ಅಥಣಿ : ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಶಿವಾನಂದ ಭಾರತಿ ಪದವಿಪೂರ್ವ ಮಹಾವಿದ್ಯಾಲಯದ ಸಂಯುಕ್ತ ಆಶ್ರಯ ದಲ್ಲಿ ಬರುವ ದಿ. 6 ಮತ್ತು 7 ರಂದು ಅಥಣಿ ತಾಲೂಕಾ ಮಟ್ಟದ ಪದವಿಪೂರ್ವ ಮಹಾವಿದ್ಯಾಲಯಗಳ ಪ್ರಸಕ್ತ ಸಾಲಿನ ಕ್ರೀಡಾಕೂಟಗಳು ಪಟ್ಟಣದ ಭೋಜರಾಜ ಕ್ರೀಡಾಂಗಣದಲ್ಲಿ ಜರುಗಲಿವೆ ಎಂದು ಶಿವಾನಂದ ಭಾರತಿ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದ ಅಧ್ಯಕ್ಷ ಬಸವರಾಜ ತೇಲಿಯವರು ಹೇಳಿದರು.
ಅವರು ಅಥಣಿ ಪಟ್ಟಣದಲ್ಲಿ ಕ್ರೀಡಾಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಪ್ರತಿವರ್ಷ ನಡೆಯುವ ಕ್ರೀಡಾಕೂಟಗಳು ತಾಲೂಕಿನ ಪದವಿ ಪೂರ್ವ ಕಾಲೇಜುಗಳ ಸಹಯೋಗದಲ್ಲಿ ಜರುಗುತ್ತವೆ. ಈ ವರ್ಷ ನಮ್ಮ ಕಾಲೇಜಿನ ಸಹಯೋಗ ಇರುವುದರಿಂದ ಇಲಾಖೆಯ ನಿಯಮದಂತೆ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ಕ್ರೀಡಾಕೂಟಗಳನ್ನು ಬರುವ ದಿ. 6 ರಂದು ಮುಂಜಾನೆ 10 ಗಂಟೆಗೆ ಶಾಸಕರಾದ ಲಕ್ಷ್ಮಣ ಸವದಿ ಅವರು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಕಾಗವಾಡದ ಶಾಸಕರಾದ ರಾಜು ಕಾಗೆ, ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಪರಪ್ಪ ಸವದಿ, ಜಾದವ್ ಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ರಾಮ ಕುಲಕರ್ಣಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರಾದ ಪಾಂಡುರಂಗ ಭಂಡಾರಿ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಮಹಾವಿದ್ಯಾಲಯ ದ ಪ್ರಾಚಾರ್ಯ ಎಸ್. ಜೆ. ಕಮತಗಿ ಮಾತನಾಡಿ ತಾಲೂಕಿನ 38 ಮಹಾವಿದ್ಯಾಲಯಗಳ ಸು. 3000 ಕ್ಕೂ ಅಧಿಕ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಕ್ರೀಡಾಪಟುಗಳಿಗೆ ಬೇಕಾಗುವ ಕ್ರೀಡಾ ಸಾಮಗ್ರಿಗಳನ್ನು, ಶುದ್ಧ ಕುಡಿಯುವ ನೀರು,ಉಪಹಾರ, ಊಟ, ಹಾಗೂ ವೈದ್ಯಕೀಯ, ಪೊಲೀಸ್ ಬಂದೋ ಬಸ್ತ್, ಅಗ್ನಿಶಾಮಕದಳ ಸೇರಿದಂತೆ ಸಕಲ ವ್ಯವಸ್ಥೆ ಕೈಗೊಳ್ಳಲಾಗಿದೆ. ಈ ವೇಳೆ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ವಿವಿಧ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳನ್ನು ಸತ್ಕರಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಕಾಶ ತೇಲಿ, ಬಸವರಾಜ ಸಾವಡಕರ, ವಿ ಸಿ ಹಿರೇಮಠ , ಎ ಎಸ್ ಖಾರೆ, ಸಚಿನ ಚಂಡಕಿ, ಎಸ್ ಬಿ ಘಾಳಿ ಉಪಸ್ಥಿತರಿದ್ದರು.