ರುದ್ರಪ್ರಯಾಗ: ಬುಧವಾರ ರಾತ್ರಿ ರುದ್ರಪ್ರಯಾಗ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಮಾರ್ಗವು ತೀವ್ರವಾಗಿ ಹಾನಿಯಾಗಿದ್ದು, ಇಲ್ಲಿ ಸಿಲುಕಿರುವ ಜನರನ್ನು ಸ್ಥಳಾಂತರಿಸಲು ರಕ್ಷಣಾ ಕಾರ್ಯ ನಡೆಯುತ್ತಿದೆ.
ಉತ್ತರಾಖಂಡ ಪೊಲೀಸ್ ಮಾಹಿತಿ ಪ್ರಕಾರ, ಶ್ರೀ ಕೇದಾರನಾಥ ಧಾಮ ಯಾತ್ರಾ ಮಾರ್ಗದಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯ ಮುಂದುವರೆದಿದೆ. ಹೆಲಿಕಾಪ್ಟರ್ ಮೂಲಕ 737 ಜನರನ್ನು ರಕ್ಷಿಸಲಾಗಿದೆ. ಗುರುವಾರದ ವೇಳೆಗೆ ಪಡೆಗಳು ಕನಿಷ್ಠ 2,670 ಜನರನ್ನು ಸೋನ್‌ಪ್ರಯಾಗಕ್ಕೆ ಕರೆದೊಯ್ಯಲಾಯಿತು. ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್, ಡಿಡಿಆರ್‌ಎಫ್, ಜಿಲ್ಲಾ ಪೊಲೀಸ್ ಮತ್ತು ಆಡಳಿತ ತಂಡಗಳು ನಿಸ್ವಾರ್ಥವಾಗಿ ಭಕ್ತರಿಗೆ ಸಹಾಯ ಮಾಡುತ್ತಿವೆ” ಎಂದು ಉತ್ತರಾಖಂಡ್ ಪೊಲೀಸ ಇಲಾಖೆ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಬರೆಯಲಾಗಿದೆ.
ಇದಕ್ಕೂ ಮುನ್ನ, ಉತ್ತರಾಖಂಡದ ಪೊಲೀಸ್ ಮಹಾನಿರ್ದೇಶಕ ಅಭಿನವ್ ಕುಮಾರ್ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಭಾರಿ ಮಳೆಯ ನಂತರ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳ ಕುರಿತು ಮಾಹಿತಿ ನೀಡಿದರು. ರಾಜ್ಯದ ಜನರು ಮತ್ತು ಪ್ರಯಾಣಿಕರು ಜಾಗರೂಕರಾಗಿರಿ ಮತ್ತು ಅಧಿಕಾರಿಗಳ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಿದರು.
ತೆಹ್ರಿ ಮತ್ತು ರುದ್ರಪ್ರಯಾಗ ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಕೇದಾರನಾಥ ಯಾತ್ರೆಯನ್ನು ಎರಡು ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ. ಯಮುನೋತ್ರಿ ಮತ್ತು ಕೇದಾರನಾಥದ ಚಾರಣ ಮಾರ್ಗಗಳಲ್ಲಿ ಯಾತ್ರಾರ್ಥಿಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ರಾಜ್ಯ ಸರ್ಕಾರವು ಸಿಲುಕಿರುವ ಜನರನ್ನು ಸ್ಥಳಾಂತರಿಸಲು ವಾಯುಪಡೆಯ ಸಹಾಯವನ್ನು ತೆಗೆದುಕೊಳ್ಳಲಾಗಿದೆ. 12 ಎನ್‌ಡಿಆರ್‌ಎಫ್ ಮತ್ತು 60 ಎಸ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ ಎಂದು ಉತ್ತರಾಖಂಡ ಡಿಜಿಪಿ ಅಭಿನವ್ ಕುಮಾರ್ ಮಾಹಿತಿ ನೀಡಿದ್ದಾರೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ತೆಹ್ರಿ ಮತ್ತು ರುದ್ರಪ್ರಯಾಗದಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ರಾಜ್ಯದ ವಿವಿಧ ಭಾಗಗಳಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ರಸ್ತೆಗಳು, ಕಾಲು ಸೇತುವೆಗಳು, ವಿದ್ಯುತ್ ಮತ್ತು ಕುಡಿಯುವ ನೀರಿನ ಪೈಪ್ಲೈನ್ ಮತ್ತು ಕೃಷಿ ಜಮೀನುಗಳು ಭಾರಿ ಹಾನಿಯಾಗಿವೆ.
ಅನಾಹುತದ ಮಾಹಿತಿ ಬಂದ ತಕ್ಷಣವೇ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು, ರಾತ್ರಿಯಿಂದಲೇ ಕಾರ್ಯಪ್ರವೃತ್ತರಾಗಿ ರಾಜ್ಯ ವಿಪತ್ತು ಕಾರ್ಯಾಚರಣೆ ಕೇಂದ್ರಕ್ಕೆ ರಾತ್ರಿಯೇ ಆಗಮಿಸಿ ರಾಜ್ಯಾದ್ಯಂತ ಸುರಿದ ಭಾರಿ ಮಳೆಯಿಂದ ಆಗಿರುವ ಹಾನಿಯ ಕುರಿತು ಮಾಹಿತಿ ಪಡೆದರು. ಸದಾ ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೇದಾರನಾಥ ಪಾದಚಾರಿ ಮಾರ್ಗದಲ್ಲಿ ಹಲವೆಡೆ ಭೂಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಕೇದಾರನಾಥ ಯಾತ್ರೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.