ತಾಯಿ ದುರ್ಗಾದೇವಿ ನಮ್ಮೆಲ್ಲರನ್ನು ರಕ್ಷಿಸಲಿ: ಶಾಸಕ ನಾರಾ ಭರತ್ ರೆಡ್ಡಿ

Ravi Talawar
ತಾಯಿ ದುರ್ಗಾದೇವಿ ನಮ್ಮೆಲ್ಲರನ್ನು ರಕ್ಷಿಸಲಿ: ಶಾಸಕ ನಾರಾ ಭರತ್ ರೆಡ್ಡಿ
WhatsApp Group Join Now
Telegram Group Join Now
ಬಳ್ಳಾರಿ, ಸೆ.23. ಬೇಡಿದ ವರವನ್ನು ನೀಡುವ ತಾಯಿ ಕನಕದುರ್ಗಮ್ಮ ನಮ್ಮೆಲ್ಲರನ್ನು ರಕ್ಷಿಸಲಿ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.ಬಳ್ಳಾರಿ ನಗರದ ಶ್ರೀಕನಕ ದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ಹಿಂದೂ ಧಾರ್ಮಿಕ ದತ್ತಿ ಹಾಗೂ ಮುಜರಾಯಿ ಇಲಾಖೆ ಮತ್ತು ಜಿಲ್ಲಾಡಳಿತ ವತಿಯಿಂದ ಏರ್ಪಡಿಸಿದ್ದ ದಸರಾ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಯಿಯ ಆಶೀರ್ವಾದದಿಂದಲೇ ನಮ್ಮ ಕುಟುಂಬ ಏಳಿಗೆ ಆಗಿದೆ, ಅಂತಹ ಕುಟುಂಬದ ಒಬ್ಬ ಸದಸ್ಯನಾದ ನಾನು ತಾಯಿಯ 9 ದಿನಗಳ ನವರಾತ್ರಿ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿರುವುದಕ್ಕೆ ತಾಯಿಯ ಆಶೀರ್ವಾದವೇ ಕಾರಣ, ಇದು ನನ್ನ ಪುಣ್ಯ ಎಂದರು.
ನಾನು ಶಾಸಕ ಎಂಬ ಅಹಂ ನನಗಿಲ್ಲ, ತಾಯಿ ಕನಕದುರ್ಗಮ್ಮ ದೇವಿಯ ಆಶೀರ್ವಾದದಿಂದ ಬೆಳೆದ ನಗರಕ್ಕೆ ಒಬ್ಬ ಸೇವಕ ಎಂಬುದು ನನ್ನ ಭಾವನೆ, ಎಲ್ಲ ಸಂದರ್ಭಗಳಲ್ಲೂ ನಾನು ಕನಕದುರ್ಗಮ್ಮ ತಾಯಿಯನ್ನು ನೆನೆಯುತ್ತೇನೆ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಈ ಹಿಂದೆ ಬರ ಬಂದ ಸಂದರ್ಭ ನಾವು ದೇವಸ್ಥಾನದಲ್ಲಿ ವಿಶೇಷ ಪೂಜೆ ಏರ್ಪಡಿಸಿದ್ದೆವು, ಪೂಜೆ ಸಲ್ಲಿಸಿದ ಕೆಲವೇ ದಿನಗಳಲ್ಲಿ ಸಮೃದ್ಧ ಮಳೆ ಬಂದಿತು ಎಂದರು.
ಕನಕದುರ್ಗಮ್ಮ ದೇವಿಯ ಸಿಡಿ ಬಂಡಿ ಉತ್ಸವ ವೇಳೆ ನಗರದ ಎಲ್ಲ  ಜಾತಿ-ಧರ್ಮದವರು ಪಾಲ್ಗೊಳ್ಳುತ್ತಾರೆ, ಜಿಲ್ಲೆಯ ಸರ್ವ ಜನಾಂಗದವರ ಮೇಲೆ ಕನಕದುರ್ಗಮ್ಮ ದೇವಿಯ ಕೃಪೆ ಇದೆ ಎಂದು ದೇವಸ್ಥಾನದ ಸೌಹಾರ್ದ ಪರಂಪರೆಯನ್ನು ನೆನೆದರು.
ಕಾರ್ಯಕ್ರಮದಲ್ಲಿ ಭಾಗ ವಹಿಸಿ ಮಾತನಾಡಿದ ನೂತನ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ; ಬಳ್ಳಾರಿ ಜಿಲ್ಲೆ ರಾಜ್ಯದಲ್ಲಿ ಮಹತ್ವದ ಜಿಲ್ಲೆ, ಈ ಜಿಲ್ಲೆಯಲ್ಲಿ ಸೇವೆ ಮಾಡುವುದು ನನ್ನ ಪುಣ್ಯ, ತಾಯಿ ಕನಕದುರ್ಗಮ್ಮ ನಮ್ಮ ಜಿಲ್ಲೆಯ, ನಾಡಿನ ಜನರಿಗೆ ಸುಖ ಸಮೃದ್ಧಿ ಸಂಪತ್ತು ಸಂಭ್ರಮವನ್ನು ಕರುಣಿಸಲಿ ಎಂದು ಹಾರೈಸಿದರು.
ಇದಕ್ಕೂ ಮುನ್ನ ಶಾಸಕರಾದಿಯಾಗಿ ಜಿಲ್ಲಾಡಳಿತದ ವತಿಯಿಂದ ಕನಕದುರ್ಗಮ್ಮ ದೇವಿಗೆ ಪೂಜೆ ಸಲ್ಲಿಸಲಾಯಿತು. ತದ ನಂತರ ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಮೇಯರ್ ಮುಲ್ಲಂಗಿ ನಂದೀಶ್, ಎಡಿಸಿ ಜುಬೇರ್ ಅಹ್ಮದ್, ಮುಜರಾಯಿ ಇಲಾಖೆಯ ಇಓ ಹನುಮಂತಪ್ಪ, ಎಸಿ ಪ್ರಮೋದ್, ಪಾಲಿಕೆಯ ಸದಸ್ಯರಾದ ಪಿ.ಗಾದೆಪ್ಪ, ಹನುಮಂತಪ್ಪ ಹಾಗೂ ರಾಮಾಂಜನೇಯ ಸೇರಿದಂತೆ ಹಲವರು ಹಾಜರಿದ್ದರು.
WhatsApp Group Join Now
Telegram Group Join Now
Share This Article