ಞರು ಹೇಳುತ್ತಾರೆ. ಅದುವೇ ತಾಯಿಯ ಶ್ರೇಷ್ಠತೆ ಮತ್ತು ಭವ್ಯತೆ. ತನ್ನ ಕನಸುಗಳನ್ನು ಮರೆತು ಸುಖವನ್ನು ತ್ಯಾಗ ಮಾಡಿ ಆಕೆ ಮಕ್ಕಳ ಸಂತೋಷವನ್ನೇ ತನ್ನದಾಗಿ ಮಾರ್ಪಡಿಸಿಕೊಳ್ಳುತ್ತಾಳೆ.ಅಮ್ಮಾ ಎಂದರೆ.. ಏನೋ ಹರುಷವು..ನಮ್ಮ ಪಾಲಿಗೆ ಅವಳೆ ದೈವವೋ.. ಇದು ಪ್ರಸಿದ್ಧ ಕನ್ನಡ ಚಲನಚಿತ್ರ ಗೀತೆಯೊಂದರ ಸಾಲು. ಇದು ಸಾರ್ವಕಾಲಿಕ ಸತ್ಯವೂ ಹೌದು.ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ ಎಂಬ ಗಾದೆಯಂತೆ ಯಾವುದೇ ಪದಾರ್ಥಕ್ಕೆ ಉಪ್ಪಿಲ್ಲದಿದ್ದರೆ ಹೇಗೆ ರುಚಿಯಿರುವುದಿಲ್ಲವೊ ಅದೇ ರೀತಿ ತಾಯಿಗಿಂತ ಮಿಗಿಲಾದ ಸ್ನೇಹಿತರು ಹಾಗೂ ಬಾಂಧವರು ಇರುವುದಿಲ್ಲ. ನಾವು ತಾಯಿಗೆ ಸದಾ ಒಂದು ಉನ್ನತ ಸ್ಥಾನವನ್ನು ಕೊಡಬೇಕು, ಅವಳನ್ನು ಗೌರವಿಸಬೇಕು ಮತ್ತು ಆರಾಧಿಸಬೇಕು. ಎಂದಿಗೂ ಅವಳನ್ನು ನಾವು ನಿಂದಿಸಬಾರದು, ಅವಳ ಮಾತೃ ಹೃದಯಕ್ಕೆ ನೋವನ್ನುಂಟುಮಾಡಬಾರದು.ಅವಳಲ್ಲಿ ಅಸೂಯೆ, ಸ್ವಾರ್ಥ ಇರುವುದಿಲ್ಲ. ಹೀಗೆ ನಾವು ಅಮ್ಮನ ನಿಜವಾದ ಪ್ರೀತಿಯನ್ನು- ಅವಳ ಕಾತುರತೆಯನ್ನು ಅರ್ಥಮಾಡಿಕೊಂಡು ನಮಗಾಗಿ, ನಮ್ಮ ಒಳಿತಿಗಾಗಿ ಸದಾ ಚಿಂತಿಸುವ ಆ ಮಾತೃ ಹೃದಯಕ್ಕೆ ಸಂತೋಷ ಉಣಿಸುವುದೇ ಮಕ್ಕಳ ಕರ್ತವ್ಯವಾಗಬೇಕು ವಿನಃ ದುಃಖ ನೀಡಬಾರದು.ಅವಳಲ್ಲಿ ವಿಶಾಲವಾದ ಮನೋಭಾವನೆಯಿದೆ. ಇವಳು ತ್ಯಾಗಮಯಿ, ಕರುಣಾಮಯಿ ಹಾಗೂ ಕ್ಷಮಯಾಧರಿತ್ರಿ. ಇಂತಹ ಎಲ್ಲಾ ಗುಣಗಳನ್ನು ನಾವು ಯಾವ ಸಂಬಂಧದಲ್ಲಿಯೂ ಕಾಣಿಸುವುದಿಲ್ಲ ಹಾಗೂ ಕಾಣಲಾಗುವುದಿಲ್ಲ . ಇಂದು ನಾವಿರುವ ಸ್ಥಿತಿಗೆ ಅವಳ ಆಸರೆ, ಅಕ್ಕರೆ ಮತ್ತು ಪ್ರೋತ್ಸಾಹವೇ ಕಾರಣ. ಅಮ್ಮನಲ್ಲಿ ಎಳ್ಳಷ್ಟೂ ಮತ್ಸರ, ದ್ವೇಷ ಮತ್ತು ಅಸೂಯೆಯಿಲ್ಲದೆ ಪ್ರತಿ ಕ್ಷಣವೂ ತನ್ನ ಮಗುವಿಗಾಗಿ ಹಾತೊರೆಯುತ್ತಾಳೆ. ಇಂತಹ ಅಮೂಲ್ಯವಾದ ಜೀವಕ್ಕೆ ನಾವು ಎಷ್ಟು ಋಣಿಯಾಗಿದ್ದರೂ ಸಾಲದು. ಅಲ್ಲವೆ?.
