ನೈರೋಬಿ,25: ಕೀನ್ಯಾದಲ್ಲಿ ಭಾರಿ ಮಳೆಯಿದ ಪ್ರವಾಹ ಉಂಟಾಗಿ 38ಕ್ಕೂ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ ಎಂದು ಕೀನ್ಯಾ ರೆಡ್ಕ್ರಾಸ್ ಸೊಸೈಟಿ ತಿಳಿಸಿದೆ. ಪ್ರವಾಹದಿಂದಾಗಿ ಕೀನ್ಯಾದ ಅರ್ಧದಷ್ಟು ಭಾಗವು ಮುಳುಗಡೆಯಾಗಿದ್ದು, ಇದರಿಂದ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಅಲ್ಲದೇ ಅನೇಕ ಜನರು ನಾಪತ್ತೆಯಾಗಿದ್ದು, ಈ ಪೈಕಿ 180 ಜನರನ್ನು ರಕ್ಷಣೆ ಮಾಡಲಾಗಿದೆ. ಸುಮಾರು 11 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಸ್ಥಳೀಯ ಸುದ್ದಿ ಸಂಸ್ಥೆ ವರದಿ ಪ್ರಕಾರ, ಕೀನ್ಯಾದ ರಾಜಧಾನಿ ನೈರೋಬಿಯಲ್ಲೂ ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಒರ್ವ ವ್ಯಕ್ತಿ ಸಾವನ್ನಪ್ಪಿದ್ದು, ಆರು ಜನರು ಕಾಣೆಯಾಗಿದ್ದಾರೆ. ಅನೇಕ ಕಡೆ ರಸ್ತೆ ಸಂಪರ್ಕಗಳು ಕಡಿತಗೊಂಡಿದ್ದು ಕೆಲವೆಡೆ ರಸ್ತೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ತೀವ್ರ ಪ್ರವಾಹದಿಂದಾಗಿ ಅನೇಕ ಜನರು ಮನೆಗಳಲ್ಲಿ ಸಿಲುಕಿದ್ದು ರಕ್ಷಣೆ ಕಾರ್ಯ ಮುಂದುವರೆದಿದೆ. ಒಟ್ಟು 110,000 ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ. ಕಳೆದ ಕೆಲ ದಿನಗಳಿಂದ ಕೀನ್ಯಾದಲ್ಲಿ ಬಿಟ್ಟೂ ಬಿಡದೇ ಮಳೆ ಸುರಿಯುತ್ತಿದ್ದು ಕಳೆದ ವಾರ ದೇಶದ ಹಲವು ಭಾಗಗಳಲ್ಲಿ 100 ಮಿ.ಮೀ.ಗೂ ಹೆಚ್ಚು ಮಳೆಯಾಗಿತ್ತು. ಈ ವೇಳೆ ಆರು ಜನ ಸಾವನ್ನಪ್ಪಿದ್ದರು.
ಸೇತುವೆ ಮುಳುಗಡೆ: ನೈರೋಬಿಯಾದ ಅಥಿ ನದಿ ಸೇತುವೆ ಪ್ರವಾಹಕ್ಕೆ ಸಿಲುಕಿ ಮುಳುಗಡೆಯಾಗಿದ್ದು ಪ್ರಮುಖ ನಗರಗಳ ರಸ್ತೆ ಸಂಪರ್ಕ ಕಡೆತಗೊಂಡಿದೆ. ಇದರಿಂದ ಸಾವಿರಾರು ಉದ್ಯೋಗಿಗಳು, ವ್ಯಾಪಾರಸ್ಥರು ಸೇತುವೆ ದಾಟಲಾಗದೇ ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ. ಇವರೆಲ್ಲ ರಕ್ಷಣೆಯ ನಿರೀಕ್ಷೆಯಲ್ಲಿದ್ದಾರೆ. ರಕ್ಷಣಾ ಕಾರ್ಯಗಳನ್ನು ಅಲ್ಲಿನ ಸರ್ಕಾರ ಮಾಡುತ್ತಿದೆ.
ಭೀಕರ ಪ್ರವಾಹದಿಂದ ಸುಮಾರು 27,716 ಎಕರೆಗಳಷ್ಟು ಬೆಳೆಗಳು ನಾಶವಾಗಿದ್ದು, 5,000ಕ್ಕೂ ಹೆಚ್ಚಿನ ಜಾನುವಾರುಗಳು ಸಾವನ್ನಪ್ಪಿವೆ ಎಂದು ವರಿಯಾಗಿದೆ.
ವಿಪತ್ತು ಕಾರ್ಯಾಚರಣೆಯ ಮುಖ್ಯಸ್ಥ ವೆನಂತ್ ನ್ಧಿಗಿಲಾ, ” ಕಳೆದ ವಾರದಿಂದ ಜೋರು ಮಳೆಯಾಗುತ್ತಿದ್ದು ಪ್ರವಾಹ ಉಂಟಾಗಿದೆ. ಈಗಾಗಲೇ ಅನೇಕ ಜನರು ಸಾವನ್ನಪ್ಪಿದ್ದಾರೆ. ಸದ್ಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಹಲಾವರು ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು ಸಮಸ್ಯೆ ಉಂಟಾಗಿದೆ. ನಮ್ಮ ತಂಡದೊಂದಿಗೆ ಸಾಧ್ಯವಾದಷ್ಟು ಪ್ರಯತ್ನ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.