ಒಟ್ಟಾರೆಯಾಗಿ ಈ ದಿನ ಬಂದೊಡನೆಯೇ ಇಂದು ನಾವು ಅಮ್ಮನಿಗಾಗಿ ಏನು ಮಾಡಬೇಕು? ಆ ದಿನದಂದು ಅವಳನ್ನು ಹೇಗೆ ಸಂತಸಪಡಿಸಬೇಕು? ಅವಳಿಗೆ ಏನು ಕೊಡಬೇಕು? ಎಂಬ ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ.ಆ ದಿನದಂದು ಮಾತ್ರ ಏಕೆ ಅಂತಹ ಆಲೋಚನೆಗಳು ಮೂಡುತ್ತವೆ? ಪ್ರತಿ ದಿನ ಅಮ್ಮನನ್ನು ಕಾಳಜಿಯಿಂದ ಏಕೆ ನೋಡಬಾರದು? ಎಲ್ಲಾ ದಿನಗಳು ಅಮ್ಮನ ದಿನ ಏಕಾಗಬಾರದು, ಅಲ್ಲವೇ? ಅದೇ ನೋಡಿ ವಿಪರ್ಯಾಸ.! ಅಂದು ಮಾತ್ರ ನಮಗೆ ಅವಳ ಮೇಲೆ ಎಲ್ಲಿಲ್ಲದ ಪ್ರೀತಿ, ಅವಳಿಗೆ ಮೆಚ್ಚುವಂತಹ ಕೊಡುಗೆಗಳು ! ಅಬ್ಬಾ ಬೇಡ, ಅಂದು ಅಮ್ಮನನ್ನು, ‘ಅಮ್ಮಾ ನೀನು ಏನೂ ಮಾಡಬೇಡ, ಇಂದು ಹಾಯಾಗಿ ಕುಳಿತುಕೋ’ ಎಂದು ಮನೆಯಲ್ಲಿ ಮಕ್ಕಳು ಇನ್ನಿಲ್ಲದ ಮಾತುಗಳಿಂದ ಅವಳನ್ನು ಹೊಗಳಿ ಅಟ್ಟಕ್ಕೇರಿಸುತ್ತಾರೆ. ಈಗ ಹೇಳಿ, ಇಂತಹ ಕಾಳಜಿ ಪ್ರತಿ ದಿನ ಮಕ್ಕಳು ಆ ತಾಯಿಯ ಮೇಲೆ ತೋರಿಸಿದರೆ ಆ ಮಹಾ ತಾಯಿ ಎಷ್ಟು ಸಂತಸ ಪಡುತ್ತಾಳೆ ಗೊತ್ತೆ! ಆಗ ಪ್ರತಿದಿನ ಅಮ್ಮನ ದಿನವೇ ಆಗಿರುತ್ತದೆ. ಅದಕ್ಕೆಂದು ಮೀಸಲಿಡುವ ದಿನವೇ ಆಗಬೇಕಾಗಿಲ್ಲ ಎಂದು ಹೇಳಬಹುದು.
ಕೊನೆಯದಾಗಿ ಹೇಳುವುದಾದರೆ ಅಮ್ಮ, ಒಂದು ಮಗುವಿಗೆ ತಾಯಿಯಾಗಿ, ಗುರುವಾಗಿ ಮತ್ತು ಸ್ನೇಹಿತೆಯಾಗಿ ಆ ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಪಾತ್ರಳಾಗುತ್ತಾಳೆ ಎನ್ನುವ ಲೋಕಾರೂಢಿನೂ ಹೌದು ಹಾಗೆಯೇ ನಿಜವೊ ಹೌದು.ಸದಾ ನನ್ನೊಂದಿಗೆ ಇರುವ ದೇವರಿಗೆ ಸಿಗದ ಮಾತೃ ಹೃದಯದ ನನ್ನ ಅಮ್ಮನಿಗೆ ಮತ್ತೊಮ್ಮೆ ತಾಯಂದಿರ ದಿನದ ಶುಭಾಶಯಗಳು.
♦ ಬಸವರಾಜ ಎಮ್ ಯರಗುಪ್ಪಿ
ಸಾ.ಪೊ ರಾಮಗೇರಿ. ತಾಲ್ಲೂಕು ಲಕ್ಷ್ಮೇಶ್ವರ. ಜಿಲ್ಲಾ ಗದಗ
ಮಿಂಚಂಚೆ [email protected]
ದೂರವಾಣಿ 9742193758.